ಸೋಮವಾರ, ಅಕ್ಟೋಬರ್ 18, 2021
26 °C

ಮೋದಿ ಜನ್ಮದಿನದಂದು ದಾಖಲೆ: ಮಧ್ಯಾಹ್ನದ ಹೊತ್ತಿಗೆ 1 ಕೋಟಿ ಡೋಸ್ ಲಸಿಕೆ ವಿತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ದೇಶದ ಹಲವು ಭಾಗಗಳಲ್ಲಿ ವಿಶೇಷ ಕೋವಿಡ್‌–19 ಲಸಿಕೆ ಅಭಿಯಾನ ಆಯೋಜಿಸಲಾಗಿದ್ದು, ಮಧ್ಯಾಹ್ನದ ವೇಳೆಗೆ ದೇಶದಾದ್ಯಂತ ಒಂದು ಕೋಟಿಗೂ ಅಧಿಕ ಡೋಸ್‌ ಲಸಿಕೆ ಹಾಕಲಾಗಿದೆ. ಈ ಮೂಲಕ ದೇಶದಲ್ಲಿ ಹಾಕಲಾಗಿರುವ ಒಟ್ಟು ಕೋವಿಡ್‌ ಲಸಿಕೆ ಡೋಸ್‌ಗಳ ಸಂಖ್ಯೆ 78 ಕೋಟಿ ತಲುಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಶುಕ್ರವಾರ ಕೋವಿಡ್‌ ಲಸಿಕೆ ಹಾಕುವ ಪ್ರಕ್ರಿಯೆ ಕ್ಷಿಪ್ರವಾಗಿ ಒಂದು ಕೋಟಿ ಡೋಸ್‌ ದಾಟಿದೆ ಎಂದು ಕೇಂದ್ರದ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯಾ ತಿಳಿಸಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಮಧ್ಯಾಹ್ನ 1:30ರವರೆಗೂ, ದೇಶದಲ್ಲಿ ಕೋವಿಡ್‌ ಲಸಿಕೆ ನೀಡಿಕೆ 1 ಕೋಟಿ ಡೋಸ್‌ ದಾಟಿದೆ ಹಾಗೂ ನಾವು ಇನ್ನಷ್ಟು ಮುಂದೆ ಸಾಗುತ್ತಿದ್ದೇವೆ. ಲಸಿಕೆ ನೀಡಿಕೆಯಲ್ಲಿ ನಾವೆಲ್ಲರು ಇಂದು ಹೊಸ ದಾಖಲೆಯನ್ನೇ ಸೃಷ್ಟಿಸಲಿದ್ದೇವೆ ಹಾಗೂ ಪ್ರಧಾನಿಗೆ ಅದನ್ನು ಉಡುಗೊರೆಯಾಗಿ ನೀಡುವ ನಂಬಿಕೆ ಇದೆ' ಎಂದು ಮನಸುಖ್‌ ಅವರು ಹಿಂದಿಯಲ್ಲಿ ಟ್ವೀಟಿಸಿದ್ದಾರೆ. ಪೋಸ್ಟ್‌ನಲ್ಲಿ ವ್ಯಾಕ್ಸಿನ್‌ಸೇವಾ (VaccineSeva) ಮತ್ತು ಹ್ಯಾಪಿ ಬರ್ತ್‌ಡೇ ಮೋದಿ ಜೀ (HappyBdayModiji) ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿದ್ದಾರೆ.

ಮಧ್ಯಾಹ್ನ 4ರ ಹೊತ್ತಿಗೆ ಕೋವಿಡ್‌–19 ಲಸಿಕೆ ವಿತರಣೆಯು 1.66 ಕೋಟಿ ದಾಟಿದೆ. 

ಒಂದು ತಿಂಗಳಲ್ಲಿ ನಾಲ್ಕನೇ ಬಾರಿಗೆ ಕೋವಿಡ್‌ ಲಸಿಕೆ ಹಂಚಿಕೆ ಒಂದು ಕೋಟಿ ಡೋಸ್‌ ಮುಟ್ಟಿದೆ. ಈ ಹಿಂದೆ ಸೆಪ್ಟೆಂಬರ್‌ 6, ಆಗಸ್ಟ್‌ 31, ಆಗಸ್ಟ್‌ 27ರಂದು ಲಸಿಕೆ ನೀಡಿಕೆ ಒಂದು ಕೋಟಿ ಡೋಸ್‌ ದಾಟಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಕೋವಿಡ್‌–19 ಲಸಿಕೆ ಅಭಿಯಾನಕ್ಕೆ ಆದ್ಯತೆ ನೀಡುವಂತೆ ಗುರುವಾರ ಮನಸುಖ್‌ ಆಗ್ರಹಿಸಿದ್ದರು. ಬಿಜೆಪಿ ದೇಶದಾದ್ಯಂತ ಹೆಚ್ಚು ಜನರು ಲಸಿಕೆ ಪಡೆದುಕೊಳ್ಳಲು ಸಹಕಾರ ನೀಡುವಂತೆ ತನ್ನ ಕಾರ್ಯಕರ್ತರಿಗೆ ಸೂಚಿಸಿತ್ತು.

ಇದನ್ನೂ ಓದಿ– ಮೋದಿ ಜನ್ಮದಿನ: ಶುಭ ಕೋರಿದವರಿಗಿಂತ ಉದ್ಯೋಗ ಕೇಳಿದವರೇ ಹೆಚ್ಚು!

ಲಸಿಕೆ ಅಭಿಯಾನದ ಹಾದಿ...

ಭಾರತದಲ್ಲಿ ಲಸಿಕೆ ಅಭಿಯಾನ ಆರಂಭವಾಗಿ 85 ದಿನಗಳಲ್ಲಿ 10 ಕೋಟಿ ಲಸಿಕೆ ಡೋಸ್‌ ಹಂಚಿಕೆಯಾಯಿತು. ಅನಂತರ 45 ದಿನಗಳಲ್ಲಿ 20 ಕೋಟಿ ಡೋಸ್‌, ಮುಂದಿನ 29 ದಿನಗಳಲ್ಲಿ 30 ಕೋಟಿ ಡೋಸ್‌, ಬಳಿಕ 24 ದಿನಗಳಲ್ಲಿ ಲಸಿಕೆ ಹಂಚಿಕೆ 40 ಕೋಟಿ ಡೋಸ್‌ ದಾಟಿತು. ಆಗಸ್ಟ್‌ 6ರಂದು ಒಟ್ಟು ಲಸಿಕೆ ನೀಡಿಕೆ 50 ಕೋಟಿ ಡೋಸ್‌ ತಲುಪಿತು. ಸೆಪ್ಟೆಂಬರ್‌ 7ರಂದು 70 ಕೋಟಿ ಡೋಸ್‌ ಹಾಗೂ ಸೆಪ್ಟೆಂಬರ್‌ 13ರಂದು ಒಟ್ಟು ಹಾಕಲಾಗಿರುವ ಲಸಿಕೆ 75 ಕೋಟಿ ಡೋಸ್‌ ದಾಟಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು