ಶುಕ್ರವಾರ, ಜನವರಿ 27, 2023
18 °C
ಏಳು ವರ್ಷಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ ದರ ದುಪ್ಪಟ್ಟು: ಕೇಂದ್ರದ ವಿರುದ್ಧ ಕಿಡಿ

ಅಗತ್ಯ ವಸ್ತುಗಳ ಬೆಲೆ ಏರಿಕೆ: ಕಾಂಗ್ರೆಸ್‌ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದಕ್ಕೆ ಕಾಂಗ್ರೆಸ್‌ ಬುಧವಾರ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ‌ ನಡೆಸಿದೆ.

‘ದೇಶವು ಒಗ್ಗಟ್ಟಾಗಿ ಈ ಅನ್ಯಾಯದ ವಿರುದ್ಧ ಹೋರಾಟ ನಡೆಸಲಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಡುಗೆ ಅನಿಲ ಸಿಲಿಂಡರ್‌ಗಳ ದರವು ಜನವರಿ ತಿಂಗಳಿಂದ ಎಷ್ಟು ಹೆಚ್ಚಳವಾಗಿದೆ ಎನ್ನುವ ವಿವರಗಳ ಪಟ್ಟಿಯನ್ನು ರಾಹುಲ್‌ ಗಾಂಧಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಕಳೆದ ಏಳು ವರ್ಷಗಳಲ್ಲಿ ಅಡುಗೆ ಅನಿಲ ದರ ದುಪ್ಪಟ್ಟಾಗಿದೆ. ‘2014ರ ಮಾರ್ಚ್‌ 1ರಂದು ಅಡುಗೆ ಅನಿಲ ಸಿಲಿಂಡರ್‌ ದರ ₹410 ಇತ್ತು. 2021ರ ಸೆಪ್ಟೆಂಬರ್‌ 1ರಂದು ಅಡುಗೆ ಅನಿಲ ಸಿಲಿಂಡರ್‌ ದರ ₹884 ಆಗಿದೆ. ಬಿಜೆಪಿಗೆ ಮಾತ್ರ ಅಚ್ಛೇ ದಿನಗಳು ಬಂದಿದ್ದು, ದೇಶವನ್ನು ಲೂಟಿ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ಸಿಂಗ್‌ ಸುರ್ಜೇವಾಲಾ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಈ ಬಗ್ಗೆ ಟ್ವೀಟ್‌ ಮಾಡಿದ್ದು, ‘ಪ್ರಧಾನಿ ಜೀ, ನಿಮ್ಮ ಆಡಳಿತದಲ್ಲಿ ಕೇವಲ ಎರಡು ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಒಂದೆಡೆ, ನಿಮ್ಮ ಕೋಟ್ಯಾಧಿಪತಿ ಸ್ನೇಹಿತರ ಆಸ್ತಿಯು ಹೆಚ್ಚುತ್ತಿದೆ, ಇನ್ನೊಂದೆಡೆ, ಜನಸಾಮಾನ್ಯರ ಅಗತ್ಯ ಇರುವ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ’ ಎಂದು ಕಿಡಿಕಾರಿದ್ದಾರೆ.

’ಬೆಲೆ ಏರಿಕೆಯೇ ಅಭಿವೃದ್ಧಿ ಎನ್ನುವುದಾದರೆ ಈ ಅಭಿವೃದ್ಧಿಗೆ ರಜೆ ನೀಡುವುದು ಒಳ್ಳೆಯದು’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷವು ‘ಇಂಡಿಯಾ ಅಗೆನ್ಸ್ಟ್ ಬಿಜೆಪಿಲೂಟ್‌’ ಹ್ಯಾಷ್‌ಟ್ಯಾಗ್‌ನಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನ ಆರಂಭಿಸಿದ್ದು, ಬೆಲೆ ಏರಿಕೆಯ ಬಗ್ಗೆ ಜನಸಾಮಾನ್ಯರ ಅಭಿಪ್ರಾಯಗಳ ವಿಡಿಯೊಗಳನ್ನು ಹಂಚಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು