ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 81ರಷ್ಟು ಹೊಸ ಪ್ರಕರಣ ಪತ್ತೆ: ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ಕೇಂದ್ರ ಸೂಚನೆ

24 ಗಂಟೆಗಳಲ್ಲಿ 7,240 ಹೊಸ ಸೋಂಕಿತರು
Last Updated 9 ಜೂನ್ 2022, 19:41 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವ ಪ್ರದೇಶಗಳಲ್ಲಿ ಸೋಂಕು ಪತ್ತೆ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಗುರುವಾರ ಸೂಚನೆ ನೀಡಿದೆ.ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದರಿಂದ ರೋಗ ಹರಡುವಿಕೆಯ ಮಟ್ಟವನ್ನುಆರಂಭದಲ್ಲೇ ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಕೋವಿಡ್ ನಿಯಂತ್ರಿಸಲು ಐದು ಹಂತದ ಕ್ರಮಗಳಾದ, ಪರೀಕ್ಷೆ–ಪತ್ತೆ–ಚಿಕಿತ್ಸೆ–ಲಸಿಕೆ–ಮಾರ್ಗಸೂಚಿ ಪಾಲನೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದೆ. ಮೂರ್ನಾಲ್ಕು ತಿಂಗಳಿನಿಂದ ದೇಶದ ಬಹುತೇಕ ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದವು. ಆದರೆ ಎರಡು ವಾರಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಜೂನ್ 8ಕ್ಕೆ ಕೊನೆಗೊಂಡ ವಾರದಲ್ಲಿ ನಿತ್ಯ ಸರಾಸರಿ 4,207 ಹೊಸ ಪ್ರಕರಣಗಳು ವರದಿಯಾಗಿದ್ದವು. ಜೂನ್ 1ಕ್ಕೆ ಕೊನೆಗೊಂಡ ವಾರದಲ್ಲಿ ನಿತ್ಯ ಸರಾಸರಿ 2,663 ಹೊಸ ಪ್ರಕರಣ ಪತ್ತೆಯಾಗಿದ್ದವು ಎಂಬ ಅಂಶಕ್ಕೆ ಪತ್ರದಲ್ಲಿ ಒತ್ತು ನೀಡಲಾಗಿದೆ. ವಾರದ ಕೋವಿಡ್‌ ದೃಢಪಡುವಿಕೆ ದರ ಶೇ 0.63ರಿಂದ (ಜೂನ್ 1) ಶೇ 1.12ಕ್ಕೆ (ಜೂನ್ 8) ಏರಿಕೆಯಾಗಿದೆ.

ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಸರಾಸರಿ ಎಷ್ಟು ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಹಾಗೂ ಈ ಪರೀಕ್ಷೆಗಳ ಪೈಕಿ ಆರ್‌ಟಿ–ಪಿಸಿಆರ್ ಪಾಲು ಎಷ್ಟು ಎಂಬುದರ ಮೇಲೆ ರಾಜ್ಯಗಳು ನಿಗಾ ವಹಿಸಬೇಕು ಎಂದು ಸರ್ಕಾರ ಸೂಚಿಸಿದೆ. ಇದರಿಂದಾಗಿ, ಅಗತ್ಯವಿರುವ ಕಡೆ ಮುಂಜಾಗ್ರತಾ ಕ್ರಮ ಕೈಕೊಳ್ಳಲು ಅನುಕೂಲವಾಗುತ್ತದೆ ಎಂದು ವಿವರಿಸಿದೆ.

24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 7,240 ಹೊಸ ಸೋಂಕಿತರು ಕಂಡುಬಂದಿದ್ದಾರೆ. ಇದರಲ್ಲಿ ಶೇ 81ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಕೇರಳ, ದೆಹಲಿ ಮತ್ತು ಕರ್ನಾಟಕದಲ್ಲಿ ವರದಿಯಾಗಿವೆ.

ಮಹಾರಾಷ್ಟ್ರ, ದೆಹಲಿಯಲ್ಲಿ ಪ್ರಕರಣ ಏರಿಕೆ: ಮಹಾರಾಷ್ಟ್ರದಲ್ಲಿ 24 ಗಂಟೆಗಳ ಅವಧಿಯಲ್ಲಿ 2,813 ಪ್ರಕರಣಗಳು ವರದಿಯಾಗಿದ್ದು, ಇದು ನಾಲ್ಕು ತಿಂಗಳಲ್ಲೇ ಅಧಿಕ. ಕೋವಿಡ್‌ನಿಂದ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ11,571ಕ್ಕೆ ಏರಿಕೆಯಾಗಿದೆ. ಮುಂಬೈ ನಗರವೊಂದರಲ್ಲೇ 1,702 ಜನರಿಗೆ ಸೋಂಕು ದೃಢಪಟ್ಟಿದೆ.

ದೆಹಲಿಯಲ್ಲಿ 622 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ದೃಢಪಡುವಿಕೆ ದರವು ಶೇ 3.17ಕ್ಕೆ ಹೆಚ್ಚಳವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ1,774ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಕೋವಿಡ್ ರೋಗಿಗಳಿಗಾಗಿ 9,630 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT