ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದಿಂದ ಭರವಸೆಯತ್ತ ಪ್ರಯಾಣ: ಮೋದಿ

Last Updated 21 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತವು ಲಸಿಕೆ ಹಾಕಲು ಆರಂಭಿಸಿದ ನಂತರದ ಸುಮಾರು 9 ತಿಂಗಳಲ್ಲಿ 100 ಕೋಟಿ ಡೋಸ್‌ಗಳ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಿದೆ. ಕೋವಿಡ್-19 ನಿಗ್ರಹದಲ್ಲಿ, ವಿಶೇಷವಾಗಿ 2020ರ ಆರಂಭದಲ್ಲಿದ್ದ ಪರಿಸ್ಥಿತಿಯನ್ನು ನಾವು ನೆನಪಿಸಿಕೊಂಡರೆ ಇದೊಂದು ಅದ್ಭುತವಾದ ಪ್ರಯಾಣವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಕೋವಿಡ್‌ ವಿರುದ್ಧದ ಲಸಿಕೆ ಅಭಿಯಾನದಲ್ಲಿ ನೂರು ಕೋಟಿ ಲಸಿಕೆ ನೀಡಿಕೆಯ ಮಹತ್ವದ ಗುರಿ ದಾಟಿದ ಗುರುವಾರ ಅವರು ವಿಶೇಷ ಲೇಖನವೊಂದರಲ್ಲಿ ಹೀಗೆ ಹೇಳಿದ್ದಾರೆ.

‘ಮನುಕುಲವು 100 ವರ್ಷಗಳ ನಂತರ ಇಂತಹ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ ಮತ್ತು ಈ ವೈರಾಣುವಿನ ಬಗ್ಗೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ. ಅಪರಿಚಿತ ಮತ್ತು ಅದೃಶ್ಯ ಶತ್ರು ವೇಗವಾಗಿ ಪರಿವರ್ತಿತವಾಗುತ್ತಿದ್ದಂತೆಯೇ ಪರಿಸ್ಥಿತಿ ಎಷ್ಟು ಅನಿರೀಕ್ಷಿತವಾಗಿತ್ತು ಎಂಬುದನ್ನು ನಾವು ಮರೆತಿಲ್ಲ. ಆತಂಕದಿಂದ ಭರವಸೆಯೆಡೆಗೆ ಪ್ರಯಾಣಿಸಿದ್ದೇವೆ. ನಮ್ಮ ರಾಷ್ಟ್ರವು ಶಕ್ತಿಯುತವಾಗಿ ಹೊರಹೊಮ್ಮಿದೆ’ ಎಂದು ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಭಾಗವಹಿಸುವಿಕೆಯ ಉತ್ಸಾಹ ದಲ್ಲಿ ನಾಗರಿಕರು ಮತ್ತು ಸರ್ಕಾರವು ಒಂದು ಸಾಮಾನ್ಯ ಗುರಿಯೊಂದಿಗೆ ಒಗ್ಗೂಡಿದರೆ ಭಾರತವು ಏನನ್ನಾ ದರೂ ಸಾಧಿಸಬಹುದು ಎಂಬುದಕ್ಕೆ ಭಾರತದ ಲಸಿಕೆ ಅಭಿಯಾನ ಒಂದು ಉದಾಹರಣೆಯಾಗಿದೆ. ಭಾರತವು ತನ್ನ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ, ಅನೇಕರು 130 ಕೋಟಿ ಭಾರತೀಯರ ಸಾಮರ್ಥ್ಯಗಳನ್ನು ಅನುಮಾನಿಸಿದರು. ಭಾರತವು ಲಸಿಕೆ ನೀಡಲು 3-4 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಕೆಲವರು ಹೇಳಿದರು. ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುವುದಿಲ್ಲ ಎಂದು ಇನ್ನೂ ಕೆಲವರು ಹೇಳಿದರು. ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ತಪ್ಪು ನಿರ್ವಹಣೆ ಮತ್ತು ಅವ್ಯವಸ್ಥೆ ಇರುತ್ತದೆ ಎಂದು ಹೇಳಿದವರೂ ಇದ್ದರು. ಕೆಲವರು ಭಾರತವು ಪೂರೈಕೆ ಸರಪಳಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದರು. ಆದರೆ ತಮ್ಮನ್ನು ವಿಶ್ವಾಸಾರ್ಹ ಪಾಲುದಾರರನ್ನಾಗಿಸಿದರೆ ಫಲಿತಾಂಶಗಳು ಎಷ್ಟು ಅದ್ಭುತವಾಗಿರುತ್ತವೆ ಎಂಬುದನ್ನು ಜನರು ತೋರಿಸಿಕೊಟ್ಟರು ಎಂದು ಮೋದಿ ಅವರು ಲೇಖನದಲ್ಲಿ ಹೇಳಿದ್ದಾರೆ.

ಪ್ರತಿಯೊಬ್ಬರಿಗೂ ಮಾಲೀಕತ್ವದ ಮನೋಭಾವ ಬಂದರೆ ಯಾವುದೂ ಅಸಾಧ್ಯವಲ್ಲ. ನಮ್ಮ ಆರೋಗ್ಯ ಕಾರ್ಯಕರ್ತರು ಬೆಟ್ಟಗಳನ್ನು ಹತ್ತಿ, ನದಿಗಳನ್ನು ದಾಟಿ ಕಷ್ಟಕರವಾದ ಭೌಗೋಳಿಕ ಪ್ರದೇಶಗಳನ್ನು ತಲುಪಿ ಜನರಿಗೆ ಲಸಿಕೆ ಹಾಕಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಲಸಿಕೆಯ ಬಗ್ಗೆ ಭಾರತದಲ್ಲಿರುವ ಕನಿಷ್ಠ ಹಿಂಜರಿಕೆಯ ಶ್ರೇಯ ನಮ್ಮ ಯುವಕರು, ಸಾಮಾಜಿಕ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಿಗೆ ಸಲ್ಲಬೇಕು ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

ಲಸಿಕೆ ನೀಡಿಕೆಯಲ್ಲಿ ತಮಗೆ ಆದ್ಯತೆ ನೀಡಬೇಕು ಎಂದು ವಿವಿಧ ಹಿತಾಸಕ್ತಿ ಗುಂಪುಗಳಿಂದ ಸಾಕಷ್ಟು ಒತ್ತಡವಿತ್ತು. ಆದರೆ ನಮ್ಮ ಇತರ ಯೋಜನೆಗಳಂತೆ, ಲಸಿಕೆ ಹಾಕುವಿಕೆಯಲ್ಲೂ ಯಾವುದೇ ವಿಐಪಿ ಸಂಸ್ಕೃತಿಯಿಲ್ಲ ಎಂದು ಸರ್ಕಾರ ಖಚಿತಪಡಿಸಿತು ಎಂದು ಅವರು ಹೇಳಿದ್ದಾರೆ.

ಲಸಿಕೆಗಳ ವಿಚಾರದಲ್ಲಿ ಭಾರತವು ನಿಜವಾಗಿಯೂ ಆತ್ಮನಿರ್ಭರವಾಗಿದೆ. ನಮ್ಮ ಲಸಿಕೆ ತಯಾರಕರು, ಇಷ್ಟು ಬೃಹತ್ ಜನಸಂಖ್ಯೆಯ ಬೇಡಿಕೆಗಳನ್ನು ಪೂರೈಸಲು ಸಮರ್ಥರಾಗುವ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಸ್ವದೇಶಿ ವಿಶ್ವಾಸ

ಯಾವುದೇ ಪ್ರಯತ್ನದಲ್ಲಿ ವೇಗ ಮತ್ತು ಪ್ರಮಾಣವನ್ನು ಸಾಧಿಸಲು ಮತ್ತು ಅದನ್ನು ಉಳಿಸಿಕೊಳ್ಳಲು ಎಲ್ಲಾ ಪಾಲುದಾರರ ವಿಶ್ವಾಸವು ನಿರ್ಣಾಯಕವಾಗಿದೆ. ಈ ಅಭಿಯಾನದ ಯಶಸ್ಸಿಗೆ ಒಂದು ಪ್ರಮುಖ ಕಾರಣವೆಂದರೆ, ಅಪನಂಬಿಕೆ ಮತ್ತು ಭಯವನ್ನು ಸೃಷ್ಟಿಸುವ ಹಲವಾರು ಪ್ರಯತ್ನಗಳ ನಡುವೆಯೂ ಜನರು ಲಸಿಕೆಯ ಬಗ್ಗೆ ತೋರಿಸಿದ ವಿಶ್ವಾಸ ಮತ್ತು ಲಸಿಕೆ ನೀಡಿಕೆಯಲ್ಲಿ ಅನುಸರಿಸಲಾದ ಪ್ರಕ್ರಿಯೆ.ನಮ್ಮಲ್ಲಿ ಕೆಲವರು ದೈನಂದಿನ ಅಗತ್ಯಗಳಿಗೂ ವಿದೇಶಿ ಬ್ರಾಂಡ್‌ಗಳನ್ನು ಮಾತ್ರ ನಂಬುತ್ತಾರೆ. ಆದಾಗ್ಯೂ, ಕೋವಿಡ್ -19 ಲಸಿಕೆಯಂತಹ ನಿರ್ಣಾಯಕವಾದ ವಿಷಯ ಬಂದಾಗ, ಭಾರತದ ಜನರು ಸರ್ವಾನುಮತದಿಂದ ‘ಮೇಡ್ ಇನ್ ಇಂಡಿಯಾ’ ಲಸಿಕೆಗಳ ಮೇಲೆ ವಿಶ್ವಾಸವಿಟ್ಟರು. ಇದೊಂದು ಮಹತ್ವದ ಮಾದರಿ ಬದಲಾವಣೆಯಾಗಿದೆ ಎಂದು ಮೋದಿ ಅವರು ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT