ಭಾನುವಾರ, ಜುಲೈ 3, 2022
24 °C

ಶಾಲೆ ಪುನರಾರಂಭ; 9, 11ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಮನೀಶ್ ಸಿಸೋಡಿಯಾ ಸಂವಾದ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಇಂದಿನಿಂದ ಮತ್ತೆ ತೆರೆಯಲಾಗಿದ್ದು, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರು ಸರ್ಕಾರಿ ಶಾಲೆಗಳ ಹೆಣ್ಣು ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಸಿಸೋಡಿಯಾ, ‘ಕೊರೊನಾವೈರಸ್‌ ಸಮಯವು ಅತ್ಯಂತ ಕಠಿಣವಾಗಿತ್ತು. ಆದರೆ, ಅದನ್ನು ಪ್ರಬುದ್ಧವಾಗಿ ಎದುರಿಸಬೇಕಾಗಿತ್ತು. ಹಾಗಾಗಿ ಶಾಲೆಗಳನ್ನು ಮುಚ್ಚಲಾಯಿತು. 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳೀಗೆ 15 ದಿನಗಳ ಹಿಂದೆ ತೆರೆಯಲಾಗಿದೆ. ಇದೀಗ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳೂ ಶಾಲೆಗೆ ಮರಳುತ್ತಿರುವುದರಿಂದ ನಾನು ಸಂತಸಗೊಂಡಿದ್ದೇನೆ. ನಾನೀಗ ಅವರ ನಗುಮುಖಗಳನ್ನು ನೋಡಬಲ್ಲೆ. ಸಾಂಕ್ರಾಮಿಕದ ಹೊತ್ತಿನಲ್ಲಿ ಶಾಲೆಗಳನ್ನು ತೆರೆಯುವುದು ಸವಾಲಿನ ಸಂಗತಿಯಾದರೂ ಅದನ್ನು ನಾವು ಸ್ವೀಕರಿಸಲೇಬೇಕು’ ಎಂದು ತಿಳಿಸಿದ್ದಾರೆ.

ಗಾಂಧಿ ನಗರ ಸರ್ಕಾರಿ ಬಾಲಕಿಯರ ಶಾಲೆಗೆ ಭೇಟಿ ನೀಡಿದ ಸಚಿವರು, ಸುರಕ್ಷತೆಯ ದೃಷ್ಟಿಯಿಂದ ಶಾಲೆಯಲ್ಲಿ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿದರು. ಈ ವೇಳೆ ಕೆಲವು ವಿದ್ಯಾರ್ಥಿಗಳು, ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಆನ್‌ಲೈನ್ ಪಾಠಕ್ಕಿಂತ ಶಾಲೆಗೆ ಬಂದು ಕೇಳುವುದೇ ಉತ್ತಮ. ನಮ್ಮ ಅನುಮಾನಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಬಹುದು ಎಂದು ಸಿಸೋಡಿಯಾಗೆ ತಿಳಿಸಿದರು.

ಜನವರಿ 18 ರಂದು 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ತೆರೆಯಲಾಗಿತ್ತು. ಪೋಷಕರ ಒಪ್ಪಿಗೆ ಇದ್ದರೆ ಮಾತ್ರವೇ ವಿದ್ಯಾರ್ಥಿಗಳು ಶಾಲೆಗಳಿಗೆ ಬರಬಹುದು ಎಂದು ಸರ್ಕಾರ ಈಗಾಗಲೆ ತಿಳಿಸಿದೆ.

ದೆಹಲಿಯಲ್ಲಿ ಇದುವರೆಗೆ ಒಟ್ಟು 6,35,639 ಕೋವಿಡ್‌–19 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 6,23,574 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 10,871 ಮಂದಿ ಮೃತಪಟ್ಟಿದ್ದು, ಇನ್ನೂ 1,194 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು