ಗುರುವಾರ , ಜನವರಿ 21, 2021
18 °C

ಆ್ಯಪ್‌ ನಿಷೇಧಕ್ಕೆ ಚೀನಾ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಚೀನಾದ 43 ಆ್ಯಪ್‌‌ಗಳನ್ನು ಭಾರತವು ನಿಷೇಧಿಸಿರುವುದಕ್ಕೆ, ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಚೀನಾ ರಾಯಭಾರ ಕಚೇರಿಯು ಈ ಸಂಬಂಧ ಪ್ರತಿಭಟನೆ ದಾಖಲಿಸಿದೆ. ಭಾರತದ ಈ ಕ್ರಮವು ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳ ಉಲ್ಲಂಘನೆ ಎಂದು ಚೀನಾ ಹೇಳಿದೆ.

‘ಚೀನಾ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳ ಕಂಪನಿಗಳಿಗೆ ವಹಿವಾಟು ನಡೆಸಲು ಸಮಾನವಾದ ಅವಕಾಶ ನೀಡಬೇಕು. ಇದರಲ್ಲಿ ಯಾವುದೇ ತಾರತಮ್ಯ ಇರಬಾರದು. ಈಗ ಆ್ಯಪ್‌ಗಳ ನಿಷೇಧದಿಂದ ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳ ಉಲ್ಲಂಘನೆಯಾಗಿದೆ. ಅವುಗಳನ್ನು ಸರಿಪಡಿಸಬೇಕು’ ಎಂದು ದೆಹಲಿಯಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ಜಿ ರೊಂಗ್ ಹೇಳಿದ್ದಾರೆ.

ಚೀನಾದ ದೊಡ್ಡ ಉದ್ಯಮ ಸಂಸ್ಥೆಯಾದ ಅಲಿಬಾಬದ ಅಲಿಸಪ್ಲಯರ್‌ ಮೊಬೈಲ್, ಅಲಿಬಾಬ ವರ್ಕ್‌ಬೆಂಚ್, ಅಲಿಎಕ್ಸ್‌ಪ್ರೆಸ್‌, ಅಲಿಪೇ ಕ್ಯಾಶಿಯರ್ ಸೇರಿದಂತೆ 43 ಆ್ಯಪ್‌ಗಳನ್ನು ಕೇಂದ್ರ ಸರ್ಕಾರವು ಮಂಗಳವಾರ ನಿಷೇಧಿಸಿತ್ತು. ಲಡಾಖ್‌ ಗಡಿಯಲ್ಲಿ ಚೀನಾ ಜತೆ ಗಡಿ ಸಂಘರ್ಷ ಆರಂಭವಾದಾಗಿನಿಂದ ಕೇಂದ್ರ ಸರ್ಕಾರವು ಚೀನಾದ 177 ಆ್ಯಪ್‌ಗಳನ್ನು ನಿಷೇಧಿಸಿತ್ತು.

‘ಚೀನಾದ ಆ್ಯಪ್‌ಗಳ ವಿರುದ್ಧ ಭಾರತ ಸರ್ಕಾರವು ‘ರಾಷ್ಟ್ರೀಯ ಭದ್ರತೆ’ಯ ವಿಚಾರವನ್ನು ಪದೇ ಪದೇ ಪ್ರಯೋಗಿಸುತ್ತಿದೆ. ಇದನ್ನು ಚೀನಾ ಪ್ರತಿಭಟಿಸುತ್ತದೆ. ಅಂತರರಾಷ್ಟ್ರೀಯ ನಿಯಮಗಳು ಮತ್ತು ಆಯಾ ದೇಶಗಳಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿದೇಶಗಳಲ್ಲಿ ಕಾರ್ಯನಿರ್ವಹಿಸುವ ಚೀನಾದ ಎಲ್ಲಾ ಕಂಪನಿಗಳಿಗೂ ಸೂಚಿಸಿರುತ್ತೇವೆ. ಚೀನಾದ ಕಂಪನಿಗಳು ಇದನ್ನು ಪಾಲಿಸುತ್ತಿವೆ’ ಎಂದು ಚೀನಾ ಹೇಳಿದೆ.

‘ಚೀನಾ ಮತ್ತು ಭಾರತ ಪರಸ್ಪರರ ಅಭಿವೃದ್ಧಿಯಲ್ಲಿ ಜತೆಯಾಗುವ ಅವಕಾಶಗಳಿವೆ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಈ ಹಿಂದೆ ಇದ್ದ ವಾಣಿಜ್ಯ ಸಂಬಂಧವನ್ನು ಮರುಸ್ಥಾಪಿಸಬೇಕು. ಇದರಿಂದ ಎರಡೂ ದೇಶಗಳಿಗೆ ಅನುಕೂಲವಾಗಲಿದೆ’ ಎಂದೂ ಚೀನಾ ಪ್ರತಿಪಾದಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು