ಗುರುವಾರ , ಜನವರಿ 28, 2021
25 °C
ಸಿಯಾಚಿನ್‌ನಲ್ಲಿ ಪಾಕಿಸ್ತಾನ ಸೇನೆಯ ಚಟುವಟಿಕೆ ಗುರುತಿಸಿದ್ದ ಪರ್ವತಾರೋಹಿ

ನಿವೃತ್ತ ಕರ್ನಲ್‌ ನರೇಂದ್ರ ಬುಲ್‌ ಕುಮಾರ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಎಂದೇ ಖ್ಯಾತವಾಗಿರುವ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ, 1984ರಲ್ಲಿ ಪಾಕಿಸ್ತಾನ ಸೇನೆಯ ಚಟುವಟಿಕೆಗಳನ್ನು ಗುರುತಿಸಿದ್ದ ಖ್ಯಾತ ಪರ್ವತಾರೋಹಿ ನಿವೃತ್ತ ಕರ್ನಲ್‌ ನರೇಂದ್ರ ಬುಲ್‌ ಕುಮಾರ್‌ (87) ಗುರುವಾರ ಸೇನಾ ಆಸ್ಪತ್ರೆಯಲ್ಲಿ ನಿಧನರಾದರು.

ಭಾರತದ ಅತ್ಯುತ್ತಮ ಪರ್ವತಾರೋಹಿಯಾಗಿದ್ದ ಕುಮಾರ್‌, ಸುಮಾರು ಅರ್ಧ ಶತಮಾನದ ಹಿಂದೆ ಉತ್ತರ ಕಾಶ್ಮೀರದ ನಕ್ಷೆಯೊಂದನ್ನು ನೋಡುವ ಸಂದರ್ಭದಲ್ಲಿ ಗಡಿ ನಿಯಂತ್ರಣಾ ರೇಖೆಯು (ಎಲ್‌ಒಸಿ) ನಿರ್ದಿಷ್ಟ ಸ್ಥಳಕ್ಕಿಂತಲೂ ಪೂರ್ವದಲ್ಲಿ ಬಹಳಷ್ಟು ಒಳಗಿರುವುದನ್ನು ಗಮನಿಸಿದ್ದರು. ಅಮೆರಿಕದ ಏಜೆನ್ಸಿಯೊಂದು ರಚಿಸಿದ್ದ ಈ ನಕ್ಷೆಯಲ್ಲಿ ಸಿಯಾಚಿನ್‌ ನೀರ್ಗಲ್ಲು ಪ್ರದೇಶ ಸೇರಿದಂತೆ ಉತ್ತರ ಕಾಶ್ಮೀರದ ಬಹುಭಾಗವು ಪಾಕಿಸ್ತಾನಕ್ಕೆ ಸೇರಿದೆ ಎಂಬ ರೀತಿಯಲ್ಲಿ ರಚಿಸಿತ್ತು. 

ದೋಷಯುಕ್ತವಾದ ಈ ನಕ್ಷೆಯ ಬಗ್ಗೆ ಕುಮಾರ್‌ ಸೇನೆಯ ಕೇಂದ್ರ ಕಚೇರಿಯ ಗಮನಕ್ಕೆ ತಂದಿದ್ದರು. ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಲು, ಕೇಂದ್ರ ಕಚೇರಿಯು ಸಿಯಾಚಿನ್‌ ನೀರ್ಗಲ್ಲು ಪ್ರದೇಶಕ್ಕೆ ಕಾರ್ಯಯಾತ್ರೆ ನಡೆಸಲು ಒಪ್ಪಿಗೆ ನೀಡಿತ್ತು. ಭಾರತೀಯ ಸೇನೆಯ ಪರ್ವತ ಪ್ರದೇಶಗಳಲ್ಲಿ ಯುದ್ಧ ತರಬೇತಿ ನೀಡುವ ಶಾಲೆಯ ವಿದ್ಯಾರ್ಥಿಗಳ ಜೊತೆಗೂಡಿ ಸಿಯಾಚಿನ್‌ ನೀರ್ಗಲ್ಲು ಪ್ರದೇಶಕ್ಕೆ ಕುಮಾರ್‌ ತೆರಳಿದ್ದರು. ಅಲ್ಲಿಂದ ಮರಳುವ ವೇಳೆಗೆ ಪಾಕಿಸ್ತಾನದಲ್ಲಿ ತಯಾರಾದ ಸಿಗರೇಟ್‌ ಪ್ಯಾಕೆಟ್‌ಗಳು, ಆಹಾರದ ಪೊಟ್ಟಣ, ಪರ್ವತವನ್ನು ಹತ್ತಲು ಬಳಸುವ ಉಪಕರಣಗಳನ್ನು ಅವರು ತಂದಿದ್ದರು. ಈ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯ ಯೋಧರ ಇರುವಿಕೆಗೆ ಇದು ಸಾಕ್ಷಿಯಾಗಿತ್ತು. ಜೊತೆಗೆ ಈ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯ ಯುದ್ಧ ವಿಮಾನಗಳು ಹಾರಾಡುತ್ತಿರುವುದನ್ನೂ ಅವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.

ಈ ಸಾಕ್ಷ್ಯಗಳನ್ನು ಪರಿಗಣಿಸಿ, ನೀರ್ಗಲ್ಲು ಪ್ರದೇಶದಲ್ಲಿ ಚೀನಾ ಗಡಿಯವರೆಗಿನ ನಕ್ಷೆಯನ್ನು ಸಿದ್ಧಪಡಿಸುವಂತೆ ಕುಮಾರ್‌ ಅವರಿಗೆ ಸೇನಾ ಕೇಂದ್ರ ಕಚೇರಿಯು ತಿಳಿಸಿತ್ತು. ಇದೇ ಸಂದರ್ಭದಲ್ಲಿ, ಪಾಕಿಸ್ತಾನವು ವಿದೇಶಗಳಿಂದ ಪರ್ವತ ಪ್ರದೇಶಗಳಲ್ಲಿ ಯೋಧರಿಗೆ ಬೇಕಾಗುವ ಉಡುಪುಗಳನ್ನು ಖರೀದಿಸುತ್ತಿರುವುದರ ಬಗ್ಗೆ ಭಾರತದ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಸರ್ಕಾರವು, 1984ರ ಏಪ್ರಿಲ್‌ 13ರಂದು ‘ಆಪರೇಷನ್‌ ಮೇಘದೂತ್‌’ ಹೆಸರಿನ ಕಾರ್ಯಾಚರಣೆ ನಡೆಸಿ, ಕ್ಯಾಪ್ಟನ್‌ ಸಂಜಯ್‌ ಕುಲಕರ್ಣಿ ನೇತೃತ್ವದ ಸೇನಾ ಪಡೆಯನ್ನು ಹೆಲಿಕಾಪ್ಟರ್‌ ಮುಖಾಂತರ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ನಿಯೋಜಿಸಿತ್ತು. ಈ ಮೂಲಕ ಚತುರತೆಯಿಂದ ಪಾಕಿಸ್ತಾನವನ್ನು ಭಾರತ ಹಿಮ್ಮೆಟ್ಟಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಸಿಯಾಚಿನ್‌ ನೀರ್ಗಲ್ಲು ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಪರ್ವತ ಪ್ರದೇಶಗಳು ಭಾರತೀಯ ಸೇನೆಯ ನಿಯಂತ್ರಣದಲ್ಲಿವೆ.

‘ಒಂದು ವೇಳೆ ಕುಮಾರ್‌ ಅವರು ಸಿಯಾಚಿನ್‌ಗೆ ತೆರಳದೇ ಇದ್ದಿದ್ದರೆ, ಆ ಪ್ರದೇಶವು ಇಂದು ಪಾಕಿಸ್ತಾನದ ಹಿಡಿತದಲ್ಲಿ ಇರುತ್ತಿತ್ತು. ಅವರ ವರದಿ ಆಧರಿಸಿಯೇ ಭಾರತೀಯ ಸೇನೆಯು ಆಪರೇಷನ್‌ ಮೇಘದೂತ್‌ ನಡೆಸಿತ್ತು’ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದರು.

‘ಕುಮಾರ್‌ ಅವರು, ನಂದಾದೇವಿ ಪರ್ವತವನ್ನು ಏರಿದ ಮೊದಲ ಭಾರತೀಯ. 1965ರಲ್ಲಿ ಮೌಂಟ್‌ ಎವರೆಸ್ಟ್‌ ಏರಿದ್ದ ಅವರು, ನಂತರದಲ್ಲಿ ಮೌಂಟ್‌ ಬ್ಲ್ಯಾಂಕ್‌, ಕಾಂಚನಜುಂಗಾ ಪರ್ವತ ಏರಿದ್ದರು. ಹಿಮಶಿಖರಗಳನ್ನು ಏರುವ ವೇಳೆ, ಹಿಮಗಡಿತದಿಂದ ಕಾಲಿನ ನಾಲ್ಕು ಬೆರಳುಗಳನ್ನು ಕಳೆದುಕೊಂಡರೂ ಈ ಎಲ್ಲ ಪರ್ವತಗಳನ್ನು ಅವರು ಏರಿದ್ದರು’ ಎಂದು ಅವರು ಸ್ಮರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು