ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಹಿನ್ನೆಲೆಯವರಿಗೆ ಕಣ್ಮುಚ್ಚಿ ಜಾಮೀನು ನೀಡಬಾರದು: ಸುಪ್ರೀಂ ಕೋರ್ಟ್‌

Last Updated 25 ಏಪ್ರಿಲ್ 2021, 7:35 IST
ಅಕ್ಷರ ಗಾತ್ರ

ನವದೆಹಲಿ: ಕೋರ್ಟ್‌ಗಳು ಕಣ್ಮುಚ್ಚಿಕೊಂಡು ‘ಹಿಸ್ಟರಿ ಶೀಟರ್‌’ಗಳಿಗೆ (ಅಪರಾಧ ಹಿನ್ನೆಲೆ ಹೊಂದಿರುವವರು) ಜಾಮೀನು ನೀಡುವುದನ್ನು ನಿಲ್ಲಿಸಬೇಕು. ಅವರು ಜಾಮೀನಿನ ಮೇಲೆ ಹೊರಗೆ ಬಂದರೆ, ಸಂತ್ರಸ್ತರ ಕುಟುಂಬದ ಸದಸ್ಯರು ಹಾಗೂ ಸಾಕ್ಷಿಗಳ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದನ್ನು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಪತಿಯ ಕೊಲೆ ಆರೋಪಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಉತ್ತರ ಪ್ರದೇಶದ ಸುಧಾ ಸಿಂಗ್‌ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ (ಈಗ ನಿವೃತ್ತರಾಗಿದ್ದಾರೆ) ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್‌ ಈ ಪೀಠದಲ್ಲಿದ್ದಾರೆ.

ಆರೋಪಿಗೆ ಜಾಮೀನು ನೀಡಿ ಅಲಹಾಬಾದ್‌ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪಕ್ಕಕ್ಕಿರಿಸಿದ ನ್ಯಾಯಪೀಠ, ‘ವ್ಯಕ್ತಿ ಸ್ವಾತಂತ್ರ್ಯ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅಪರಾಧ ಕೃತ್ಯ ಎಸಗಿದ ಆರೋಪ ಹೊತ್ತ ವ್ಯಕ್ತಿಗೆ ಜಾಮೀನು ನೀಡುವಾಗ ಕೋರ್ಟ್‌ಗಳು ಎಚ್ಚರದಿಂದಿರಬೇಕು. ಆರೋಪಿ ಜಾಮೀನಿನ ಮೇಲೆ ಹೊರಗೆ ಹೋದರೆ ಸಂತ್ರಸ್ಯ ಕುಟುಂಬ ಎದುರಿಸುವ ಅಪಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ಇಂಥ ವ್ಯಕ್ತಿಗಳಿಗೆ ಜಾಮೀನು ನೀಡಿದರೆ, ಸಂತ್ರಸ್ತ ಕುಟುಂಬದ ಸದಸ್ಯರೇ ಮತ್ತೆ ಬಲಿಪಶುವಾಗುವ ಸಾಧ್ಯತೆ ಇರುತ್ತದೆ. ಇಂಥ ಅಂಶಗಳನ್ನುಹೈಕೋರ್ಟ್‌ ನಿರ್ಲಕ್ಷ್ಯ ಮಾಡಿದೆ ಎಂಬುದು ನಮ್ಮ ಅನಿಸಿಕೆ ’ ಎಂದೂ ನ್ಯಾಯಪೀಠ ಹೇಳಿತು.

ಸುಧಾಸಿಂಗ್‌ ಅವರ ಪತಿ ರಾಜ್‌ನಾರಾಯಣ್‌ ಸಿಂಗ್‌ ಅವರನ್ನು ಅರುಣ್‌ ಯಾದವ್‌ ಎಂಬ ವ್ಯಕ್ತಿ 2015ರಲ್ಲಿ ಅಜಂಗಡದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಇದೆ. ಆರೋಪಿಯು ಸುಪಾರಿ ಕೊಲೆಗಾರ ಹಾಗೂ ಶಾರ್ಪಶೂಟರ್‌ ಎನ್ನಲಾಗಿದ್ದು, ಕೊಲೆ, ಕೊಲೆ ಯತ್ನ ಹಾಗೂ ಕ್ರಿಮಿನಲ್‌ ಪಿತೂರಿ ಆರೋಪಗಳಿಗೆ ಸಂಬಂಧಿಸಿ ಈಗಾಗಲೇ ಈತನ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT