ಭಾನುವಾರ, ಜೂನ್ 13, 2021
25 °C
ಗುಜರಾತಿಗೆ ಅಪ್ಪಳಿಸಿದ ತೌತೆ

ತೌತೆ ಚಂಡಮಾರುತದ ಅಬ್ಬರ: ಮುಂಬೈಯಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ತೌತೆ ಚಂಡಮಾರುತವು ಸೋಮವಾರ ಮುಂಬೈನಲ್ಲಿ ಅನಾಹುತ ಸೃಷ್ಟಿಸಿದೆ. ನಗರದ ಹಲವು ಭಾಗಗಳು ಮತ್ತು ನೆರೆಯ ಪ್ರದೇಶಗಳಲ್ಲಿ ಭಾರೀ ಮಳೆಯೊಂದಿಗೆ ಬಿರುಗಾಳಿ ಬೀಸಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಬೃಹನ್‌ಮುಂಬೈ ಪಾಲಿಕೆಯು ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸದಲ್ಲಿ ತೊಡಗಿದೆ. 

ಚಂಡಮಾರುತವು ಗಂಟೆಗೆ 114 ಕಿಲೋಮೀಟರ್ ವೇಗದಲ್ಲಿ ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸಿತು. ಮುಂಜಾಗ್ರತಾ ಕ್ರಮವಾಗಿ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಹಳಿಗಳ ಮೇಲೆ ನೀರು ನಿಂತಿದ್ದರಿಂದ ವಡಾಲ ಮತ್ತು ಸಿಎಸ್‌ಎಂಟಿ ನಡುವಿನ ಉಪನಗರ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ರಾಜ್ಯದ ಕೊಂಕಣ ಪ್ರದೇಶದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಮುಂಬೈ, ಥಾಣೆ ಮತ್ತು ರಾಜ್ಯದ ಇತರ ಕರಾವಳಿ ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿದರು. 

ಮಳೆಯ ಕಾರಣ 12,000ಕ್ಕೂ ಹೆಚ್ಚು ನಾಗರಿಕರನ್ನು ಕರಾವಳಿ ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ರಾಯಗಡದಲ್ಲಿ 8,380, ರತ್ನಗಿರಿಯಲ್ಲಿ 3,896ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ 144 ಜನರನ್ನು ಸ್ಥಳಾಂತರ ಮಾಡಲಾಯಿತು.ರಾಯಗಡದಲ್ಲಿ 23 ಮಿ.ಮೀ ಮಳೆಯಾಗಿದ್ದು, 839 ಮರಗಳು ಬಿದ್ದಿವೆ.

ಗುಜರಾತ್‌ನಲ್ಲಿ ಆತಂಕ

ಅಹಮದಾಬಾದ್: ಗಂಟೆಗೆ 185 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಚಂಡಮಾರುತವು ಗುಜರಾತ್‌ಗೆ ರಾತ್ರಿ 8.30ಕ್ಕೆ ಅಪ್ಪಳಿದೆ. ಮುನ್ನೆಚ್ಚರಿಕೆ ಕ್ರಮವಾಗಿ 1.5 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ನ 54 ತಂಡಗಳನ್ನು ನಿಯೋಜಿಸಲಾಗಿದೆ.

ಪೋರಬಂದರ್ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ರೋಗಿಗಳನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಂಡಮಾರುತದ ಪರಿಣಾಮ ಎದುರಿಸಲು ಕೇಂದ್ರ ಸರ್ಕಾರವು ಗುಜರಾತ್‌ಗೆ ಎಲ್ಲಾ ಸಹಾಯವನ್ನು ನೀಡಿದ್ದು, ಅಗತ್ಯವಿದ್ದಲ್ಲಿ ಆಡಳಿತಕ್ಕೆ ಸಹಾಯ ಮಾಡಲು ಸೇನೆ, ನೌಕಾಪಡೆ ಮತ್ತು ವಾಯುಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಲಾಗಿದೆ.

ಚಂಡಮಾರುತದ ಪ್ರತಾಪ

l ಬಾಂಬೆ ಹೈ ಏರಿಯಾದ ಹೀರಾ ಆಲಿಲ್ ಫೀಲ್ಡ್ಸ್‌ನಲ್ಲಿ 273 ಸಿಬ್ಬಂದಿಯೊಂದಿಗೆ ಸಿಲುಕಿಕೊಂಡಿರುವ ಪಿ–305 ಹೆಸರಿನ ದೋಣಿಯ ರಕ್ಷಣೆಗೆ ಐಎನ್ಎಸ್ ಕೊಚ್ಚಿ ಯುದ್ಧನೌಕೆಯನ್ನು ಕಳುಹಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ

l ಮುಂಬೈನಿಂದ 8 ನಾಟಿಕಲ್ ಮೈಲು ದೂರದಲ್ಲಿ ಸಿಲುಕಿರುವ, 137 ಜನರು ಇರುವ ಜಿಎಎಲ್‌ ಕನ್‌ಸ್ಟ್ರಕ್ಟರ್‌ ದೋಣಿಯ ರಕ್ಷಣೆಗೆ ಐಎನ್‌ಎಸ್ ಕೋಲ್ಕತ್ತ ಧಾವಿಸಿದೆ

l ಮೇ 16ರ ರಾತ್ರಿ ಚಂಡಮಾರುತದಿಂದಾಗಿ ಕೇರಳದ ಕೊಚ್ಚಿ ಕರಾವಳಿಯಿಂದ 35 ನಾಟಿಕಲ್ ಮೈಲು ದೂರದಲ್ಲಿ ಸಿಲುಕಿದ್ದ 12 ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ

l ರಾಜ್ಯದ ಕೊಂಕಣ ಪ್ರದೇಶದ ರೈತರು ನಷ್ಟ ಅನುಭವಿಸಿದ್ದಾರೆ ಮತ್ತು ಹಾನಿಯನ್ನು ಪರಿಶೀಲಿಸುವ ಮತ್ತು ಅಂದಾಜು ಮಾಡುವ ಕೆಲಸ ಪ್ರಾರಂಭವಾಗಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ

l ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾದ ಮುಖ್ಯಮಂತ್ರಿಗಳು, ದಮನ್ ಮತ್ತು ಡಿಯು ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಮಾತನಾಡಿದರು

l ಚಂಡಮಾರುತದಿಂದಾಗಿ ಮಧ್ಯಪ್ರದೇಶದ 13 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಆರೆಂಜ್ ಅಲರ್ಟ್ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು