ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿಯಲ್ಲಿ ಮೀಸಲಾತಿ ನೀಡಲು ಹೊಸ ನೀತಿ ರೂಪಿಸಿಕೊಡುವುದಿಲ್ಲ: ಸುಪ್ರೀಂ ಕೋರ್ಟ್‌

ಹಿಂದಿನ ತೀರ್ಪುಗಳಲ್ಲಿನ ಗೊಂದಲ ಪರಿಹರಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಂದ ಒತ್ತಾಯ
Last Updated 14 ಸೆಪ್ಟೆಂಬರ್ 2021, 19:56 IST
ಅಕ್ಷರ ಗಾತ್ರ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು ಹೊಸ ನೀತಿಯನ್ನು ರೂಪಿಸಿಕೊಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸ್ಪಷ್ಟಪಡಿಸಿದೆ. ಎಂ. ನಾಗರಾಜ್‌ (2006) ಮತ್ತು ಜರ್ನೈಲ್‌ ಸಿಂಗ್‌ (2018) ಪ್ರಕರಣಗಳಲ್ಲಿ ಬಡ್ತಿಯಲ್ಲಿ ಮೀಸಲಾತಿಯ ವಿಚಾರದ ತೀರ್ಪು ನೀಡಲಾಗಿದೆ ಎಂದು ಪೀಠವು ಹೇಳಿದೆ.

‘ಹಿಂದುಳಿದಿರುವಿಕೆಯನ್ನು ನಿರ್ಧರಿಸುವುದು ಹೇಗೆ ಎಂಬ ಬಗ್ಗೆ ಆದೇಶ ನೀಡಲಾಗಿದೆ. ಆ ನೀತಿಯನ್ನು ರಾಜ್ಯಗಳು ಜಾರಿ ಮಾಡಬೇಕು. ಹೊಸ ನೀತಿಯನ್ನು ನಾವು ರೂಪಿಸುವ ಅಗತ್ಯ ಇಲ್ಲ’ ಎಂದು ನ್ಯಾಯಮೂರ್ತಿ ಎಲ್‌. ನಾಗೇಶ್ವರ ರಾವ್‌ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.

ವಿವಿಧ ಹೈಕೋರ್ಟ್‌ಗಳು ನೀಡಿದ ಆದೇಶಗಳಿಂದಾಗಿ ಸುಮಾರು 2,500 ಹುದ್ದೆಗಳಿಗೆ ನೀಡಬೇಕಿದ್ದ ಬಡ್ತಿಯು ಸ್ಥಗಿತಗೊಂಡಿದೆ. ಹಾಗಾಗಿ, ಈ ವಿಚಾರದಲ್ಲಿ ಇನ್ನಷ್ಟು ಸ್ಪಷ್ಟನೆ ಬೇಕು ಎಂದು ಕೇಂದ್ರ ಹಾಗೂ ಹಲವು ರಾಜ್ಯ ಸರ್ಕಾರಗಳು ಕೋರಿದ್ದವು.

ಪ್ರಾತಿನಿಧ್ಯದಲ್ಲಿ ಕೊರತೆ, ಆಡಳಿತದ ಒಟ್ಟು ದಕ್ಷತೆಯ ಮೇಲೆ ಪರಿಣಾಮ, ಕೆನೆಪದರವನ್ನು ಹೊರಗೆ ಇರಿಸುವುದು ಮುಂತಾದ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕಕರಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ನಿರ್ಧರಿಸಬೇಕು ಎಂದು ನಾಗರಾಜ್‌ ಮತ್ತು ಜರ್ನೈಲ್‌ ಸಿಂಗ್‌ ಪ್ರಕರಣದಲ್ಲಿ ಕೋರ್ಟ್‌ ಹೇಳಿತ್ತು.

ರಾಜ್ಯಗಳಿಗೆ ವಿಶಿಷ್ಟವಾದ ಪ್ರಕರಣ ಗಳು ಇವೆಯೇ, ಇದ್ದರೆ ಅವುಗಳನ್ನು ಗುರುತಿಸಿ ವಿವರಗಳನ್ನು ಎರಡು ವಾರಗಳಲ್ಲಿ ಸಲ್ಲಿಸಿ ಎಂದು ರಾಜ್ಯಗಳಿಗೆ ಸುಪ್ರೀಂ ಸೂಚಿಸಿದೆ.ಅಕ್ಟೋಬರ್‌ 5ರಂದು ಮುಂದಿನ ವಿಚಾರಣೆ ನಡೆಯಲಿದೆ.

‘ಗೊಂದಲ ಪರಿಹರಿಸಿ’:ನಾಗರಾಜ್‌ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಹಲವು ದ್ವಂದ್ವಗಳಿವೆ. ಇಲಾಖೆಗಳ ಕಾರ್ಯನಿರ್ವಹಣೆಗೆ ತೊಂದರೆ ಆಗುವುದನ್ನು ತಪ್ಪಿಸುವುದಕ್ಕಾಗಿ 1,400 ಹುದ್ದೆಗಳಿಗೆ ತಾತ್ಕಾಲಿಕ ಬಡ್ತಿಯನ್ನು ಕೇಂದ್ರವು ಅನಿವಾರ್ಯವಾಗಿ ನೀಡಿದೆ. ಸೇವಾ ಜ್ಯೇಷ್ಠತೆಯನ್ನು ಪರಿಗಣಿಸಿದ್ದರೂ ಬಡ್ತಿ ಮೀಸಲಾತಿಯ ನಿಯಮಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಹಾಗಾಗಿ, ಈ ವಿಚಾರಗಳಲ್ಲಿ ಸ್ಪಷ್ಟತೆ ಬೇಕಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್ ಹೇಳಿದರು.

149 ಅಧಿಕಾರಿಗಳಿಗೆ ಬಡ್ತಿ ನೀಡಿದ ವಿಚಾರದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಕಾರ್ಯದರ್ಶಿಗೆ ನೀಡಿದ್ದ ನ್ಯಾಯಾಂಗ ನಿಂದನೆ ನೋಟಿಸ್‌ ಅನ್ನು ರದ್ದುಪಡಿಸುವಂತೆಯೂ ವೇಣುಗೋಪಾಲ್‌ ಕೋರಿದರು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 2019ರ ಏಪ್ರಿಲ್‌ನಲ್ಲಿ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದಲ್ಲಿ ಈ ನೋಟಿಸ್‌ ನೀಡಲಾಗಿದೆ.ನೋಟಿಸ್‌ ಹಿಂದಕ್ಕೆ ಪಡೆಯಲು ಪೀಠವು ಒಪ್ಪಲಿಲ್ಲ. ಮುಖ್ಯ ಪ್ರಕರಣದ ಜತೆಗೆ ಈ ಪ್ರಕರಣದ ವಿಚಾರಣೆಯನ್ನೂ ನಡೆಸಲಾಗುವುದು ಎಂದಿತು.ನಾಗರಾಜ್‌ ಪ್ರಕರಣದಲ್ಲಿ ಇರುವ ಗೊಂದಲಗಳ ಬಗ್ಗೆಹಿರಿಯ ವಕೀಲರಾದ ಇಂದಿರಾ ಜೈಸಿಂಗ್‌ ಮತ್ತು ಪಿ.ಎಸ್‌. ಪಟವಾಲಿಯಾ ಅವರು ಪೀಠದ ಗಮನ ಸೆಳೆದರು. ಬಡ್ತಿ ಮೀಸಲಾತಿಗಾಗಿ ವಿವಿಧ ರಾಜ್ಯಗಳು ರೂಪಿಸಿರುವ ನೀತಿಯ ವಿಚಾರದಲ್ಲಿ ಹೈಕೋರ್ಟ್‌ಗಳು ಮಧ್ಯಪ್ರವೇಶಿಸಿವೆ ಎಂಬುದನ್ನೂ ಅವರು ತಿಳಿಸಿದರು.

‘ಬಡ್ತಿ ಮೀಸಲಾತಿ ವಿಚಾರದಲ್ಲಿ ಸಮರ್ಪಕ ಪ್ರಾತಿನಿಧ್ಯ ಎಂದರೇನು? ರಾಜ್ಯಗಳು ತಮಗೆ ತೋಚಿದಂತೆ ಮಾಡುತ್ತಿವೆ. ಕೆಲವು ಹೈಕೋರ್ಟ್‌ಗಳು ಅವನ್ನು ಎತ್ತಿ ಹಿಡಿದರೆ, ಕೆಲವು ಹೈಕೋರ್ಟ್‌ಗಳು ಕೆಲವು ತಡೆ ನೀಡಿವೆ’ ಎಂದು ಇಂದಿರಾ ಜೈಸಿಂಗ್‌ ಹೇಳಿದರು.

ನಾಗರಾಜ್‌ ಪ್ರಕರಣದಲ್ಲಿ ರೂಪಿಸಲಾದ ಷರತ್ತುಗಳನ್ನು ಎಲ್ಲ ರಾಜ್ಯಗಳು ಕಟ್ಟುನಿಟ್ಟಾಗಿ ಪಾಲಿಸು
ವಂತೆ ನಿರ್ದೇಶನ ನೀಡಬೇಕು ಎಂದು ಕೆಲವು ನೌಕರರ ಪರವಾಗಿ ಹಾಜರಿದ್ದ ಹಿರಿಯ ವಕೀಲರಾದ ರಾಜೀವ್‌ ಧವನ್‌ ಮತ್ತು ಕುಮಾರ್‌ ಪರಿಮಳ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT