ಮಂಗಳವಾರ, ಜನವರಿ 18, 2022
23 °C

ಓಮೈಕ್ರಾನ್‌: ಕೇಂದ್ರದ ಮಾರ್ಗಸೂಚಿ ಪಾಲಿಸಲು ಮಹಾರಾಷ್ಟ್ರಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಓಮೈಕ್ರಾನ್‌ ನಿರ್ವಹಣೆಗೆ ಸಂಬಂಧಿಸಿ ರಾಜ್ಯಗಳು ಕೇಂದ್ರದ ಮಾರ್ಗಸೂಚಿಯನ್ನೇ ಪಾಲಿಸ
ಬೇಕು ಎಂದು ಕೇಂದ್ರವು ಬುಧವಾರ ಹೇಳಿದೆ. ಮಹಾರಾಷ್ಟ್ರ ಸರ್ಕಾರವು ವಿದೇಶದಿಂದ ಬರುವವರ ಪ್ರತ್ಯೇಕವಾಸ ಮಾರ್ಗಸೂಚಿಯನ್ನು ಪರಿಷ್ಕರಿಸಿದ ಬಳಿಕ ಕೇಂದ್ರವು ಹೀಗೆ ಹೇಳಿದೆ.

ಓಮೈಕ್ರಾನ್‌ ದೃಢಪಟ್ಟ ದೇಶಗಳಿಂದ ಬರುವ ಎಲ್ಲರೂ ಒಂದು ವಾರ ಸಾಂಸ್ಥಿಕ ಪ್ರತ್ಯೇಕವಾಸದಲ್ಲಿ ಇರಬೇಕು ಎಂಬ ನಿಯಮವನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಂಗಳವಾರ ರಾತ್ರಿ ರೂಪಿಸಿತ್ತು. ಈ ಪ್ರಯಾಣಿಕರು ಮಹಾರಾಷ್ಟ್ರಕ್ಕೆ ಬಂದಾಗ, ಬಂದ ನಂತರದ ಎರಡು, ನಾಲ್ಕು ಮತ್ತು ಏಳನೇ ದಿನ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ. ಕೋವಿಡ್‌ ದೃಢಪಟ್ಟರೆ ಆಸ್ಪತ್ರೆಗೆ ದಾಖಲಾಗಬೇಕು ಮತ್ತು ದೃಢಪಡದೇ ಇದ್ದರೆ ಏಳು ದಿನ ಸಾಂಸ್ಥಿಕ ಪ್ರತ್ಯೇಕವಾಸದಲ್ಲಿರಬೇಕು ಎಂದೂ ನಿಯಮ ಮಾಡಲಾಗಿದೆ. 

ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಆದೇಶವು ಕೇಂದ್ರವು ಹೊರಡಿಸಿರುವ ಮಾರ್ಗಸೂಚಿಗಿಂತ ವ್ಯತಿರಿಕ್ತವಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು ಹೇಳಿದ್ದಾರೆ. 

‘ಕೇಂದ್ರ ಆರೋಗ್ಯ ಸಚಿವಾಲಯವು ಸಿದ್ಧಪಡಿಸಿರುವ ಮಾರ್ಗಸೂಚಿಗೆ ಅನುಗುಣವಾಗಿಯೇ ನಿಯಮಗಳನ್ನು ರೂಪಿಸಬೇಕು. ಮಾರ್ಗಸೂಚಿಯು ದೇಶದಾದ್ಯಂತ ಏಕರೂಪದಲ್ಲಿ ಜಾರಿಯಾಗಬೇಕು. ಪ್ರಯಾಣಿಕರಿಗೆ ಆಗುವ ಅನನುಕೂಲ ತಪ್ಪಿಸುವುದಕ್ಕಾಗಿ ಮಾರ್ಗಸೂಚಿಗೆ ವ್ಯಾಪಕ ಪ್ರಚಾರವನ್ನೂ ನೀಡಬೇಕು’ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಹೇಳಲಾಗಿದೆ. 

ಕೇಂದ್ರದ ಮಾರ್ಗಸೂಚಿ ಪ್ರಕಾರ, ಓಮೈಕ್ರಾನ್‌ ದೃಢಪಟ್ಟ ದೇಶಗಳಿಂದ ಬಂದ ಪ್ರಯಾಣಿಕರು, ವಿಮಾನ ನಿಲ್ದಾಣದಲ್ಲಿ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು. ಫಲಿತಾಂಶ ಬರುವ ತನಕ ಕಾಯಬೇಕು. ಕೋವಿಡ್‌ ಇಲ್ಲ ಎಂದು ದೃಢಪಟ್ಟರೆ ವಿಮಾನ ನಿಲ್ದಾಣದಿಂದ ಹೊರ ಹೋಗಬಹುದು.

ಜಪಾನ್‌: ಬೂಸ್ಟರ್‌ ಡೋಸ್‌ ನೀಡಿಕೆ ಶುರು

ಟೋಕಿಯೊ: ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ತಡೆ ಲಸಿಕೆಯ ಬೂಸ್ಟರ್‌ ಡೋಸ್‌ ನೀಡಿಕೆಯನ್ನು ಜಪಾನ್‌ನಲ್ಲಿ ಬುಧವಾರ ಆರಂಭಿಸಲಾಗಿದೆ. ಓಮೈಕ್ರಾನ್‌ ಪ್ರಕರಣಗಳು ಜಪಾನ್‌ನಲ್ಲಿ ದೃಢಪಟ್ಟಿವೆ. ಹಾಗಾಗಿ, ತಕ್ಷಣದಿಂದಲೇ ಬೂಸ್ಟರ್‌ ಡೋಸ್‌ ನೀಡಲು ನಿರ್ಧರಿಸಲಾಯಿತು. 

ಫೆಬ್ರುವರಿ ಮಧ್ಯ ಭಾಗದಲ್ಲಿ ಜಪಾನ್‌ನಲ್ಲಿ ಲಸಿಕೆ ನೀಡಿಕೆ ಆರಂಭಿಸಲಾಗಿತ್ತು. ಆರೋಗ್ಯ ಕಾರ್ಯಕರ್ತರಲ್ಲಿ ಕೆಲವರು ಲಸಿಕೆ ಹಾಕಿಸಿಕೊಂಡು ಒಂಬತ್ತು ತಿಂಗಳ ಮೇಲಾಯಿತು. ಹೊಸ ರೂಪಾಂತರ ತಳಿ ಕೂಡ ಪತ್ತೆ ಆಗಿದೆ. ಹಾಗಾಗಿ, ಬೂಸ್ಟರ್‌ ಬೇಕು ಎಂಬ ಬೇಡಿಕೆಯನ್ನು ಆರೋಗ್ಯ ಕಾರ್ಯಕರ್ತರು ಮುಂದಿಟ್ಟಿದ್ದರು. 

ಓಮೈಕ್ರಾನ್‌ ರೂಪಾಂತರ ತಳಿಯ ವಿರುದ್ಧ ಲಸಿಕೆಯು ಎಷ್ಟು ಪರಿಣಾಮಕಾರಿ ಎಂಬುದು ಈಗ ಸ್ಪಷ್ಟವಿಲ್ಲ. ಆದರೆ, ಡೆಲ್ಟಾ ರೂಪಾಂತರ ತಳಿ ಸೇರಿದಂತೆ ವಿವಿಧ ತಳಿಗಳ ವಿರುದ್ಧ ಲಸಿಕೆ ಪರಿಣಾಮಕಾರಿ ಆಗಿದೆ. ಹಾಗಾಗಿ, ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳುವುದು ಅಗತ್ಯ ಎಂದು ಟೋಕಿಯೊ ಮೆಡಿಕಲ್‌ ಸೆಂಟರ್‌ನ ಮುಖ್ಯಸ್ಥ ಕಝುಹಿರೊ ಅರಕಿ ಹೇಳಿದ್ದಾರೆ. ಜಪಾನ್‌ನ ಶೇ 77ರಷ್ಟು ಮಂದಿ ಲಸಿಕೆಯ ಎರಡೂ ಡೋಸ್‌ ಹಾಕಿಸಿಕೊಂಡೆ. ಲಸಿಕೆ ಅಭಿಯಾನದ ಆರಂಭದಲ್ಲಿಯೇ ಲಸಿಕೆ ಹಾಕಿಸಿಕೊಂಡ ಹಿರಿಯ ನಾಗರಿಕರಿಗೆ ಬೂಸ್ಟರ್‌ ಡೋಸ್‌ ನೀಡಿಕೆ ಜನವರಿಯಿಂದ ಆರಂಭವಾಗುವ ನಿರೀಕ್ಷೆ ಇದೆ.

ಬೂಸ್ಟರ್‌ ಡೋಸ್‌ ಏಕೈಕ ರಕ್ಷಣೆ

ನವದೆಹಲಿ: ಓಮೈಕ್ರಾನ್‌ ಸೋಂಕನ್ನು ಎದುರಿಸಲು ಇರುವ ಅತ್ಯಂತ ಸುಲಭದ ದಾರಿ ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳುವುದು ಎಂದು ಖ್ಯಾತ ವೈರಾಣು ಶಾಸ್ತ್ರಜ್ಞ ಡಾ. ಟಿ. ಜೇಕಬ್‌ ಜಾನ್‌ ಹೇಳಿದ್ದಾರೆ. ಹೊಸ ರೂಪಾಂತರ ತಳಿಯು ಸಾಂಕ್ರಾಮಿಕದ ಮೂರನೇ ಅಲೆಗೆ ಕಾರಣ ಆಗದಿರಬಹುದು. ಆದರೆ, ಲಸಿಕೆ ಹಾಕಿಸಿಕೊಂಡವರಲ್ಲಿ ಕೂಡ ಓಮೈಕ್ರಾನ್‌ನಿಂದಾಗಿ ಸೋಂಕು ಕಾಣಿಸಿಕೊಳ್ಳಬಹುದು ಎಂದು ಅವರು ಅಂದಾಜಿಸಿದ್ದಾರೆ. 

‘ದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇ 30ರಷ್ಟು ಮಂದಿಗೆ ಮಾತ್ರ ಲಸಿಕೆಯ ಎರಡೂ ಡೋಸ್‌ ಹಾಕಲಾಗಿದೆ. ಅಂದರೆ, ಲೋಟದ ಮೂರನೇ ಒಂದು ಭಾಗ ಮಾತ್ರ ತುಂಬಿದೆ’ ಎಂದು ಅವರು ಹೇಳಿದ್ದಾರೆ. 

ಸಾಂಕ್ರಾಮಿಕದ ಮೊದಲ ಎರಡು ಅಲೆಗಳು ವ್ಯಾಪಕವಾಗಿ ಹರಡಿದ್ದರಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಮೊದಲ ಅಲೆಯಲ್ಲಿ ಶೇ 30ರಷ್ಟು ಮಂದಿಗೆ ಸೋಂಕು ತಗಲಿರಬಹುದು. ಎರಡನೇ ಅಲೆಯಲ್ಲಿ, ಬಾಕಿ ಉಳಿದವರಲ್ಲಿ ಶೇ 75ರಿಂದ ಶೇ 80ರಷ್ಟು ಜನರಿಗೆ ಸುಮಾರು 12 ವಾರಗಳಲ್ಲಿ ಸೋಂಕು ತಗುಲಿರಬಹುದು. ಈ ಹಿನ್ನೆಲೆಯಲ್ಲಿ ನೋಡಿದರೆ, ಓಮೈಕ್ರಾನ್‌ ದೇಶದೊಳಕ್ಕೆ ಪ್ರವೇಶಿಸಿ ವ್ಯಾಪಕವಾಗಿ ಹರಡಬಹುದೇ ಎಂಬುದನ್ನು ಅಂದಾಜಿಸಲಾಗದು. ಆದರೆ, ಜನರು ಹೆದರಿಕೊಂಡ ರೀತಿಯಲ್ಲಿ ಏನೂ ಆಗದು. ಹಾಗಿದ್ದರೂ ಓಮೈಕ್ರಾನ್‌ ದೇಶದೊಳಕ್ಕೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು, ಲಸಿಕೆ ಹಾಕಿಸಿಕೊಳ್ಳದವರಿಗೆ ಲಸಿಕೆ ಹಾಕಿಸಬೇಕು ಮತ್ತು ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡವರಿಗೆ ಬೂಸ್ಟರ್‌ ಡೋಸ್‌ ಹಾಕಿಸಬೇಕು ಎಂದು ಅವರು ಸಲಹೆ ಕೊಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು