ಶುಕ್ರವಾರ, ಅಕ್ಟೋಬರ್ 30, 2020
19 °C

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸ್ವರೂಪ ಪಡೆದ ಪಗಡಿ ಪ್ರಸಂಗ!

ಪಿಟಿಐ Updated:

ಅಕ್ಷರ ಗಾತ್ರ : | |

ಕೊಲ್ಕತಾ: ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದ ಬಿಜೆಪಿ ಮೆರವಣಿಗೆ ವೇಳೆ ಪೊಲೀಸರು ಸಿಖ್ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು ಮತ್ತು ಆತನ ಪಗಡಿ (ತಲೆಗೆ ಧರಿಸುವ ಬಟ್ಟೆ) ಎಳೆದಿರುವುದು ದೇಶದಲ್ಲಿ ವಿವಾದದ ಕಿಡಿ ಹೊತ್ತಿಸಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಶ್ಚಿಮ ಬಂಗಾಳ ಪೊಲೀಸರು, ‘ವ್ಯಕ್ತಿ ಪಿಸ್ತೂಲ್‌ ಹೊಂದಿದ್ದ. ಅಲ್ಲದೆ, ಆತನ ಪಗಡಿ ಗಲಾಟೆಯ ನಡುವೆ ತನ್ನಷ್ಟಕ್ಕೆ ಬಿದ್ದಿಹೋಗಿದೆ,’ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆ ಖಂಡಿಸಿ, ಕೋಲ್ಕತ್ತ ಹಾಗೂ ಹೌರಾದ ಹಲವೆಡೆ ಬಿಜೆಪಿ ಯುವಘಟಕ ‘ಭಾರತೀಯ ಜನತಾ ಯುವಮೋರ್ಚಾ’ (ಬಿಜೆವೈಎಂ) ಗುರುವಾರ ಮೆರವಣಿಗೆ ಆಯೋಜಿಸಿತ್ತು. ಪಶ್ಚಿಮ ಬಂಗಾಳ ಸರ್ಕಾರದ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಯುವ ಘಟಕದ ಕಾರ್ಯಕರ್ತರು ಪ್ರಯತ್ನಿಸಿದ್ದರು. ಈ ವೇಳೆ ಸಿಖ್‌ ವ್ಯಕ್ತಿಯ ಪಗಡಿ ಪ್ರಸಂಗ ನಡೆದಿದೆ.

ಘಟನೆಯ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದ್ದು, ಸಿಖ್‌ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಘಟನೆ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದೆ. ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌, ಕ್ರಿಕೆಟಿಗ ಹರಬಜನ್‌ ಸಿಂಗ್‌ ಸೇರಿದಂತೆ ಹಲವರು ಘಟನೆಯನ್ನು ಖಂಡಿಸಿದ್ದಾರೆ.

‘ಇದು ಸಿಖ್ಖರಿಗೆ ಪಶ್ಚಿಮ ಬಂಗಾಳ ಸರ್ಕಾರ ಮಾಡಿದ ಅಪಮಾನ,’ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ‘ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ವೀರ ಯೋಧರನ್ನೂ ಟಿಎಂಸಿ ಸರ್ಕಾರ ಬಿಡುವುದಿಲ್ಲ. ತಪ್ಪಿತಸ್ಥ ಪೊಲೀಸ್‌ ಸಿಬ್ಬಂದಿಗೆ ಕಠಿಣ ಶಿಕ್ಷೆ ವಿಧಿಸಬೇಕು,’ ಎಂದು ಆಗ್ರಹಿಸಿದ್ದಾರೆ.

‘ಸರ್ದಾರ್ ಬಲ್ವಿಂದರ್ ಸಿಂಗ್ ಅವರ ಪಗಡಿ ಎಳೆಯುವ ಮೂಲಕ, ಬಂಗಾಳ ಪೊಲೀಸರು ದೇಶದ ಎಲ್ಲ ಸಿಖ್ಖರನ್ನು ಅವಮಾನಿಸಿದ್ದಾರೆ. ಮೊಘಲರ ಆಡಳಿತವನ್ನು ಮತ್ತೆ ಬಂಗಾಳದಲ್ಲಿ ಸ್ಥಾಪಿಸಲಾಗಿದೆ ಎಂದು ಕಾಣುತ್ತದೆ. ನಿರ್ದಿಷ್ಟ ಸಮುದಾಯವನ್ನು ಹೊರತುಪಡಿಸಿ ಯಾರೊಬ್ಬರ ಧಾರ್ಮಿಕ ಭಾವನೆಗಳಿಗೂ ಬಂಗಾಳದಲ್ಲಿ ಗೌರವ ಇಲ್ಲವೇ?’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ ಮೆನನ್ ಟ್ವೀಟರ್‌ನಲ್ಲಿ ಹೇಳಿದ್ದಾರೆ.

ಪೊಲೀಸ್‌ ಇಲಾಖೆ ಸ್ಪಷ್ಟನೆ

ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸ್‌ ಇಲಾಖೆ ಶುಕ್ರವಾರ ಟ್ವೀಟ್ ಮಾಡಿದೆ. ‘ವ್ಯಕ್ತಿಯು ಗುರುವಾರ ನಡೆದ ಪ್ರತಿಭಟನೆಯಲ್ಲಿ ಬಂದೂಕುಗಳನ್ನು ಹೊತ್ತುಕೊಂಡು ಹೋಗುತ್ತಿದ್ದ. ಪಗಡಿಯನ್ನು ಎಳೆಯುವ ಪ್ರಯತ್ನ ಸಿಬ್ಬಂದಿಯಿಂದ ನಡೆದಿಲ್ಲ. ಗಲಾಟೆ ವೇಳೆ ಅದು ತನ್ನಷ್ಟಕ್ಕೆ ಬಿದ್ದುಹೋಗಿದೆ. ಅಲ್ಲದೆ, ಯಾವುದೇ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮಗಿಲ್ಲ,’ ಎಂದು ಹೇಳಿದೆ.

ಟಿಎಂಸಿ ಏನು ಹೇಳಿದೆ?

ಘಟನೆ ಮತ್ತು ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿರುವ ಆಡಳಿತಾರೂಢ ಟಿಎಂಸಿಯ ಹಿರಿಯ ಮುಖಂಡ ಮತ್ತು ಸಚಿವ ಫಿರ್ಹಾದ್ ಹಕೀಮ್, ಬಿಜೆಪಿ ಆರೋಪಗಳು ಆಧಾರ ರಹಿತ. ಕಾನೂನಿನ ಪ್ರಕಾರವೇ ಎಲ್ಲವೂ ನಡೆಯುತ್ತದೆ. ನಾವು ಬಿಜೆಪಿಯಂತೆ ಅಲ್ಲ. ನಾವು ಎಲ್ಲಾ ಧರ್ಮಗಳನ್ನು, ಜಾತಿಗಳನ್ನು ಗೌರವಿಸುತ್ತೇವೆ,’ ಎಂದು ಹೇಳಿದ್ದಾರೆ.

ವ್ಯಕ್ತಿ ಯಾರು?

ವ್ಯಕ್ತಿಯನ್ನು ಭಟಿಂಡಾದ ನಿವಾಸಿ 43 ವರ್ಷದ ಬಲ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆಯ ಮಾಜಿ ಸೈನಿಕರಾಗಿರುವ ಸಿಂಗ್ ಪ್ರಸ್ತುತ ಬಿಜೆಪಿ ಮುಖಂಡರೊಬ್ಬರ ಖಾಸಗಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ. ಸಿಂಗ್‌ ಅವರಿಂದ ಲೋಡ್ ಮಾಡಿದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ. ಪಿಸ್ತೂಲ್‌ಗೆ ಮುಂದಿನ ವರ್ಷದ ಜನವರಿ ವರೆಗೆ ಪರವಾನಗಿ ಇದೆ ಎಂದೂ ಹೇಳಲಾಗಿದೆ.

ಬಂಧನಕ್ಕೂ ಮೊದಲು ಸಿಂಗ್‌ಗೆ ಪಗಡಿಯನ್ನು ಧರಿಸಿಕೊಳ್ಳುವಂತೆ ಪೊಲೀಸ್‌ ಸಿಬ್ಬಂದಿ ಹೇಳಿದ್ದರು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು