ಭಾನುವಾರ, ಆಗಸ್ಟ್ 14, 2022
28 °C
ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ಕೋವಿಡ್‌ ಲಸಿಕೆ ಅಭಿಯಾನ: ಅಡ್ಡ ಪರಿಣಾಮ ನಿರ್ವಹಣೆಗೆ ಪ್ರತ್ಯೇಕ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ವಿರುದ್ಧ ಬೃಹತ್ ಲಸಿಕಾ ಅಭಿಯಾನಕ್ಕೆ ಭಾರತ ಸಜ್ಜಾಗುತ್ತಿದೆ. ಲಸಿಕೆ ಹಾಕಿಸಿಕೊಂಡ ವ್ಯಕ್ತಿಯಲ್ಲಿ ಸಮಸ್ಯೆ ಕಾಣಿಸಿಕೊಂಡರೆ, ಅವರಿಗೆ ತುರ್ತು ಚಿಕಿತ್ಸೆ ನೀಡಲು ಪ್ರತಿ ತಾಲ್ಲೂಕಿನಲ್ಲಿ ಒಂದು ನಿರ್ವಹಣಾ ಕೇಂದ್ರವನ್ನು ಸಜ್ಜುಗೊಳಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ.

ಈಗಾಗಲೇ ಹೊರಡಿಸಿರುವ ಮಾರ್ಗ ಸೂಚಿ ಪ್ರಕಾರ, ಲಸಿಕೆ ಹಾಕಿಸಿಕೊಂಡ ವ್ಯಕ್ತಿಯು ಲಸಿಕಾ ಕೇಂದ್ರದಲ್ಲಿ 30 ನಿಮಿಷ ಉಳಿಯಬೇಕು. ಈ ಅವಧಿಯಲ್ಲಿ ವ್ಯಕ್ತಿಯ‌ಲ್ಲಿ ಅಧಿಕ ಜ್ವರ, ಅಲರ್ಜಿ ಮೊದ ಲಾದ ಸಮಸ್ಯೆ ಕಾಣಿಸಿಕೊಂಡರೆ, ಗೊತ್ತುಪಡಿಸಿದ ಚಿಕಿತ್ಸಾ ಕೇಂದ್ರಕ್ಕೆ ತಕ್ಷಣ ಕರೆದೊಯ್ಯಬೇಕು ಎಂದು ತಿಳಿಸಲಾಗಿದೆ.

ಪ್ರತಿ ತಾಲ್ಲೂಕಿನಲ್ಲಿಯೂ ಇಂತಹ ಕೇಂದ್ರವನ್ನು ಸಜ್ಜುಗೊಳಿಸುವಂತೆ ಎಲ್ಲ 633 ಜಿಲ್ಲೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಲ್ಲಿ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಇರಬೇಕು. ಲಸಿಕೆ ನೀಡಿಕೆ ಕೇಂದ್ರಗಳು ಯಾವ ನಿರ್ವಹಣಾ ಕೇಂದ್ರದ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಮೊದಲೇ ಗುರುತಿಸಬೇಕು. ಇದರಿಂದ, ಅಡ್ಡಪರಿಣಾಮ ಕಾಣಿಸಿಕೊಂಡ ವ್ಯಕ್ತಿ ಯನ್ನು ತ್ವರಿತವಾಗಿ ಈ ಕೇಂದ್ರಕ್ಕೆ ಕರೆದೊಯ್ಯಲು ಸಾಧ್ಯವಾಗುತ್ತದೆ ಎಂದು ಸೂಚಿಸಲಾಗಿದೆ.

‘ಈಗಾಗಲೇ ರೂಪಿಸಿರುವ ಲಸಿಕೆ ಅಡ್ಡಪರಿಣಾಮ ವ್ಯವಸ್ಥೆಯು ಮಕ್ಕಳು ಮತ್ತು ಮಹಿಳೆಯರನ್ನು ಕೇಂದ್ರೀಕರಿಸಿಕೊಂಡಿದೆ. ಅದಲ್ಲದೆ, ಈವರೆಗೆ ಹೆಚ್ಚಿನ ಲಸಿಕೆಗಳನ್ನು ಆಸ್ಪತ್ರೆಗಳಲ್ಲಿಯೇ ನೀಡಲಾಗುತ್ತಿತ್ತು. ಎಲ್ಲರಿಗೂ ನೀಡಲಾಗುವ ಕೋವಿಡ್‌ ಲಸಿಕೆಯ ಅಡ್ಡ ಪರಿಣಾಮ ನಿರ್ವಹಣೆಗೆ ಪ್ರತ್ಯೇಕ ನಿರ್ವಹಣಾ ಘಟಕಗಳು ಬೇಕು. ಅದಲ್ಲದೆ, ವಿವಿಧ ಕಂಪನಿಗಳು ಕೋವಿಡ್‌ ಲಸಿಕೆ ತಯಾರಿಸಿವೆ. ಹಾಗಾಗಿ, ಪರಿಣಾಮ ಭಿನ್ನವಾಗಿರಬಹುದು’ ಎಂದು ನೀತಿ ಆಯೋಗದ ಸದಸ್ಯ ಹಾಗೂ ದೆಹಲಿ ಏಮ್ಸ್ ನಿವೃತ್ತ ಪ್ರಾಧ್ಯಾಪಕ ವಿನೋದ್ ಪಾಲ್ ಹೇಳಿದ್ದಾರೆ.

‘ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವ ಸಂಭವವಿಲ್ಲ ಎಂದು ಹೇಳಲಾಗದು. ಲಸಿಕೆ ನೀಡಲು ಕೆಲವು ದೇಶಗಳು ಈಗಾಗಲೇ ಮುಂದಾಗಿದ್ದು, ಬ್ರಿಟನ್‌ನಲ್ಲಿ ಮೊದಲ ದಿನವೇ ಪ್ರತಿಕೂಲ ಪರಿಣಾಮ ಕಂಡುಬಂದಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ದಿಸೆಯಲ್ಲಿ ಸಜ್ಜಾಗಬೇಕು’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಪ್ರಯೋಗದ ವೇಳೆ ಅಡ್ಡ ಪರಿಣಾಮ
ಮನುಷ್ಯರ ಮೇಲೆ ಪ್ರಯೋಗ ನಡೆಸುವಾಗ ಹೈದರಾಬಾದ್‌ನ ಭಾರತ್ ಬಯೊಟೆಕ್ ಮತ್ತು ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ನಲ್ಲಿ ಅಡ್ಡಿಪರಿಣಾಮದ ಎರಡು ಘಟನೆ ವರದಿಯಾಗಿದ್ದವು. ಪ್ರಾಥಮಿಕ ತನಿಖೆಗಳ ಪ್ರಕಾರ, ಲಸಿಕೆ ಮತ್ತು ಅಡ್ಡ ಪರಿಣಾಮಗಳ ನಡುವೆ ಯಾವುದೇ ಸಂಬಂಧ ಕಂಡುಬಂದಿಲ್ಲ ಎಂಬ ಉತ್ತರ ನೀಡಿ, ಪ್ರಯೋಗ ಮುಂದುವರಿಸಲಾಗಿತ್ತು. ಕೇಂದ್ರೀಯ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಈ ಬಗ್ಗೆ ಮೌನವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು