ಮುಂಬೈ: ಮಕ್ಕಳ ಕಳ್ಳಸಾಗಣೆ ಅತ್ಯಂತ ಗಂಭೀರ ಮತ್ತು ಘೋರ ಶೋಷಣೆಗಳಲ್ಲಿ ಒಂದಾಗಿದೆ. ಇದು ಮಗು ಮತ್ತು ಅದರ ಕುಟುಂಬದ ಮೇಲೆ ಪರಿಣಾಮ ಬೀರುವುದಲ್ಲದೆ, ಸಮಾಜದ ವ್ಯವಸ್ಥೆಗೂ ಧಕ್ಕೆ ಉಂಟು ಮಾಡುತ್ತದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಹತ್ತು ತಿಂಗಳ ಮಗು ಅಪಹರಣ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗೆ ಕೋರ್ಟ್ ಜಾಮೀನು ನಿರಾಕರಿಸಿದೆ.
2021ರ ಆಗಸ್ಟ್‌ನಲ್ಲಿ ಉಪನಗರ ಬಾಂದ್ರಾದ ಫುಟ್‌ಪಾತ್‌ನಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಅಪಹರಿಸಲಾಗಿತ್ತು. ಪೊಲೀಸರ ಪ್ರಕಾರ, ಆರೋಪಿ ಪರಂಡಮ್ ಗುಡೆಂಟಿ ಎಂಬಾತ ಮಗುವನ್ನು ತೆಲಂಗಾಣದ ಮಕ್ಕಳಿಲ್ಲದ ದಂಪತಿಗೆ ₹1.05 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ.
ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರ ಏಕಸದಸ್ಯ ಪೀಠವು ಫುಟ್‌ಪಾತ್ ನಿವಾಸಿಗಳು, ವಿಶೇಷವಾಗಿ ಬೀದಿ ಮಕ್ಕಳು ಸಮಾಜದ ಅತ್ಯಂತ ದುರ್ಬಲ ವರ್ಗದವರಾಗಿದ್ದು, ಶೋಷಣೆಗೆ ಒಳಗಾಗುತ್ತಾರೆ ಎಂದು ಹೇಳಿದೆ.
ಅಪರಾಧದ ಗಂಭೀರತೆ ಪರಿಗಣಿಸಿ ಆರೋಪಿಗೆ ಜಾಮೀನು ನೀಡುವುದಿಲ್ಲ ಎಂದು ಹೇಳಿದೆ.
ಗುಡೆಂಟಿ ವಿರುದ್ಧ ಕ್ರಿಮಿನಲ್ ಪಿತೂರಿ, ಅಪಹರಣ, ಅಕ್ರಮ ಬಂಧನ ಮತ್ತು ಕಳ್ಳಸಾಗಣೆ ಆರೋಪಗಳ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಸಲ್ಲಿಸಿದ ಮಾಹಿತಿ ಪ್ರಕಾರ ಗುಡೆಂಟಿ ಮಕ್ಕಳ ಅಪಹರಣ ಮತ್ತು ಮಾರಾಟದ ದಂಧೆಯಲ್ಲಿ ಭಾಗಿಯಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.