ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಬಾಲಕಿ ಸಾವು: ಕಾಂಗ್ರೆಸ್ ಸೇವಾದಳದಿಂದ ಮೇಣದ ಬತ್ತಿ ಹಿಡಿದು ಮೆರವಣಿಗೆ

Last Updated 8 ಆಗಸ್ಟ್ 2021, 3:11 IST
ಅಕ್ಷರ ಗಾತ್ರ

ಗಾಜಿಯಾಬಾದ್‌: ಈ ವಾರದ ಆರಂಭದಲ್ಲಿ ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಒಂಬತ್ತು ವರ್ಷದ ದಲಿತ ಬಾಲಕಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಕಾಂಗ್ರೆಸ್‌ನ ಮುಂಚೂಣಿ ಸಂಘಟನೆಯಾದ ಸೇವಾದಳ ಇಲ್ಲಿ ಮೇಣದ ಬತ್ತಿ ಹಿಡಿದು ಮೆರವಣಿಗೆ ನಡೆಸಿತು.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಸೇರಿದಂತೆ ಇತರರು ಶುಕ್ರವಾರ ರಾತ್ರಿ ಕ್ಲಾಕ್ ಟವರ್‌ ಬಳಿಯ ಶಾಹೀದ್ ಭಗತ್ ಪ್ರತಿಮೆ ಬಳಿಯಲ್ಲಿ ಜಮಾಯಿಸಿದರು. ಸಂತ್ರತ್ತೆ ನೆನಪಿಗಾಗಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿದರು.

ಬಾಲಕಿಯ ಪೋಷಕರ ಪ್ರಕಾರ, ನೈಋತ್ಯ ದೆಹಲಿ ಹಳೆಯ ನಂಗಲ್ ಪ್ರದೇಶದಲ್ಲಿ ಅವರ ಮನೆಯ ಎದುರಿನ ಸ್ಮಶಾನದಲ್ಲಿ ಕೂಲರ್‌‌ನಿಂದ ತಣ್ಣೀರು ತರಲೆಂದು ಆಗಸ್ಟ್ 1 ರಂದು ಸಂಜೆ 5.30 ರ ಸುಮಾರಿಗೆ ಬಾಲಕಿ ಹೊರಗೆ ಹೋಗಿದ್ದಳು. ಸಂಜೆ 6ಗಂಟೆ ಸುಮಾರಿಗೆ ಸ್ಮಶಾನದ ಸಿಬ್ಬಂದಿ ರಾಧೇ ಶ್ಯಾಂ ಮತ್ತು ಇನ್ನಿಬ್ಬರು ಬಾಲಕಿಯ ತಾಯಿಯನ್ನು ಸ್ಥಳಕ್ಕೆ ಕರೆದಿದ್ದಾರೆ. ಬಾಲಕಿಯ ದೇಹವನ್ನು ತಾಯಿಗೆ ತೋರಿಸಿ, ಕೂಲರ್‌ನಿಂದ ನೀರು ಪಡೆಯುವಾಗ ಆಕೆಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.

ಬಳಿಕ ಬಾಲಕಿಯ ತಾಯಿಯು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡದಂತೆಯೂ ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಪೊಲೀಸರಿಗೆ ದೂರು ನೀಡುವುದರಿಂದಾಗಿ ಮರಣೋತ್ತರ ಪರೀಕ್ಷೆ ವೇಳೆ ಪೊಲೀಸರು ಬಾಲಕಿಯ ಅಂಗಗಳನ್ನು ಕದಿಯುತ್ತಾರೆ. ಹೀಗಾಗಿ ಆಕೆಯ ದೇಹವನ್ನು ಸುಡುವುದು ಉತ್ತಮ ಎಂದು ಹೇಳಿ ಬಲವಂತವಾಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ ಎಂದು ದೂರಲಾಗಿದೆ.

ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಸತೀಶ್ ಶರ್ಮಾ, ಬಿಜೆಪಿ ಆಡಳಿತದಲ್ಲಿ ಮಹಿಳೆಯರು ಮತ್ತು ಯುವತಿಯರು ಸುರಕ್ಷಿತವಾಗಿಲ್ಲ. ದಲಿತ ಬಾಲಕಿಯ ಸಾವಿಗೆ ಕಾರಣರಾದವರಿಗೆ ಮರಣದಂಡನೆ ವಿಧಿಸಬೇಕು. ಪೊಲೀಸರು ಮೂಕ ಪ್ರೇಕ್ಷಕರಾದಾಗ ಅಪರಾಧಿಗಳು ಎಲ್ಲಾ ರೀತಿಯ ಅಪರಾಧಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ದಲಿತ ಸಮುದಾಯಕ್ಕೆ ಕಿರುಕುಳ ನೀಡಲಾಗುತ್ತಿದೆ ಮತ್ತು ಹಿಂಸಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು, ಕಾಂಗ್ರೆಸ್ ವಿರುದ್ಧ ರಾಜಕೀಯಗೊಳಿಸುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ ಎಂದು ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT