ಗುರುವಾರ , ಮೇ 19, 2022
24 °C

ಆಂಧ್ರಪ್ರದೇಶ | ಕಾರ್ಖಾನೆಯಲ್ಲಿ ಸ್ಫೋಟ; 6 ಕಾರ್ಮಿಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಏಲೂರು, ಆಂಧ್ರಪ್ರದೇಶ: ಏಲೂರು ಜಿಲ್ಲೆಯ ಅಕ್ಕಿರೆಡ್ಡಿಗುಡೆಂನಲ್ಲಿ ಇರುವ ಪೊರಸ್‌ ಲ್ಯಾಬ್ಸ್‌ ಎಂಬ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 6 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ. ಇನ್ನು 12 ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅನಿಲ ಸೋರಿಕೆಯಿಂದ ರಿಯಾಕ್ಟರ್‌ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಐದು ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಒಬ್ಬ ಕಾರ್ಮಿಕ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯದಲ್ಲೇ ಅಸುನೀಗಿದ್ದಾನೆ. ಮೃತಪಟ್ಟ ಕಾರ್ಮಿಕರಲ್ಲಿ ನಾಲ್ವರು ಬಿಹಾರ ಮೂಲದವರಾದರೆ, ಇಬ್ಬರು ಆಂಧ್ರಪ್ರದೇಶದವರು.

ಸದ್ಯ ಗಂಭೀರವಾಗಿ ಗಾಯಗೊಂಡ 12 ಕಾ‌ರ್ಮಿಕರನ್ನು ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇವರಲ್ಲಿ ಕೆಲವರ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸ್ಫೋಟ ನಡೆದಾಗ ಕಾರ್ಖಾನೆಯಲ್ಲಿ 100ಕ್ಕೂ ಹೆಚ್ಚು ಜನರಿದ್ದರು ಎಂದು ಮೂಲಗಳು ತಿಳಿಸಿವೆ. 

ಘಟನೆ ನಡೆದ ಕೂಡಲೇ ಅಗ್ನಿ ಶಾಮಕ ದಳ ಹಾಗೂ ವಿಪತ್ತು ಪರಿಹಾರ ತಂಡಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಹಿರಿಯ ಪೊಲೀಸ್‌ ಅಧಿಕಾರಿಗಳು, ಜಿಲ್ಲೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಇನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ 25 ಲಕ್ಷ ₹ ಪರಿಹಾರ, ಗಂಭೀರವಾಗಿ ಗಾಯಗೊಂಡ ಕಾರ್ಮಿಕರಿಗೆ 5 ಲಕ್ಷ ₹ ಪರಿಹಾರ ಹಾಗೂ ಸಾಮಾನ್ಯ ಗಾಯಾಳುಗಳಿಗೆ 2 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ ಪೋರ್‌ ಲ್ಯಾಬ್ಸ್‌ ಕೂಡ 25 ಲಕ್ಷ ಪರಿಹಾರ ನೀಡುವುದಾಗಿ ಹೇಳಿದೆ.

ಕಾರ್ಖಾನೆ ಮುಚ್ಚಿಸಲು ಪ್ರತಿಭಟನೆ: ಘಟನೆ ನಡೆದ ಬೆನ್ನಲ್ಲೇ ಸುತ್ತಮುತ್ತಲ ಹಳ್ಳಿಗಳ ಜನ ಕಾರ್ಖಾನೆಯನ್ನು ಮುಚ್ಚುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಗ್ರಾಮಸ್ಥರು ಕಾರ್ಖಾನೆಯಿಂದ ಸುತ್ತಮುತ್ತ ಪ್ರದೇಶದ ಗಾಳಿ ಹಾಗೂ ನೀರು ಕಲುಷಿತವಾಗುತ್ತಿದೆ ಎಂದು ಆರೋಪಿಸಿದರು. ಪೋರಸ್‌ ಲ್ಯಾಬ್ಸ್‌ ಔಷಧಿಯಲ್ಲಿ ಬಳಕೆ ಮಾಡಲಾಗುವ ರಾಸಾಯನಿಕಗಳನ್ನು ತಯಾರಿಸುವ ಸಂಸ್ಥೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು