ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಕೋವಿಡ್‌ ಕೇಂದ್ರವಾದ ಅಮರಾವತಿ

ನಿಯಮಾವಳಿ ಮರೆತು, ಮದುವೆ–ಮುಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನಾಗರಿಕರು
Last Updated 24 ಫೆಬ್ರುವರಿ 2021, 18:52 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯು ಕೋವಿಡ್‌–19 ಪ್ರಸರಣದ ಹೊಸ ಕೇಂದ್ರವಾಗಿ ರೂಪುಗೊಂಡಿದೆ. ಇಲ್ಲಿ ಕೋವಿಡ್‌ನ 5,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಈಗ ಇವೆ. ರಾಜ್ಯ ದಲ್ಲಿ ಮುಂಬೈ, ಪುಣೆ ಹಾಗೂ ನಾಗ್ಪುರದ ನಂತರ ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಜಿಲ್ಲೆ ಅಮರಾವತಿ.

28 ಲಕ್ಷ ಜನಸಂಖ್ಯೆ ಹೊಂದಿರುವ ಅಮರಾವತಿ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಸತತವಾಗಿ ದಿನಕ್ಕೆ 600ರಿಂದ 800 ಕೋವಿಡ್‌ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಇದು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆ 32,045 ಮಂದಿ ಸೋಂಕಿಗೆ ಒಳಗಾಗಿದ್ದು, 443 ಮಂದಿ ಬಲಿಯಾಗಿದ್ದಾರೆ. ಇಲ್ಲಿ ಒಂದು ವಾರ ಅವಧಿಯ ಲಾಕ್‌ಡೌನ್‌ ಘೋಷಿಸಲಾಗಿದ್ದು ಸೋಮವಾರ ಕೊನೆಗೊಳ್ಳಲಿದೆ. ದೇಶದಲ್ಲಿ ಕೋವಿಡ್‌ ಹರಡುವಿಕೆಯ ವೇಗ ಕಡಿಮೆಯಾಗಿದ್ದು, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳ ಕಾರಣದಿಂದ ರಾಜಕೀಯ ಸಭೆ–ಸಮಾರಂಭಗಳ ಸಂಖ್ಯೆ ಏರಿಕೆಯಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಗಾಳಿಗೆ ತೂರಿ, ಮದುವೆ–ಮುಂಜಿ ಮುಂತಾದ ಸಮಾರಂಭಗಳಲ್ಲಿ ಜನರು ಭಾಗಿಯಾಗುತ್ತಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ವರ್ಷದಿಂದ ಹೋರಾಡುತ್ತಿರುವ ಆಡಳಿತ ದಣಿದು ಸುಮ್ಮನಾಗಿರುವುದು ಕೋವಿಡ್‌ ಹರಡುವಿಕೆ ವೇಗ ಪಡೆಯಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

‘ಮುಂಬೈಗೆ ಹೋಲಿಸಿದರೆ ಅಮರಾವತಿಯ ಜನಸಂಖ್ಯೆ ಕಡಿಮೆ ಇದೆ. ಆದರೆ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ ಸರಿಸುಮಾರು ಸಮನಾಗಿಯೇ ಇದೆ. ಇಲ್ಲಿನ ಜನರು ಕೋವಿಡ್‌ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದು ಸಹ ಇದಕ್ಕೆ ಕಾರಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಯಶೋಮತಿ ಠಾಕೂರ್‌ ಹೇಳಿದ್ದಾರೆ.

‘ಕೋವಿಡ್‌ ಪ್ರಸರಣದ ವೇಗ ಹೆಚ್ಚಾಗಿರುವುದಕ್ಕೆ ಜಿಲ್ಲಾಡಳಿತವನ್ನು ಮಾತ್ರ ದೂಷಿಸುವುದು ಸರಿಯಲ್ಲ. ಫೆಬ್ರುವರಿ ತಿಂಗಳಲ್ಲಿ ಇಲ್ಲಿ ಅನೇಕ ಮದುವೆ ಸಮಾರಂಭಗಳು ನಡೆದಿದ್ದವು. ಇದರಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಾವು ಭೀಕರ ಪಿಡುಗಿನ ಮಧ್ಯೆ ಇದ್ದೇವೆ ಎಂಬುದನ್ನು ಜನರು ಮರೆಯಬಾರದು’ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಡಾ. ಸುನಿಲ್‌ ದೇಶ್‌ಮುಖ್‌ ಹೇಳಿದ್ದಾರೆ.

‘ಅಮರಾವತಿ ಹಾಗೂ ಅಚಲಾಪುರ ನಗರಗಳಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಹೆಚ್ಚು ಜನಸಂಖ್ಯೆ ಇರುವ ಈ ನಗರಗಳಲ್ಲಿ, ಫೆಬ್ರುವರಿ ತಿಂಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದ್ದವು’ ಎಂದು ಪತ್ರಕರ್ತ, ಲೇಖಕ ಅವಿನಾಶ್‌ ದುಢೆ ಹೇಳಿದ್ದಾರೆ. ಬುಧವಾರ ಮುಂಜಾನೆ ಅಮರಾವತಿಯಲ್ಲಿ 5,595 ಸಕ್ರಿಯ ಕೋವಿಡ್‌ ಪ್ರಕರಣ
ಗಳು ಇದ್ದವು. ಪುಣೆ, ನಾಗ್ಪುರ ಮುಂಬೈಯಲ್ಲಿ ಕ್ರಮವಾಗಿ 9,399, 6,382 ಹಾಗೂ 6,199 ಸಕ್ರಿಯ ಪ್ರಕರಣಗಳಿವೆ.

ದೆಹಲಿ ಪ್ರವೇಶಕ್ಕೆ ಪ್ರಮಾಣಪತ್ರ ಕಡ್ಡಾಯ

ನವದೆಹಲಿ: ಹೆಚ್ಚು ಕೋವಿಡ್‌ ಪ್ರಕರಣಗಳಿರುವ ಐದು ರಾಜ್ಯಗಳಿಂದ, ರಾಷ್ಟ್ರ ರಾಜಧಾನಿ ದೆಹಲಿಗೆ ಬರುವವರು ಕಡ್ಡಾಯವಾಗಿ ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರವನ್ನು ತರಬೇಕು ಎಂದು ದೆಹಲಿ ಸರ್ಕಾರ ತಿಳಿಸಿದೆ.

ಕೋವಿಡ್‌ ಪ್ರಸರಣ ತೀವ್ರಗೊಂಡಿರುವ ಮಹಾರಾಷ್ಟ್ರ, ಕೇರಳ, ಪಂಜಾಬ್‌, ಛತ್ತೀಸಗಡ ಹಾಗೂ ಮಧ್ಯಪ್ರದೇಶದಿಂದ ಬರುವವರಿಗೆ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಶುಕ್ರವಾರ ರಾತ್ರಿಯಿಂದ ಈ ನಿಯಮ ಜಾರಿಗೆ ಬರಲಿದ್ದು, ಮಾರ್ಚ್‌ 15ರವರೆಗೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT