ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘವಿರೋಧಿ ಕಾರ್ಯಕರ್ತರ ನೇಮಕಕ್ಕೆ ಕಾಂಗ್ರೆಸ್‌ ಚಿಂತನೆ

ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ಪ್ರಸ್ತಾವ
Last Updated 13 ಮೇ 2022, 23:30 IST
ಅಕ್ಷರ ಗಾತ್ರ

ಉದಯಪುರ: ದೇಶದಾದ್ಯಂತ ತಾಲ್ಲೂಕು ಮಟ್ಟದಲ್ಲಿ ಸಂಘವಿರೋಧಿ ಕಾರ್ಯಕರ್ತರನ್ನು ನೇಮಕ ಮಾಡಬೇಕು ಮತ್ತು ಅವರ ಮೂಲಕ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ತಿರುಗೇಟು ನೀಡಬೇಕು ಎಂಬ ಪ್ರಸ್ತಾವವು ಕಾಂಗ್ರೆಸ್‌ ಪಕ್ಷದ ಚಿಂತನ ಶಿಬಿರದಲ್ಲಿ ಮಂಡನೆಯಾಗಿದೆ ಎಂದು ಮೂಲಗಳು ಹೇಳಿವೆ.

ಪಕ್ಷದ ಹಿರಿಯ ಮುಖಂಡ ಸಲ್ಮಾನ್ ಖುರ್ಶಿದ್ ಅವರ ನೇತೃತ್ವದ ಸಾಮಾಜಿಕ ನ್ಯಾಯ ಸಮಿತಿಯು ಈ ಪ್ರಸ್ತಾವವನ್ನು ಇರಿಸಿದೆ. ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಸಮಿತಿಯು ಮತ್ತಷ್ಟು ಸಲಹೆಗಳನ್ನು ನೀಡಿದೆ.

‘ಪಕ್ಷದ ಹುದ್ದೆಗಳಲ್ಲಿ ಅರ್ಧದಷ್ಟು ಹುದ್ದೆಗಳನ್ನು ದಲಿತರು, ಬುಡಕಟ್ಟು ಸಮುದಾಯಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ನೀಡಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೂ ಪ್ರಾತಿನಿಧ್ಯ ನೀಡಬೇಕು. ಪಕ್ಷದ ಅಲ್ಪಸಂಖ್ಯಾತ ಘಟಕಗಳಲ್ಲಿ, ಮಹಿಳಾ ಕಾಂಗ್ರೆಸ್‌ನ ನಾಯಕತ್ವದ ಹುದ್ದೆಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಮಹಿಳಾ ಕಾರ್ಯಕರ್ತರಿಗೆ ಪಕ್ಷದ ಪ್ರಮುಖ ಸಮಿತಿಗಳಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ’ ಎಂದು ಮೂಲಗಳು ವಿವರಿಸಿವೆ.

‘ದೇಶದಾದ್ಯಂತ ಸಾಮಾಜಿಕ ಸಮೀಕರಣವನ್ನು ಮರುರೂಪಿಸುವ ಸಲುವಾಗಿ ಸಮಗ್ರ ಮತ್ತು ವಿಸ್ತೃತ ಅಧ್ಯಯನದ ಅವಶ್ಯಕತೆ ಇದೆ. ದಲಿತರು, ಬುಡಕಟ್ಟು ಸಮುದಾಯಗಳು ಮತ್ತು ಅಲ್ಪಸಂಖ್ಯಾತರ ಅಸ್ಮಿತೆ, ಸಮಸ್ಯೆಗಳು ಮತ್ತು ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಅತ್ಯಂತ ವ್ಯವಸ್ಥಿತವಾಗಿ ಸಮೀಕ್ಷೆಗಳನ್ನು ನಡೆಸಬೇಕು. ಸಮೀಕ್ಷೆಯ ಹೊಳಹುಗಳನ್ನು ಎಐಸಿಸಿ, ಪಕ್ಷದ ರಾಜ್ಯ ಮತ್ತು ಜಿಲ್ಲಾ ಘಟಕಗಳ ಜತೆಗೆ ಹಂಚಿಕೊಳ್ಳಬೇಕು. ಈ ಮೂಲಕ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳಬೇಕು. ಚಿಂತನ ಶಿಬಿರ ಮುಗಿದ ಒಂದು ವರ್ಷದ ಒಳಗೆ ಈ ಕೆಲಸ ಆಗಬೇಕು’ ಎಂದು ಸಮಿತಿಯು ಶಿಫಾರಸು ಮಾಡಿದೆ.

‘ಈ ಸಮೀಕ್ಷೆಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ಪಕ್ಷದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಘಟಕಗಳಲ್ಲಿ ಇರುವ ಕಾರ್ಯಕರ್ತರನ್ನು ಹುಡುಕಬೇಕು. ಅವರನ್ನು ಆರ್‌ಎಸ್‌ಎಸ್‌ ವಿರೋಧಿ ಕಾರ್ಯಕರ್ತರನ್ನಾಗಿ ನೇಮಕ ಮಾಡಬೇಕು’ ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT