ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಹೆಲಿಕಾಪ್ಟರ್ ಅಪಘಾತ: ಮರಕ್ಕೆ ಅಪ್ಪಳಿಸಿ ಸಿಡಿದು ಹೋಯಿತು...

ಹೆಲಿಕಾಪ್ಟರ್‌ನಿಂದ ಬೀಳುತ್ತಿದ್ದವರ ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಸ್ಥಳೀಯರು
Last Updated 8 ಡಿಸೆಂಬರ್ 2021, 20:20 IST
ಅಕ್ಷರ ಗಾತ್ರ

ಚೆನ್ನೈ: ’ನನ್ನ ಮನೆಯ ಸುತ್ತಲಿನಲ್ಲಿ ಭಾರೀ ಸದ್ದನ್ನು ಕೇಳಿದ ನಾನು, ಏನಾಗುತ್ತಿದೆ ಎಂದು ಹೊರಬಂದು ನೋಡಿದೆ. ಬೆಂಕಿ ಹೊತ್ತಿಕೊಂಡಿದ್ದ ಹೆಲಿಕಾಪ್ಟರ್‌ ಒಂದು ಮರವೊಂದಕ್ಕೆ ಅಪ್ಪಳಿಸುತ್ತಿತ್ತು. ಕೆಲವೇ ಸೆಕೆಂಡುಗಳಲ್ಲಿ ಬೃಹದಾದ ಮತ್ತೊಂದು ಮರಕ್ಕೆ ಡಿಕ್ಕಿಯಾಯಿತು. ಅದರಲ್ಲಿದ್ದ ಜನರೆಲ್ಲ ಕೆಳಗೆ ಬೀಳುತ್ತಿದ್ದರು, ಆ ಬಳಿಕ, ಹೆಲಿಕಾಪ್ಟರ್ ಸಿಡಿದು ಹೋಯಿತು...’

ಕೂನೂರು ಬಳಿಯ ನಂಜಪ್ಪನಚಟ್ಟಿರಾಮದ ನಿವಾಸಿ ಕೃಷ್ಣಸ್ವಾಮಿ ಅವರ ಮಾತುಗಳಿವು.

ಸೇನಾಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್ ಅವರು ಪ್ರಯಾಣಿಸುತ್ತಿದ್ದ ಎಂಐ–17ವಿ5 ಹೆಲಿಕಾಪ್ಟರ್‌ ದುರಂತದ ಪ್ರತ್ಯಕ್ಷದರ್ಶಿಗಳಲ್ಲಿ ಕೃಷ್ಣಸ್ವಾಮಿಯೂ ಒಬ್ಬರು.

ಹೆಲಿಕಾಪ್ಟರ್‌ನಿಂದ ಜನರು ಬೀಳುವ ಭಯಾನಕ ದೃಶ್ಯ ಕಂಡು ಆಘಾತಗೊಂಡ ಅವರು, ತಕ್ಷಣವೇ ತಮ್ಮ ನೆರೆಮನೆಯ ಯುವಕ ಕುಮಾರ್‌ ಎಂಬುವವರಿಗೆ ವಿಷಯ ತಿಳಿಸಿದ್ದಾರೆ. ಕುಮಾರ್‌ ಅವರು ಕೂಡಲೇ ತಮ್ಮ ಮೊಬೈಲ್‌ ಫೋನ್‌ನಿಂದ ಕರೆ ಮಾಡಿ, ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಘಟನೆಯ ಮಾಹಿತಿ ನೀಡಿದ್ದಾರೆ.‌

‘ಹೆಲಿಕಾಪ್ಟರ್‌ ಹೊತ್ತಿ ಉರಿದು ಬಿದ್ದ ಮೇಲೆ ದಟ್ಟ ಹೊಗೆ–ಬೆಂಕಿಯನ್ನುಳಿದು ನಮಗೆ ಬೇರೇನೂ ಕಾಣಿಸಲಿಲ್ಲ. ಆದರೆ, ಅದು ಅಪ್ಪಳಿಸುವುದನ್ನು, ಅದರಿಂದ ಮೂವರು ಬೀಳುತ್ತಿರುವುದನ್ನು ನೋಡಿದೆ. ಆ ದೃಶ್ಯ ಭಯಾನಕವಾಗಿತ್ತು’ ಎಂದು ಕೃಷ್ಣಸ್ವಾಮಿ ಹೇಳಿದರು.

ಬುರ್ಲಿಯಾರ್‌ ಗ್ರಾಮದ ಪ್ರಕಾಶ್‌ ಅವರಿಗೂ ಅದೇ ಅನುಭವ. ಪಶ್ಚಿಮ ಘಟ್ಟ ಪ್ರದೇಶವಾದ ಇಲ್ಲಿ ಹೆಲಿಕಾಪ್ಟರ್‌ ಹಾರಾಟ ನಡೆಸುವ ಸಂದರ್ಭದಲ್ಲಿ ದಟ್ಟ ಮಂಜು ಕವಿದಿತ್ತು ಎಂದು ಅವರು ಹೇಳಿದರು.

‘ಬುರ್ಲಿಯಾರ ಗ್ರಾಮದ ಮೇಲೆ ಅತಿ ಸನಿಹದಲ್ಲೇ ಹೆಲಿಕಾಪ್ಟರ್‌ ಹಾರುತ್ತಿದ್ದುದನ್ನು ನಾನು ನೋಡಿದೆ. ಮರವೊಂದಕ್ಕೆ ಡಿಕ್ಕಿಹೊಡೆದು, ಪತನಗೊಂಡಿತು. ಪೈಲಟ್‌ ಅವರನ್ನು ಮಾತ್ರ ಜೀವಂತವಾಗಿ ಹೊರತರಲು ಸಾಧ್ಯವಾಯಿತು’ ಎಂದರು. ಸುಟ್ಟು ಕರಕಲಾದ ಸೇನಾ ಅಧಿಕಾರಿಗಳ ದೇಹಗಳನ್ನು ಹೆಲಿಕಾಪ್ಟರ್‌ನಿಂದ ಹೊರತೆಗೆಯುತ್ತಿರುವುದನ್ನು ಕಂಡವರೂ ದಿಗ್ಭ್ರಮೆಗೊಂಡಿದ್ದರು.

ನೀಲಗಿರಿಯು ದಟ್ಟವಾದ ಕಾಡಿನಿಂದ ಆವೃತವಾಗಿದ್ದು, ವೆಲ್ಲಿಂಗ್ಟನ್‌ನಲ್ಲಿ ಸೇರಬೇಕಾದ ಸ್ಥಳಕ್ಕೆ ಇನ್ನೇನು 10 ನಿಮಿಷವಷ್ಟೇ ಬಾಕಿ ಇದ್ದಾಗ ಹೆಲಿಕಾಪ್ಟರ್‌ ಪತನಗೊಂಡಿತು. ಆ ಜಾಗದ ಸುತ್ತಮುತ್ತ 200ಕ್ಕೂ ಹೆಚ್ಚು ಮನೆಗಳಿದ್ದವು. ಈ ಪ್ರದೇಶಕ್ಕೂ ಅಪಘಾತ ನಡೆದ ಸ್ಥಳಕ್ಕೂ ಇನ್ನೂರು–ಮುನ್ನೂರು ಮೀಟರ್‌ ಅಷ್ಟೇ ಅಂತರವಿದ್ದು, ಸ್ಥಳೀಯರು ಪವಾಡಸದೃಶವಾಗಿ ಪಾರಾಗಿದ್ದಾರೆ. ಇಲ್ಲಿನ ನಿವಾಸಿಗಳ ಪೈಕಿ ಬಹುತೇಕರು ಚಹಾ ತೋಟಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಘಟನೆ ನಡೆದಾಗ, ಕೆಲವೇ ಜನರು ತಮ್ಮ ಮನೆಗಳಲ್ಲಿದ್ದರು.

ಸುದ್ದಿ ತಿಳಿಯುತ್ತಿದ್ದಂತೆಯೇ ಎಂಟು ತುರ್ತು ಆಂಬುಲೆನ್ಸ್‌ ವಾಹನಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಗೆ ನೆರವಾದವು. ಕೊಯಮತ್ತೂರು ವೈದ್ಯಕೀಯ ಕಾಲೇಜಿನ ಆರು ವೈದ್ಯರು ಕೂನೂರಿಗೆ ತೆರಳಿದ್ದರು.

ಅಪಘಾತ ಏನೇನಾಯ್ತು?

– ಬೆಳಿಗ್ಗೆ 08.45: ಸಿಡಿಎಸ್‌ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಇತರ 7 ಜನರಿದ್ದ ವಿಮಾನ ದೆಹಲಿಯ ಪಾಲಂ ನಿಲ್ದಾಣದಿಂದ ಹೊರಟಿತು

– ಬೆಳಿಗ್ಗೆ 11.30: ಕೊಯಮತ್ತೂರು ಸಮೀಪದ ಸೂಲೂರಿನಲ್ಲಿರುವ ವಾಯುನೆಲೆಯಲ್ಲಿ ಇಳಿದ ವಿಮಾನ

– ಬೆಳಿಗ್ಗೆ 11.48: ರಾವತ್ ಸೇರಿದಂತೆ 14 ಜನರನ್ನು ಹೊತ್ತ ಎಂಐ–17ವಿ5 ಹೆಲಿಕಾಪ್ಟರ್‌ ವೆಲ್ಲಿಂಗ್ಟನ್‌ನತ್ತ ಪಯಣ

– ಬೆಳಿಗ್ಗೆ 12.15: ಊಟಿಯಿಂದ 20 ಕಿಲೋಮೀಟರ್ ದೂರದಲ್ಲಿರುವ, ಕೂನೂರು ಸಮೀಪದನಂಜಪ್ಪಂಚತಿರಂ ಎಂಬಲ್ಲಿ ಕಾಪ್ಟರ್ ಪತನ. ವೆಲ್ಲಿಂಗ್ಟನ್‌ನ ಸೇನಾ ಕೇಂದ್ರದ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಆಗಲು 10 ನಿಮಿಷ ಬಾಕಿಯಿದ್ದಾಗ ಕಾಪ್ಟರ್ ಅಪಘಾತಕ್ಕೀಡಾಗಿದೆ. ಅಪಘಾತ ಸ್ಥಳಕ್ಕೂ ಲ್ಯಾಂಡಿಂಗ್ ಆಗಬೇಕಿದ್ದ ಜಾಗಕ್ಕೂ 10 ಕಿಲೋಮೀಟರ್ ಅಂತರವಿದೆ

ಹೆಲಿಕಾಪ್ಟರ್‌ನಲ್ಲಿದ್ದವರ ಹೆಸರು

1 ಜನರಲ್‌ ಬಿಪಿನ್‌ ರಾವತ್‌ (ಸಿಡಿಎಸ್‌)

2 ಮಧುಲಿಕಾ ರಾವತ್‌

3 ಬ್ರಿಗೇಡಿಯರ್‌ ಎಲ್‌.ಎಸ್‌. ಲಿಡ್ಡರ್‌

4 ಲೆಫ್ಟಿನೆಂಟ್‌ ಕರ್ನಲ್‌ ಹರ್ಜಿಂದರ್‌ ಸಿಂಗ್‌

5 ವಿಂಗ್ ಕಮಾಂಡರ್‌ ಪೃಥ್ವಿ ಸಿಂಗ್‌ ಚೌಹಾಣ್‌

6 ಸ್ಕ್ವಾಡ್ರನ್‌ ಲೀಡರ್‌ ಕುಲದೀಪ್‌

7 ಜೂನಿಯರ್‌ ವಾರಂಟ್‌ ಆಫೀಸರ್‌ (ಜೆಡಬ್ಲ್ಯುಒ) ಪ್ರದೀಪ್‌

8 ಜೆಡಬ್ಲ್ಯುಒ ದಾಸ್‌

9 ನಾಯಕ್‌ ಗುರ್‌ಸೇವಕ್‌ ಸಿಂಗ್‌

10 ನಾಯಕ್‌ ಜಿತೇಂದ್ರ ಕುಮಾರ್‌

11 ಲ್ಯಾನ್ಸ್‌ ನಾಯಕ್‌ ವಿವೇಕ್‌ ಕುಮಾರ್‌

12 ಲ್ಯಾನ್ಸ್‌ ನಾಯಕ್‌ ಬಿ. ಸಾಯಿ ತೇಜ

13 ಹವಾಲ್ದಾರ್‌ ಸತ್ಪಾಲ್‌

14 ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT