ಬುಧವಾರ, ಮೇ 18, 2022
28 °C

ರೈತ ಹೋರಾಟದ ಬಗ್ಗೆ ಸೆಲೆಬ್ರಿಟಿಗಳ ಪ್ರತಿಕ್ರಿಯೆ; ಕಾಂಗ್ರೆಸ್ ಸಂಸದ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಸರ್ಕಾರವನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದ ಸೆಲೆಬ್ರಿಟಿಗಳ ವಿರುದ್ಧ ಕಾಂಗ್ರೆಸ್‌ ಸಂಸದ ಜಸ್‌ಬೀರ್‌ ಸಿಂಗ್‌ ಗಿಲ್‌ ಕಿಡಿ ಕಾರಿದ್ದಾರೆ. ಜೊತೆಗೆ ಅಂತಹ ವ್ಯಕ್ತಿಗಳನ್ನು ದೇಶದ ಜನರು ಬಹಿಷ್ಕರಿಸಬೇಕು ಎಂದೂ ಹೇಳಿದ್ದಾರೆ.

‘ನಾನೂ ಈ ಜನರನ್ನು (ಸರ್ಕಾರದ ಪರ ಹೇಳಿಕೆ ನೀಡಿದವರನ್ನು) ಬಲವಾಗಿ ಖಂಡಿಸುತ್ತೇನೆ. ರೈತರನ್ನು ಬೆಂಬಲಿಸುವವರು ಈ ಎಲ್ಲ ನಟರ ಸಿನಿಮಾಗಳನ್ನು ಬಹಿಷ್ಕರಿಸಬೇಕು ಎಂದು ನನಗನಿಸುತ್ತದೆ’ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ರೈತರ ಪ್ರತಿಭಟನೆ: ಟ್ವೀಟ್‌ ಬೆಂಬಲಕ್ಕೆ ಕೇಂದ್ರ ಕಿಡಿ 

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಖ್ಯಾತ ಗಾಯಕಿ ರಾಬಿನ್ ರಿಯಾನ ಫೆಂಟಿ, ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥರ್ನ್‌ಬರ್ಗ್, ನಟಿ ಮಿಯಾ ಖಲೀಫಾ ಟ್ವೀಟ್ ಮಾಡಿದ್ದರು. ಇದಕ್ಕೆ ಭಾರತದ ಕೆಲವು ತಾರೆಯರು ವಿರೋಧ ವ್ಯಕ್ತಪಡಿಸಿದ್ದರು.

‘ಇಂದು ಜಗತ್ತು ಸಣ್ಣ ‘ವಿಶ್ವ ಗ್ರಾಮ’ವಾಗಿ ಬದಲಾಗಿದೆ. ಯಾವುದೇ ರಿತಿಯ ಉತ್ಪನ್ನಗಳ ರಫ್ತು ಮತ್ತು ಆಮದು ಒಂದು ಸ್ಥಳದಿಂದ ಬೇರೆಡೆಗೆ ನಡೆಯುತ್ತದೆ. ರೈತರು ಇಡೀ ಮಾನವಕುಲಕ್ಕೇ ಸೇರಿದವರಾಗಿರುವುದರಿಂದ ಅವರ ಬಗ್ಗೆ ಎಲ್ಲರಿಗೂ ಸಹಾನುಭೂತಿ ಇದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್‌ನ ಖ್ಯಾತ ನಟಿಯರ ಜಗಳಕ್ಕೆ ಕಾರಣವಾದ ಪಾಪ್‌ ಗಾಯಕಿ ರಿಹಾನ್ನಾ ಟ್ವೀಟ್‌

ಪ್ರತಿಭಟನೆಯನ್ನು ಕೆಲವರು ವೈಭವೀಕರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ಯಾರಾದರೂ ರೈತರ ಪರವಾಗಿ ಟ್ವೀಟ್‌ ಮಾಡಿದ್ದರೆ ಅದನ್ನು ವೈಭವೀಕರಣ ಎನ್ನಬಾರದು. ನನ್ನ ಪ್ರಕಾರ, ನಮ್ಮ ರೈತರ ದುಃಸ್ಥಿತಿ, ಕಠಿಣ ಪರಿಶ್ರಮ ಮತ್ತು ಸದ್ಯ ನಡೆಯುತ್ತಿರುವ ಹೋರಾಟವನ್ನು ನಿರ್ಲಕ್ಷಿಸಿರುವ ಜನರು ರಿಯಾನ (ಪಾಪ್‌ ತಾರೆ) ಅವರಿಗಿಂತಲೂ ಕೆಟ್ಟವರು’ ಎಂದು ಪ್ರತಿಕ್ರಿಯಿಸಿದ್ದಾರೆ.

ಸೆಲೆಬ್ರಿಟಿಗಳ ಟ್ವೀಟ್‌ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ನಾಯಕ, ‘ಪ್ರಧಾನಿ ಮೋದಿ ಅವರು ಮಾವು ತಿನ್ನುತ್ತಾರೆಯೇ ಅಥವಾ ಇಲ್ಲವೇ ಎಂದು ಕೇಳಿದ ಅಕ್ಷಯ್‌ ಕುಮಾರ್‌ ಅವರನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ನಟರ ಟ್ವೀಟ್‌ಗಳ ಮೂಲಕ ಸರ್ಕಾರವು ರೈತರ ಪ್ರತಿಭಟನೆಯ ಬಗೆಗಿನ ಭಯವನ್ನು ತೋರುತ್ತಿದೆ. ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿರುವುದು ತಮ್ಮ ಮಗನನ್ನು ಐಪಿಎಲ್‌ನಲ್ಲಿ ಆಡಿಸುವ ಸಲುವಾಗಿ ಮಾತ್ರ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: PV Web exclusive: ಹತ್ತಿಕ್ಕಿದಷ್ಟು ಬಲಗೊಳ್ಳುವ ಪ್ರತಿರೋಧ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು