ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್ ಗಡಿಯಲ್ಲಿ ನಡೆಸುತ್ತಿರುವ ಸಮರಾಭ್ಯಾಸವನ್ನು ಮುಂದುವರಿಸಿದ ಚೀನಾ

Last Updated 9 ಆಗಸ್ಟ್ 2022, 4:54 IST
ಅಕ್ಷರ ಗಾತ್ರ

ಬೀಜಿಂಗ್: ಅಮೆರಿಕ ಜನಪ್ರತಿನಿಧಿಗಳ ಸಭೆಯ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ತೈಪೆಗೆ ಭೇಟಿ ನೀಡಿದ್ದಕ್ಕೆ ಪ್ರತೀಕಾರವಾಗಿ ತೈವಾನ್‌ ಗಡಿಯಲ್ಲಿ ನಡೆಸುತ್ತಿರುವ ಸಮರಾಭ್ಯಾಸವನ್ನು ಚೀನಾದ ಪಿಎಲ್ಎ ನಿಗದಿತ ನಾಲ್ಕು ದಿನಗಳ ನಂತರವೂ ಮುಂದುವರಿಸಿದೆ.

ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿಯ (ಪಿಎಲ್ಎ) ಸಾಗರೋತ್ತರ ವಿದ್ಯಮಾನದ ಉಸ್ತುವಾರಿ ಘಟಕ ತೈವಾನ್‌ ದ್ವೀಪ ವ್ಯಾಪ್ತಿಯ ಸಮುದ್ರ ವ್ಯಾಪ್ತಿಯಲ್ಲಿ ತಾಲೀಮು ಮುಂದುವರಿಯಲಿದೆ ಎಂದು ತಿಳಿಸಿದೆ.

ಚೀನಾವು ತನ್ನ ಭೌಗೋಳಿಕ ಭಾಗ ಎಂದೇ ಪ್ರತಿಪಾದಿಸುತ್ತಿರುವ ತೈಪೆಗೆ ಪೆಲೋಸಿ ಅವರು ಭೇಟಿ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಚೀನಾ ಬಳಿಕ ತಾಲೀಮು ಆರಂಭಿಸಿತ್ತು. ಪಿಎಲ್‌ಎ ತನ್ನ ಎಲ್ಲ ತುಕಡಿಗಳ ಜಂಟಿ ಸಮರಾಭ್ಯಾಸವನ್ನು ತೈವಾನ್‌ ಆಸುಪಾಸಿನಲ್ಲಿ ನಡೆಸಿತ್ತು.

ಸಮರಾಭ್ಯಾಸ ಮುಂದುವರಿಯಲಿದೆ ಎಂದು ಹೇಳಿರುವ ಪಿಎಲ್ಎ, ಸ್ಥಳದ ವಿವರವನ್ನು ಬಹಿರಂಗಪಡಿಸಿಲ್ಲ. ಜಲ ಮತ್ತು ವಾಯು ಮಾರ್ಗದ ಸಮರಾಭ್ಯಾಸವನ್ನು ಚೀನಾ ಈಗ ಮುಂದುವರಿಸಿದೆ ಎಂದು ಸ್ಥಳೀಯ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ಪಿಎಲ್ಎ ಕಮ್ಯಾಂಡ್ ಅವರು ಈ ಸಂಬಂಧ ನೀಡಿರುವ ಹೇಳಿಕೆಯಲ್ಲಿ ನಿಗದಿಯಂತೆ ಭಾನುವಾರವೂ ಸಮರಾಭ್ಯಾಸ ನಡೆದಿದೆ. ಭೂಮಿ ಮತ್ತು ವಾಯುಮಾರ್ಗದಲ್ಲಿ ದೂರಗಾಮಿ ಗುರಿಯನ್ನು ಕೇಂದ್ರೀಕರಿಸಿ ಸಮರಾಭ್ಯಾಸ ನಡೆದಿದೆ ಎಂದು ತಿಳಿಸಿದ್ದಾರೆ.

ತೈವಾನ್‌ನ ಉತ್ತರ ಮತ್ತು ದಕ್ಷಿಣಾಭಿಮುಖವಾಗಿ ಹಲವು ಯುದ್ಧ ವಿಮಾನಗಳು ಹಾರಾಟ ನಡೆಸಿದ್ದು, ನಿರ್ದಿಷ್ಟ ಗುರಿಯನ್ನು ಕೇಂದ್ರೀಕರಿಸಿ ನೆಲೆಯನ್ನು ನಾಶಗೊಳಿಸುವ ತಾಲೀಮು ನಡೆಸಿದವು.

ರಕ್ಷಣೆ, ಪ್ರತಿದಾಳಿ ತಾಲೀಮು; ತೈವಾನ್‌ನ ಸೇನೆ ನಿರ್ಧಾರ
ತೈಪೆ (ಎಎಫ್‌ಪಿ):
ಚೀನಾದ ಸಮರಾಭ್ಯಾಸ ಮುಂದುವರಿದಿರುವಂತೆಯೇ ತೈವಾನ್‌ ಕೂಡಾ ಯಾವುದೇ ದಾಳಿಯನ್ನು ಎದುರಿಸುವ ಕುರಿತಂತೆ ಸೇನಾ ತಾಲೀಮು ನಡೆಸಲು ತೀರ್ಮಾನಿಸಿದೆ.

ಸ್ವಯಂ ಆಡಳಿತ ವ್ಯವಸ್ಥೆಯುಳ್ಳ ದ್ವೀಪರಾಷ್ಟ್ರ ತೈವಾನ್‌, ಚೀನಾದಿಂದ ನಿರಂತರವಾಗಿ ಅತಿಕ್ರಮಣ ಭೀತಿಯನ್ನು ಎದುರಿಸುತ್ತಿದೆ. ಬಲವಂತವಾಗಿ ಅತಿಕ್ರಮಣ ಮಾಡಿಕೊಳ್ಳುವ ಸಾಧ್ಯತೆಯನ್ನು ಚೀನಾ ಪ್ರತಿಪಾದಿಸಿದೆ.

ಪಿಂಗ್‌ಟುಂಗ್ ಪ್ರಾಂತ್ಯದಲ್ಲಿ ಮಂಗಳವಾರದಿಂದ ಮೂರು ದಿನ ಈ ತಾಲೀಮು ನಡೆಯಲಿದೆ ಎಂದು ತೈವಾನ್‌ನ ಸೇನೆಯು ತಿಳಿಸಿದೆ. ಪ್ರತಿದಾಳಿ ಮತ್ತು ರಕ್ಷಣಾತ್ಮಕ ಕ್ರಮಗಳ ಕುರಿತು ತಾಲೀಮು ನಡೆಸಲಾಗುವುದು ಎಂದು ಎಯ್ತ್ ಆರ್ಮಿ ಕಾರ್ಪ್ಸ್‌ ವಕ್ತಾರ ಲೌ ವೋ ಜೇ ಹೇಳಿದರು.

ಆಯಕಟ್ಟಿನ ಪ್ರದೇಶಗಳಲ್ಲಿ ಸೇನೆಯ ನಿಯೋಜನೆಯೂ ಈ ತಾಲೀಮಿನಲ್ಲಿ ಸೇರಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT