ಶುಕ್ರವಾರ, ಮೇ 27, 2022
22 °C
ದೆಹಲಿಯಲ್ಲಿ 325 ಕೋವಿಡ್ ಹೊಸ ಪ್ರಕರಣಗಳು ಪತ್ತೆ

ಕೋವಿಡ್‌ ಸೋಂಕು ಪತ್ತೆಯಾದರೆ ಶಾಲೆ ಬಂದ್ ಮಾಡಿ: ದೆಹಲಿ ಸರ್ಕಾರ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜಧಾನಿಯಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಹೊಸದಾಗಿ ಕೋವಿಡ್‌ ಸೋಂಕು ಕಾಣಿಸಿಕೊಂಡ ಹಿಂದೆಯೇ ದೆಹಲಿ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸಿ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಹೊಸದಾಗಿ ಯಾವುದಾದರೂ ಪ್ರಕರಣ ಕಾಣಿಸಿಕೊಂಡಲ್ಲಿ ಶಾಲೆಯನ್ನು ಬಂದ್ ಮಾಡಬೇಕು ಎಂದು ಆದೇಶಿಸಿದೆ.

ಅಲ್ಲದೆ,  ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.

ದೆಹಲಿಯಲ್ಲಿ ಗುರುವಾರ ಹೊಸದಾಗಿ 325 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇವು ಕಳೆದ 40 ದಿನಗಳಲ್ಲಿ ವರದಿಯಾದ ಅತಿ ಹೆಚ್ಚು ಪ್ರಕರಣಗಳಾಗಿವೆ. ಆದರೆ, ಯಾವುದೇ ಸಾವು ವರದಿಯಾಗಿಲ್ಲ.

ಸೋಂಕು ತಡೆಗೆ ಕ್ರಮ ಕೈಗೊಳ್ಳಲು ಇದೇ 20ರಂದು ಸಭೆ ನಡೆಸುವುದಾಗಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

‘ಕೋವಿಡ್ –19 ಪರಿಸ್ಥಿತಿಯ ಮೇಲೆ ನಮ್ಮ ಸರ್ಕಾರವು ನಿಗಾ ವಹಿಸಿದೆ’ ಎಂದು ದೆಹಲಿ ಮುಖ್ಯಮಂತ್ರಿ
ಅರವಿಂದ ಕೇಜ್ರಿವಾಲ್ ಗುರುವಾರ ತಿಳಿಸಿದ್ದಾರೆ.

‘ಕೊರೊನಾ ವೈರಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ’ ಎಂದೂ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

15 ಮಕ್ಕಳಿಗೆ ಸೋಂಕು:  ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ 15 ಮಕ್ಕಳು ಸೇರಿ 44 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 121ಕ್ಕೆ ಏರಿಕೆಯಾಗಿದೆ.

ಚೀನಾದಲ್ಲಿ ಕೋವಿಡ್‌ ಏರಿಕೆ: ಮತ್ತಷ್ಟು ನಗರಗಳಿಗೆ ನಿರ್ಬಂಧ ವಿಸ್ತರಣೆ

ಬೀಜಿಂಗ್‌: ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ವಿಧಿಸಲಾಗಿದ್ದ ಕಠಿಣ ನಿರ್ಬಂಧಗಳನ್ನು ಇತರೆ ನಗರಗಳಿಗೂ ವಿಸ್ತರಿಸಲಾಗಿದೆ.

2.5 ಕೋಟಿ ಜನರು ಇರುವ ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ವಿಧಿಸಿರುವ ಲಾಕ್‌ಡೌನ್‌ ಮೂರನೇ ವಾರಕ್ಕೆ ಕಾಲಿಟ್ಟಿದೆ. ಇಲ್ಲಿ 27,719 ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 2,573 ಮಂದಿಗೆ ಸೋಂಕಿನ ಲಕ್ಷಣಗಳಿವೆ. ಸೋಂಕು ನಿಯಂತ್ರಣ ಮೀರಿದೆ ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.

1.9 ಕೋಟಿ ಜನಸಂಖ್ಯೆ ಇರುವ ಗುವಾಂಗ್‌ಝೌ ನಗರಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಇತರೆ ನಗರಗಳಲ್ಲಿಯೂ ಕೈಗಾರಿಕೆಗಳು ಹಾಗೂ ಶಾಲೆಗಳನ್ನು ಬಂದ್‌ ಮಾಡಲಾಗುತ್ತಿದೆ. ಈ ನಿರ್ಬಂಧಗಳು ರೈತರ ಕೃಷಿ ಚಟುವಟಿಕೆಗೂ ಅಡ್ಡಿಯಾಗಬಹುದು. ಇದರಿಂದ ಗೋಧಿ ಮತ್ತು ಆಹಾರ ಆಮದು ಹೆಚ್ಚಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಹಾಂಗ್‌ಕಾಂಗ್‌ನಲ್ಲಿ ಸೋಂಕು ಇಳಿಕೆ:ಹಾಂಗ್‌ಕಾಂಗ್‌ನಲ್ಲಿ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಅಂತರ ಕಾಯ್ದುಕೊಳ್ಳುವಿಕೆ, ಸಂಜೆ ರೆಸ್ಟೋರೆಂಟ್‌ ಮತ್ತು ಖಾಸಗಿಯಾಗಿ ಜನ ಸೇರುವುದರ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳಿಗೆ ವಿನಾಯಿತಿ ನೀಡಲಾಗಿದೆ.

ಪ್ರಯಾಣದ ವೇಳೆ ಮಾಸ್ಕ್‌ ಬಳಸಿ: ಅಮೆರಿಕದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಪ್ರಯಾಣ, ವಿಮಾನ ಪ್ರಯಾಣ ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ ಮಾಸ್ಕ್‌ ಧರಿಸಬೇಕೆಂಬ ನಿಯಮವನ್ನು ವಿಸ್ತರಿಸುವುದಾಗಿ ಬೈಡನ್‌ ಆಡಳಿತ ತಿಳಿಸಿದೆ.

ರೋಗ ನಿಯಂತ್ರಣ ಕೇಂದ್ರ ಜಾರಿಗೊಳಿಸಿದ್ದ ಮಾಸ್ಕ್‌ ನಿಯಮಾವಳಿ ಏ.18ರಂದು ಮುಕ್ತಾಯ ಗೊಳ್ಳಬೇಕಿತ್ತು. ಅದನ್ನು ಇದೀಗ ಮೇ 3ರವರೆಗೂ ವಿಸ್ತರಿಸಲಾಗಿದೆ.

ಕೋವಿಡ್‌: ಸಕ್ರಿಯ ಪ್ರಕರಣ ಏರಿಕೆ

ನವದೆಹಲಿ: ದೇಶದಲ್ಲಿ ಇಳಿಕೆಯಾಗುತ್ತಿದ್ದ ಕೋವಿಡ್‌ ಸಕ್ರಿಯ ಪ್ರಕರಣಗಳು ಗುರುವಾರ ತುಸು ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 11,058ಕ್ಕೆ ಏರಿಕೆಯಾಗಿದೆ. 1,007 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನಿತ್ಯ ಎರಡಂಕಿ ಇರುತ್ತಿದ್ದ ಸೋಂಕಿತರ ಸಾವಿನ ಸಂಖ್ಯೆ ಇಳಿಕೆ ಯಾಗಿದೆ. ಒಬ್ಬರ ಸಾವಿನೊಂದಿಗೆ ಒಟ್ಟು ಮೃತಪಟ್ಟವರ ಸಂಖ್ಯೆ 5,21,737ಕ್ಕೆ ಏರಿಕೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು