ಬುಧವಾರ, ನವೆಂಬರ್ 30, 2022
21 °C
ಪರಿಹಾರಕ್ಕಾಗಿ ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಅಳವಡಿಕೆ ಅಗತ್ಯ

ವಿಚಾರಣೆ ಬಾಕಿ ಪ್ರಕರಣಗಳೇ ದೊಡ್ಡ ಸವಾಲು: ಸಿಜೆಐ ರಮಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ವಿಚಾರಣೆ ಬಾಕಿ ಪ್ರಕರಣಗಳೇ ದೊಡ್ಡ ಸವಾಲು. ಅರ್ಜಿಗಳ ವಿಚಾರಣೆ ಪಟ್ಟಿ ಮತ್ತು ದಿನಾಂಕ ನಿಗದಿಗೆ ಹೆಚ್ಚು ಗಮನ ನೀಡಲು ಆಗಲಿಲ್ಲ’ ಎಂದು ಸುಪ್ರೀಂಕೋರ್ಟ್‌ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ವಿಷಾದ ವ್ಯಕ್ತಪಡಿಸಿದರು.

ಶುಕ್ರವಾರ ನಿವೃತ್ತಿಗೂ ಮೊದಲು ವಿಧ್ಯುಕ್ತ ಪೀಠದ ನೇತೃತ್ವ ವಹಿಸಿ ಮಾತನಾಡಿ, ‘ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಧುನಿಕ ತಂತ್ರಜ್ಞಾನಗಳ ಸಾಧನಗಳು ಮತ್ತು ಕೃತಕ ಬುದ್ಧಿಮತ್ತೆ ಅಳವಡಿಸಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ನಾವು ಕೆಲವು ಮಾದರಿಗಳ ಅಭಿವೃದ್ಧಿಪಡಿಸಲು ಪ್ರಯತ್ನಿಸಿದೆವು. ಆದರೆ, ಇದರಲ್ಲಿ ಹೊಂದಿಕೆ ಮತ್ತು ಭದ್ರತಾ ವಿಷಯಗಳ ಕಾರಣದಿಂದಾಗಿ ಹೆಚ್ಚಿನ ಪ್ರಗತಿ ಆಗಲಿಲ್ಲ. ಮಾರುಕಟ್ಟೆಯಲ್ಲಿನ ತಾಂತ್ರಿಕ ಸಾಧನಗಳನ್ನು ನಾವು ನೇರವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಕೋವಿಡ್‌ 19 ಸಾಂಕ್ರಾಮಿಕದಲ್ಲಿ ವಾಣಿಜ್ಯ ಸಂಸ್ಥೆಗಳಂತೆ ಅಲ್ಲದಿದ್ದರೂ, ಆದ್ಯತೆಯ ಮೇರೆಗೆ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ವಿಚಾರಣೆಗೆ ಬಾಕಿ ಉಳಿಯುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಅರ್ಜಿಗಳ ವಿಚಾರಣೆ ಪಟ್ಟಿ ಮತ್ತು ದಿನಾಂಕ ನಿಗದಿ ವಿಷಯಗಳಿಗೆ ನಾನು ಹೆಚ್ಚು ಗಮನ ಹರಿಸಲಿಲ್ಲ ಎನ್ನುವುದನ್ನೂ ಒಪ್ಪಿಕೊಳ್ಳುವೆ. ಇದಕ್ಕಾಗಿ ವಿಷಾದಿಸುತ್ತೇನೆ’ ಎಂದರು.

ಪ್ರಕರಣಗಳ ಹಂಚಿಕೆ ಮತ್ತು ಪಟ್ಟಿ ಮಾಡುವ ಅಧಿಕಾರ ಸಿಜೆಐಗೆ ಇರಬಾರದು. ಇದಕ್ಕೆ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯನ್ನು ಉನ್ನತ ನ್ಯಾಯಾಲಯ ಹೊಂದಿರಬೇಕು ಎಂದು ಇತ್ತೀಚೆಗೆ ಹಿರಿಯ ವಕೀಲ ದುಷ್ಯಂತ್ ದವೆ ಅವರು ಹೇಳಿದ್ದನ್ನು ಉಲ್ಲೇಖಿಸಿದ ನ್ಯಾ.ರಮಣ ಅವರು, ಅರ್ಜಿಗಳ ಪಟ್ಟಿಯಲ್ಲಿ ಯುವ ವಕೀಲರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೋರ್ಟ್‌ ಗಮನಕ್ಕೆ ತರುವಂತೆ ತಿಳಿಸಿದರು.

ನ್ಯಾ. ರಮಣ ಅವರಿಂದ ತೆರವಾಗಲಿರುವ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಅಲಂಕರಿಸಲಿದ್ದಾರೆ.  ನ್ಯಾ.ಲಲಿತ್ ಅವರ ಅಧಿಕಾರಾವಧಿ ಎರಡು ತಿಂಗಳಷ್ಟೇ ಇದೆ.

ನ್ಯಾ.ಎ.ವಿ. ರಮಣ ಸಿಜೆಐ ಆಗಿ ಕೈಗೊಂಡ ಐತಿಹಾಸಿಕ ನಿರ್ಧಾರ, ತೀರ್ಪುಗಳು
* ಸುಪ್ರೀಂಕೋರ್ಟ್‌ಗೆ ಮೂವರು ಮಹಿಳೆಯರು ಸೇರಿ 11 ಜಡ್ಜ್‌ಗಳ ನೇಮಕ
* ದೇಶದಾದ್ಯಂತ ನ್ಯಾಯಮಂಡಳಿಗಳಿಗೆ ಅಧ್ಯಕ್ಷರು, ಅಧಿಕಾರಿಗಳು, ತಾಂತ್ರಿಕ ಮತ್ತು ಕಾನೂನು ಸದಸ್ಯರು ಸೇರಿ 100 ಹುದ್ದೆಗಳಿಗೆ ನೇಮಕ
* ಹೈಕೋರ್ಟ್‌ಗಳಲ್ಲಿ ಖಾಲಿ ಇದ್ದ 220 ನ್ಯಾಯಮೂರ್ತಿಗಳ ನೇಮಕ
* ಬ್ರಿಟಿಷ್‌ ಕಾಲದ ದೇಶದ್ರೋಹ ಕಾನೂನಿಗೆ ತಡೆ
* ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಮರು ಪರಿಶೀಲನೆಗೆ ಸಮ್ಮತಿ
* ಪೆಗಾಸಸ್ ಕದ್ದಾಲಿಕೆ ಹಗರಣ ತನಿಖೆಗೆ ಆದೇಶ
* ಲಖಿಂಪುರ ಖೇರಿ ಪ್ರಕರಣದ ತನಿಖೆಗೆ ಆದೇಶ
* ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿದ ಪಿಐಎಲ್‌ನಲ್ಲಿ  ಕೇಂದ್ರ ಮತ್ತು ಗುಜರಾತ್‌ ಸರ್ಕಾರಗಳಿಗೆ ನೋಟಿಸ್‌ ಜಾರಿ
* ಕೋಮು ಗಲಭೆಕೋರರ ಆಸ್ತಿ ನೆಲಸಮ ವಿಷಯದಲ್ಲಿ ನ್ಯಾಯಾಂಗ ಮಧ್ಯಪ್ರವೇಶ
* ತೆಲಂಗಾಣ ಹೈಕೋರ್ಟ್‌ 24 ಜಡ್ಜ್‌ಗಳ ಸಂಖ್ಯೆಯನ್ನು 42ಕ್ಕೆ ಏರಿಕೆ

ನ್ಯಾಯಾಲಯ ಕಲಾಪ ನೇರ ಪ್ರಸಾರಕ್ಕೆ ಅಸ್ತು
ಸುಪ್ರೀಂಕೋರ್ಟ್‌ನಿಂದ ಇದೇ ಮೊದಲ ಬಾರಿಗೆ ಕಲಾಪದ ನೇರ ಪ್ರಸಾರ ಶುಕ್ರವಾರ ಚಾಲನೆ ಸಿಕ್ಕಿತು.

ವಿಧ್ಯುಕ್ತ ಪೀಠದ ನೇತೃತ್ವ ವಹಿಸಿದ್ದ ಸಿಜೆಐ ಎನ್‌.ವಿ. ರಮಣ ಅವರು, ಎನ್‌ಐಸಿಯ ವೆಬ್ ಕಾಸ್ಟ್ ಪೋರ್ಟಲ್ ಮೂಲಕ ನಿವೃತ್ತಿ ದಿನದ ಕಲಾ‍‍ಪ ನೇರ ಪ್ರಸಾರಕ್ಕೆ ಚಾಲನೆ ನೀಡಿದರು.

ನ್ಯಾಯಾಲಯದಲ್ಲಿ ಸಾಂವಿಧಾನಿಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಕರಣಗಳ ವಿಚಾರಣೆಗಳ ಕಲಾಪದ ನೇರ ಪ್ರಸಾರಕ್ಕೆ 2018ರಲ್ಲಿ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. 

ಸಿಜಿಐ ಅವರು ನಡೆಸುವ ಪ್ರಮುಖ ಪ್ರಕರಣಗಳ ವಿಚಾರಣೆಯ ಕಲಾಪದ ನೇರ ಪ್ರಸಾರವನ್ನು ಪೈಲಟ್‌ ಯೋಜನೆ ಆಧಾರದ ಮೇಲೆ ಪ್ರಾರಂಭಿಸಬಹುದು. ಇದರ ಯಶಸ್ಸು ನೋಡಿಕೊಂಡು ಈ ಪ್ರಕ್ರಿಯೆಯನ್ನು ಇತರ ನ್ಯಾಯಾಲಯ ಕೊಠಡಿಗಳಲ್ಲೂ ಅಳವಡಿಸಬಹುದು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಈ ಹಿಂದೆ ಹೇಳಿದ್ದರು.

***

ಭಾರತೀಯ ನ್ಯಾಯಾಂಗವು ಕಾಲಾಂತರದಲ್ಲಿ ಬೆಳೆದಿದೆ. ಅದನ್ನು ಒಂದೇ ಆದೇಶ ಅಥವಾ ತೀರ್ಪುಗಳಿಂದ ವ್ಯಾಖ್ಯಾನಿಸಲಾಗದು. ನ್ಯಾಯಾಧೀಶರಾಗಿ ನ್ಯಾಯಾಂಗದ ವಿಶ್ವಾಸಾರ್ಹತೆ ಕಾಪಾಡದಿದ್ದರೆ, ಜನ ಮತ್ತು ಸಮಾಜದಿಂದ ಗೌರವ ಸಿಗದು.
ಎನ್‌.ವಿ. ರಮಣ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ

*

ನ್ಯಾ.ರಮಣ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿದ್ದ ಖಾಲಿ ಹುದ್ದೆಗಳನ್ನು ಪೂರ್ಣ ಭರ್ತಿಗೊಳಿಸಿ, ಮಹತ್ವದ ಸಾಧನೆ ಮಾಡಿದರು. ಸುಪ್ರೀಂಕೋರ್ಟ್‌ ಇದೇ ಮೊದಲ ಸಲ 34 ನ್ಯಾಯಮೂರ್ತಿಗಳ ಪೂರ್ಣ ಬಲ ಹೊಂದಿದೆ.
ಕೆ.ಕೆ. ವೇಣುಗೋಪಾಲ್‌, ಅಟಾರ್ನಿ ಜನರಲ್‌

*

ಕರ್ತವ್ಯ ಪಾಲನೆಯೇ ದೇವರೆಂದುಕೊಂಡು ಸಿಜೆಐ ರಮಣ ಅವರು ಸೇವೆ ಸಲ್ಲಿಸಿದ್ದಾರೆ. ಸಹವರ್ತಿಗಳನ್ನು ಅವರು ತಮ್ಮ ಕುಟುಂಬದ ಸದಸ್ಯರಂತೆ ಕಂಡಿದ್ದಾರೆ.
ತುಷಾರ್ ಮೆಹ್ತಾ, ಸಾಲಿಸಿಟರ್ ಜನರಲ್ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು