ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ನೋಡಿದ್ದೇನೆ, ಸಾಕು: ಬೆಡ್ ಬಿಟ್ಟುಕೊಟ್ಟು 85ರ ಕೋವಿಡ್ ಸೋಂಕಿತ ಪ್ರಾಣತ್ಯಾಗ

Last Updated 28 ಏಪ್ರಿಲ್ 2021, 14:16 IST
ಅಕ್ಷರ ಗಾತ್ರ

ನಾಗ್ಪುರ: ‘ನನಗೀಗ 85 ವರ್ಷ ವಯಸ್ಸು. ನಾನಂತೂ ಜೀವನವನ್ನು ಪೂರ್ತಿಯಾಗಿ ನೋಡಿದ್ದೇನೆ, ಅನುಭವಿಸಿದ್ದೇನೆ. ಇಷ್ಟು ಸಾಕು. ಆದರೆ, ಆ ಮಹಿಳೆಯ ಪತಿ ಸತ್ತರೆ ಅವರ ಮಕ್ಕಳು ಅನಾಥರಾಗುತ್ತಾರೆ. ಅವರ ಜೀವ ಉಳಿಸುವುದು ನನ್ನ ಕರ್ತವ್ಯ’, ಹೀಗೆಂದ ಆ 85ರ ವೃದ್ಧ 40ರ ಮಹಿಳೆಯ ಪತಿಗೆ ಆಸ್ಪತ್ರೆಯ ಹಾಸಿಗೆಯನ್ನು ಬಿಟ್ಟುಕೊಟ್ಟಿದ್ದಾರೆ. ಬಳಿಕ ಮನೆಗೆ ಮರಳಿದ್ದಾರೆ. ಮೂರು ದಿನಗಳ ಬಳಿಕ ಅವರ ಪ್ರಾಣಪಕ್ಷಿ ಹಾರಿಹೋಗಿದೆ!

ಇದು ಯಾವುದೋ ಧಾರಾವಾಹಿ ಅಥವಾ ಸಿನಿಮಾದ ದೃಶ್ಯವಲ್ಲ. ಕೋವಿಡ್‌ ಸಾಂಕ್ರಾಮಿಕದ ಸಂಕಷ್ಟದ ಸನ್ನಿವೇಶದಲ್ಲಿ ಮತ್ತೊಬ್ಬರ ಜೀವನಕ್ಕಾಗಿ ಮಿಡಿದ ಹಿರಿಯ ಜೀವವೊಂದರ ಪ್ರಾಣತ್ಯಾಗದ ನೈಜ ಕಥೆ.

ಆರ್‌ಎಸ್‌ಎಸ್‌ ಸ್ವಯಂಸೇವಕರಾಗಿರುವ ನಾರಾಯಣ ಭಾವುರಾವ್ ದಾಭಾಡ್ಕರ್ ಅವರಿಗೆ ಇತ್ತೀಚೆಗೆ ಕೋವಿಡ್ ಸೋಂಕು ತಗುಲಿತ್ತು. ಅವರನ್ನು ನಾಗ್ಪುರದ ಇಂದಿರಾ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಹಾಸಿಗೆಗಳ, ಆಕ್ಸಿಜನ್‌ ಕೊರತೆ ಇರುವುದು ಎಲ್ಲರಿಗೂ ತಿಳಿದಿದೆ. ನಾರಾಯಣ ಅವರಿಗೂ ಸುಲಭದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ದೊರೆತಿರಲಿಲ್ಲ. ಹಲವು ಪ್ರಯತ್ನಗಳ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅದೇ ಸಂದರ್ಭ, 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ತಮ್ಮ ಪತಿಗೆ ಹಾಸಿಗೆ ದೊರೆಯದೆ ಕಂಗಾಲಾಗಿ ಕಣ್ಣೀರು ಹಾಕುತ್ತಾ ಇರುವುದು ನಾರಾಯಣ ಅವರ ಗಮನಕ್ಕೆ ಬಂತು. ಇದನ್ನು ಕಂಡು ಮರುಕಪಟ್ಟ ಅವರು, ಕೂಡಲೇ ತನ್ನ ಹಾಸಿಗೆಯನ್ನು ಮಹಿಳೆಯ ಪತಿಗೆ ಬಿಟ್ಟುಕೊಡಲು ಮುಂದಾದರು.

ಸಿಬ್ಬಂದಿಯನ್ನು ಕರೆದು, ‘ನನಗೀಗ 85 ವರ್ಷ. ಜೀವನ ಅನುಭವಿಸಿದ್ದೇನೆ. ಯುವ ಜೀವವೊಂದನ್ನು ರಕ್ಷಿಸುವುದು ಅತಿ ಮುಖ್ಯ. ಅವರ ಮಕ್ಕಳು ಇನ್ನೂ ಚಿಕ್ಕವರು. ನನ್ನ ಹಾಸಿಗೆಯನ್ನು ಅವರಿಗೆ ಬಿಟ್ಟುಕೊಡಿ’ ಎಂದು ಹೇಳಿಯೇ ಬಿಟ್ಟರು.

ಈ ಕುರಿತು ಸ್ವಯಂ ದೃಢೀಕರಣ ನೀಡುವಂತೆ ಆಸ್ಪತ್ರೆಯ ಆಡಳಿತಮಂಡಳಿ ಕೇಳಿಕೊಂಡಾಗ, ‘ನನಗೆ ನೀಡಿದ್ದ ಹಾಸಿಗೆಯನ್ನು ಸ್ವ ಇಚ್ಛೆಯಿಂದ ಮತ್ತೊಬ್ಬ ಸೋಂಕಿತರಿಗೆ ನೀಡುತ್ತಿದ್ದೇನೆ’ ಎಂದು ಬರೆದರು.

ಆಮ್ಲಜನಕದ ಮಟ್ಟ ಕುಸಿಯುತ್ತಲೇ ಇದ್ದರೂ ವೈದ್ಯರ ಸಲಹೆಯನ್ನೂ ತಿರಸ್ಕರಿಸಿದ ಅವರು, ಮನೆಗೆ ಕಳುಹಿಸುವಂತೆ ಕೇಳಿಕೊಂಡರು. ಇದಾಗಿ ಕೆಲವು ಗಂಟೆಗಳಲ್ಲಿ ಅವರನ್ನು ಮನೆಗೆ ಕರೆದೊಯ್ಯಲಾಯಿತು. ಇದಾದ ಮೂರು ದಿನಗಳ ಬಳಿಕ ಅವರು ಇಹಲೋಕ ತ್ಯಜಿಸಿದ್ದಾರೆ.

‘ಆಮ್ಲಜನಕದ ಮಟ್ಟ ಕುಸಿದಿದ್ದರಿಂದ ಏಪ್ರಿಲ್ 22ರಂದು ಅವರನ್ನು ನಾವು ಆಸ್ಪತ್ರೆಗೆ ಕರೆದೊಯ್ದೆವು. ಹಲವು ಪ್ರಯತ್ನಗಳ ಬಳಿಕ ಹಾಸಿಗೆ ದೊರೆಯಿತು. ಅದಾಗಿ ಕೆಲವೇ ಗಂಟೆಗಳಲ್ಲಿ ಅವರನ್ನು ಮನೆಗೆ ಕರೆದೊಯ್ಯಬೇಕಾಗಿಬಂತು. ಜೀವನದ ಕೊನೆಯ ಕ್ಷಣಗಳನ್ನು ನಮ್ಮ ಜತೆ ಕಳೆಯಬೇಕು ಎಂದು ಅವರು ಹೇಳಿದರು’ ಎಂದು ನಾರಾಯಣ ಅವರ ಪುತ್ರಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್ ಸಂತಾಪ

ನಾರಾಯಣ ದಾಭಾಡ್ಕರ್ ಅವರ ನಿಧನಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ಸೂಚಿಸಿದ್ದಾರೆ. ಅವರ ಮಹತ್ಕಾರ್ಯವನ್ನು ಶ್ಲಾಘಿಸಿ ಟ್ವೀಟ್ ಮಾಡಿರುವ ಚೌಹಾಣ್, ‘ಇನ್ನೊಬ್ಬ ವ್ಯಕ್ತಿಯ ಪ್ರಾಣ ರಕ್ಷಿಸಿದ, ನಾರಾಯಣ್ ಜಿ ಅವರು ಮೂರು ದಿನಗಳಲ್ಲಿ ಈ ಪ್ರಪಂಚದಿಂದ ನಿರ್ಗಮಿಸಿದರು. ಸಮಾಜ ಮತ್ತು ರಾಷ್ಟ್ರದ ನಿಜವಾದ ಸೇವಕರು ಮಾತ್ರ ಇಂತಹ ತ್ಯಾಗ ಮಾಡಲು ಸಾಧ್ಯ. ನಿಮ್ಮ ಸೇವೆಗೆ ನಮಸ್ಕರಿಸುತ್ತಿದ್ದೇನೆ. ನೀವು ಸಮಾಜಕ್ಕೆ ಸ್ಫೂರ್ತಿ. ದೈವಕ್ಕೆ ವಿನಮ್ರ ಗೌರವ. ಓಂ ಶಾಂತಿ!’ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT