ಶನಿವಾರ, ಮಾರ್ಚ್ 25, 2023
28 °C

ಉತ್ತರಾಖಂಡದ ಸರ್ಕಾರಿ ವಿಮಾನದಲ್ಲಿ ಕೋಶಿಯಾರಿ ಪ್ರಯಾಣ: ಕಾಂಗ್ರೆಸ್ ವಿರೋಧ

ಪಿಟಿಐ Updated:

ಅಕ್ಷರ ಗಾತ್ರ : | |

ಡೆಹರಾಡೂನ್: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಇತ್ತೀಚೆಗೆ ಉತ್ತರಾಖಂಡ ಸರ್ಕಾರದ ವಿಮಾನದಲ್ಲಿ ಡೆಹರಾಡೂನ್‌ಗೆ ಪ್ರಯಾಣಿಸಿರುವುದನ್ನು ಟೀಕಿಸಿರುವ ಕಾಂಗ್ರೆಸ್, ಇದು ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಈಗಾಗಲೇ ಸಾಲದಿಂದ ತುಂಬಿರುವ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿದೆ ಎಂದು ಹೇಳಿದೆ.

'ಮಹಾರಾಷ್ಟ್ರದ ರಾಜ್ಯಪಾಲರಾಗಿರುವುದರಿಂದ ಕೋಶಿಯಾರಿ ಅವರನ್ನು ಉತ್ತರಾಖಂಡಕ್ಕೆ ರಾಜ್ಯದ ವಿಮಾನದಲ್ಲಿ ಕಳುಹಿಸುವುದು ಮಹಾರಾಷ್ಟ್ರ ಸರ್ಕಾರದ ಜವಾಬ್ದಾರಿಯಾಗಿದೆ' ಎಂದು ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಗರ್ವಾಲ್ ಗರಿಮಾ ದಾಸೌನಿ ಹೇಳಿದ್ದಾರೆ.

ರಾಜ್ಯವು 70,000 ಕೋಟಿ ರೂಪಾಯಿಗಳ ಸಾಲದ ಸುಳಿಯಲ್ಲಿ ಸಿಲುಕಿರುವ ಸಮಯದಲ್ಲಿ ಉತ್ತರಾಖಂಡದಲ್ಲಿನ ಅತ್ಯಲ್ಪ ಸಂಪನ್ಮೂಲಗಳ ಮೇಲೆ ಇದು ಹೆಚ್ಚುವರಿ ಹೊರೆಯಾಗಿದೆ ಎಂದು ಅವರು ಹೇಳಿದ್ದಾರೆ.

'ಮುಖ್ಯಮಂತ್ರಿಯು (ಪುಷ್ಕರ್ ಸಿಂಗ್ ಧಾಮಿ) ತನ್ನ ರಾಜಕೀಯ ಮಾರ್ಗದರ್ಶಕರಿಗೆ ಐಷಾರಾಮಿ ವ್ಯವಸ್ಥೆಯನ್ನು ಕಲ್ಪಿಸಲು ತುಂಬಾ ಉತ್ಸುಕರಾಗಿದ್ದರೆ, ಅವರು ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಹಾಕುವ ಬದಲು ಅವರ ವೈಯಕ್ತಿಕ ವೆಚ್ಚದಲ್ಲಿ ಇದನ್ನು ಮಾಡಬೇಕಿತ್ತು' ಎಂದು ಅವರು ಸೋಮವಾರ ಹೇಳಿದರು.

ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಗೂ ಅವರು ಅದೇ ರೀತಿಯ ಆತಿಥ್ಯವನ್ನು ನೀಡುತ್ತಾರೆಯೇ ಎಂದು ಅವರು ಪುಷ್ಕರ್ ಸಿಂಗ್ ಧಾಮಿಯನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ರಾಜ್ಯ ಸಚಿವ ಧನ್ ಸಿಂಗ್ ರಾವತ್ ಅವರನ್ನು ಸಂಪರ್ಕಿಸಿದಾಗ, 'ಕಾಂಗ್ರೆಸ್ ಈ ವಿಷಯದ ಬಗ್ಗೆ ಮಾತನಾಡುವ ಮೊದಲು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಕಾಂಗ್ರೆಸ್ ಆಡಳಿತದಲ್ಲಿ, ಪಕ್ಷದ ನಾಯಕರು ಕೂಡ ರಾಜ್ಯ ವಿಮಾನಗಳನ್ನು ಬಳಸುತ್ತಿದ್ದರು ಎಂದು ಹೇಳಿದ್ದಾರೆ.

'ಕೋಶಿಯಾರಿ ಅವರು ಕೇವಲ ಮಾಜಿ ಮುಖ್ಯಮಂತ್ರಿಯಲ್ಲದೇ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ರಾಜ್ಯದ ಅತಿಥಿಯಾಗಿ ಇಲ್ಲಿಗೆ ಆಗಮಿಸಿದಾಗ ಆತಿಥ್ಯ ನೀಡುವುದು ತಪ್ಪಲ್ಲ' ಎಂದಿದ್ದಾರೆ.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ರಾಜಕೀಯ ಮಾರ್ಗದರ್ಶಕ ಎಂದೇ ಗುರುತಿಸಿಕೊಂಡಿರುವ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಭಾನುವಾರವಷ್ಟೇ ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು