ಸೋಮವಾರ, ಸೆಪ್ಟೆಂಬರ್ 27, 2021
23 °C

ಅತ್ಯಾಚಾರ ಪ್ರಕರಣ: ರಾಹುಲ್‌ ಗಾಂಧಿ ವಿರುದ್ಧದ ಅರ್ಜಿ ವಿಚಾರಣೆ ಸೆ.27ಕ್ಕೆ ನಿಗದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪದಡಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 27ರಂದು ನಡೆಸುವುದಾಗಿ ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದೆ.

ಆಗಸ್ಟ್‌ 1 ರಂದು ದೆಹಲಿಯ ಓಲ್ಡ್‌ ನಂಗಲ್‌ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಕುಟುಂಬದವರು ದೂರಿದ್ದರು. ಈ ಸಂಬಂಧ ರಾಹುಲ್‌ ಗಾಂಧಿ ಅವರು ಸಂತ್ರಸ್ತೆಯ ಕುಟುಂಬಸ್ಥರ ಜೊತೆಗಿನ ಫೋಟೊವನ್ನು ಟ್ವೀಟ್‌ ಮಾಡಿದ್ದರು.

ಈ ಸಂಬಂಧ ಮಕರಂದ್ ಸುರೇಶ್ ಮಡ್ಲೇಕರ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.

‘ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬಸ್ಥರ ಜೊತೆಗಿನ ಫೋಟೊವನ್ನು ಹಂಚಿಕೊಳ್ಳುವ ಮೂಲಕ ರಾಹುಲ್‌ ಗಾಂಧಿ ಕಾನೂನು ಉಲ್ಲಂಘಿಸಿದ್ದಾರೆ. ಈ ಪ್ರಕರಣದಿಂದ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸಿದ್ದಾರೆ. ಹಾಗಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು ರಾಹುಲ್‌ ಗಾಂಧಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್‌ ಪಟೇಲ್‌ ಅವರ ಪೀಠವು,‘ಈ ಹಂತದಲ್ಲಿ ನೋಟಿಸ್‌ ಜಾರಿ ಮಾಡಲು ಸಾಧ್ಯವಿಲ್ಲ. ಮುಂದಿನ ವಿಚಾರಣೆ ವೇಳೆ ಎರಡೂ ಕಡೆಯವರು 1–2ರ ಪುಟಗಳ ವರದಿ ಸಲ್ಲಿಸುವಂತೆ ಸೂಚಿಸಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಮಾಡಿದ್ದ ಟ್ವೀಟ್‌ ಅನ್ನು ತೆಗೆಯಲಾಗಿದೆ. ಅವರ ಖಾತೆಯನ್ನು ಬ್ಲಾಕ್‌ ಮಾಡಲಾಗಿದೆ. ಸದ್ಯ ಈ ಟ್ವೀಟ್‌ ಲಭ್ಯವಿಲ್ಲ’ ಎಂದು ಟ್ವಿಟರ್‌ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಸಾಜನ್‌ ಪೂವಯ್ಯ ಅವರು ತಿಳಿಸಿದರು.

ಟ್ವಿಟರ್‌ ನಿಲುವಿಗೆ ವಿರೋಧ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರಾದ ಗೌತಮ್‌ ಜಾ, ನೋಟಿಸ್‌ ಜಾರಿ ಮಾಡುವಂತೆ ಒತ್ತಾಯಿಸಿದರು. ರಾಹುಲ್ ಗಾಂಧಿ ಪರ ಹಿರಿಯ ವಕೀಲ ಆರ್‌.ಎಸ್‌ ಚೀಮಾ ಅವರೂ ನ್ಯಾಯಾಲಯದಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು