ತಿರುವನಂತಪುರ/ ಹೈದರಾಬಾದ್/ಚೆನ್ನೈ: ಬಿಜೆಪಿಯೇತರ ಸರ್ಕಾರಗಳಿರುವ ದಕ್ಷಿಣ ಭಾರತ ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಆಡಳಿತಾರೂಢ ಪಕ್ಷಗಳು ಹಾಗೂ ರಾಜ್ಯಪಾಲರ ನಡುವಣ ತಿಕ್ಕಾಟ ತೀವ್ರತೆ ಪಡೆದಿದೆ.ಕೇಂದ್ರವು ನೇಮಕ ಮಾಡಿರುವ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಈ ರಾಜ್ಯಗಳ ಆಡಳಿತಾರೂಢ ಪಕ್ಷಗಳು ಆರೋಪಿಸಿವೆ.
ತೆಲಂಗಾಣ ರಾಜ್ಯಪಾಲರಾದ ತಮಿಳ್‌ಸೈ ಸೌಂದರರಾಜನ್ ವಿರುದ್ಧ ಪ್ರತಿಭಟನೆ ನಡೆದಿದೆ.ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಆಡಳಿತಾರೂಢ ಡಿಎಂಕೆ ಸಂಸದರ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಸಹಿ ಹಾಕುವಂತೆ ಎಲ್ಲಾ ಪಕ್ಷಗಳ ಸಂಸದರಲ್ಲೂ ಮನವಿ ಮಾಡಿದೆ.
ಕೇರಳ ರಾಜ್ಯಪಾಲಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಆಡಳಿತಾರೂಢಎಲ್‌ಡಿಎಫ್‌ನ ಮಿತ್ರಪಕ್ಷಗಳು ಮಂಗಳವಾರ ಪ್ರತಿಭಟನೆ ತೀವ್ರಗೊಳಿಸಿವೆ.
ಇದರ ಬೆನ್ನಲ್ಲೇ ರಾಜ್ಯಪಾಲರ ಕಾನೂನು ಸಲಹೆಗಾರ ತಮ್ಮ ಸ್ಥಾನಕ್ಕೆ ಮಂಗಳವಾರ ಸಂಜೆ ರಾಜೀನಾಮೆ ನೀಡಿದ್ದಾರೆ.
ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕ ಸಂಬಂಧ ಕೇರಳ ವಿಧಾನಮಂಡಲವು ಅನುಮೋದಿಸುವ ಮಸೂದೆಗೆ ರಾಜ್ಯಪಾಲ ಆರಿಫ್ ಅವರು ಇನ್ನೂ ಅಂಕಿತ ಹಾಕಿಲ್ಲ. ಹಲವು ಮಸೂದೆಗಳಿಗೆ ಅವರಿನ್ನೂ ಅಂಕಿತ ಹಾಕಿಲ್ಲ ಎಂದು ಆಡಳಿತಾರೂಢ ಎಲ್‌ಡಿಎಫ್ ಆರೋಪಿಸಿದೆ. ರಾಜ್ಯಪಾಲರ ಈ ನಡೆಯನ್ನು ಖಂಡಿಸಿ ಆಡಳಿತ ಮೈತ್ರಿಕೂಟದ ಪಕ್ಷವಾದ ಸಿಪಿಎಂನ ಸದಸ್ಯರು, ರಾಜ್ಯಪಾಲರ ವಿರುದ್ಧ ಚಳವಳಿ ಆರಂಭಿಸಿದ್ದಾರೆ.
ರಾಜ್ಯಪಾಲರನ್ನು ಕೇಂದ್ರವು ವಾಪಸ್ ಕರೆಸಿಕೊಳ್ಳುವವರೆಗೂ ಪ್ರತಿಭಟನೆ ನಡೆಸಲು ಎಲ್‌ಡಿಎಫ್ ಮಿತ್ರಪಕ್ಷಗಳು ನಿರ್ಧರಿಸಿವೆ. ಇದರ ಭಾಗವಾಗಿ ರಾಜ್ಯಪಾಲರ ವಿರುದ್ಧ ಕರಪತ್ರ ಹೊರಡಿಸಲಾಗಿದೆ. ರಾಜ್ಯದಾದ್ಯಂತ ಮನೆ–ಮನೆಗೆ ತೆರಳಿ ಕರಪತ್ರ ಹಂಚಲಾಗುತ್ತಿದೆ. ರಾಜಭವನದ ಮುಂದೆ ಇದೇ 15ರಂದು ಭಾರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಪ್ರತಿಭಟನೆ ಬೆಂಬಲಿಸುವಂತೆ ವಿರೋಧ ಪಕ್ಷಗಳಿಗೂ ಆಹ್ವಾನ ನೀಡಲಾಗಿದೆ.
‘ರಾಜ್ಯಪಾಲರು ಸಂವಿಧಾನಕ್ಕೆ ಬದ್ಧವಾಗಿರಬೇಕು. ಬದಲಿಗೆ ನಮ್ಮ ರಾಜ್ಯಪಾಲರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹೇಳಿದಂತೆ ಕೇಳುತ್ತಿದ್ದಾರೆ. ಇದನ್ನು ಎದುರಿಸಲು ಜನರ ಬೆಂಬಲ ಅಗತ್ಯ. ಹೀಗಾಗಿಯೇ ಕರಪತ್ರ ಹಂಚಿ, ಪ್ರತಿಭಟನೆಗೆ ಬೆಂಬಲ ನೀಡುವಂತೆ ಜನರಿಗೆ ಕರೆ ನೀಡಲಾಗುತ್ತಿದೆ. ರಾಜಭವನದ ಮುಂದೆ ನಡೆಯುವ ಪ್ರತಿಭಟನೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲು ನಿರ್ಧರಿಸಲಾಗಿದೆ’ ಎಂದು ಸಿಪಿಎಂ ಹೇಳಿದೆ.
ಪ್ರತಿಭಟನೆ ತೀವ್ರತೆ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲೇ ರಾಜಭವನದ ಅಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಕೇರಳ ರಾಜ್ಯಪಾಲರ ಕಾನೂನು ಸಲಹೆಗಾರ ಕೆ.ಜಾಜು ಬಾಬು ಮತ್ತು ವಿಶ್ವವಿದ್ಯಾಲಯ ಕುಲಪತಿಗಳ ಸ್ಥಾಯಿ ಸಮಿತಿಯ ಸದಸ್ಯತ್ವಕ್ಕೆ ಎಂ.ಯು.ವಿಜಯಲಕ್ಷ್ಮಿ ಅವರು ರಾಜೀನಾಮೆ ನೀಡಿದ್ದಾರೆ. ‘ನನ್ನ ಹುದ್ದೆಯನ್ನು ತೆರವು ಮಾಡುವ ಸ್ಥಿತಿ ಈಗ ಬಂದೊದಗಿದೆ. ಕಾರಣ ನಿಮಗೂ ಗೊತ್ತಿದೆ’ ಎಂದು ಬಾಬು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಪತ್ರಕರ್ತರ ಪ್ರತಿಭಟನೆ
ಕೇರಳ ರಾಜ್ಯಪಾಲರು ತಮ್ಮ ಪತ್ರಿಕಾಗೋಷ್ಠಿಯಿಂದ ಇಬ್ಬರು ವರದಿಗಾರರನ್ನು ಹೊರಗಟ್ಟಿದ್ದನ್ನು ಖಂಡಿಸಿ, ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ಮಂಗಳವಾರ ಪ್ರತಿಭಟನೆ ನಡೆಸಿತು.
ಸೋಮವಾರ ನಡೆದಿದ್ದ ಪತ್ರಿಕಾಗೋಷ್ಠಿಯಿಂದ ಹೊರನಡೆಯುವಂತೆ ಕೈರಾಲಿ ಟಿ.ವಿ. ಮತ್ತು ಮೀಡಿಯಾಒನ್ ವರದಿಗಾರರಿಗೆ ರಾಜ್ಯಪಾಲ ಆರಿಫ್ ಮಹೊಮ್ಮದ್ ಖಾನ್ ಅವರು ಹೇಳಿದ್ದರು. ಇದನ್ನು ಖಂಡಿಸಿ ಪತ್ರಕರ್ತರ ಸಂಘದ ಸದಸ್ಯರು ಮಂಗಳವಾರ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಪ್ರತಿಭಟನೆಯನ್ನು ಪ್ರಮುಖ ರಾಜಕೀಯ ಪಕ್ಷಗಳೂ ಬೆಂಬಲಿಸಿವೆ.
ಆಯ್ದ ಪತ್ರಕರ್ತರನ್ನು ಹೊರಗಟ್ಟಿದ್ದನ್ನು ಖಂಡಿಸಿ ಪತ್ರಕರ್ತರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ‘ಆಯ್ದ ಮಾಧ್ಯಮಗಳ ವರದಿಗಾರರ ಬಗ್ಗೆ ಇರುವ ಪೂರ್ವಗ್ರಹವನ್ನು ರಾಜ್ಯಪಾಲರು ಬಿಡಬೇಕು. ಪತ್ರಕರ್ತರು ಮುಕ್ತ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತಹ ವಾತಾವರಣ ಇರಬೇಕು’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
*
ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲದೇ ಇರುವ ರಾಜ್ಯಗಳಲ್ಲಿ ಬಿಜೆಪಿಯು ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯಗಳ ಅಧಿಕಾರ ಕಸಿದುಕೊಳ್ಳುತ್ತಿದೆ.
-ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.