ಶನಿವಾರ, ಜನವರಿ 16, 2021
24 °C
ಕಲಾವಿದರ ಮನವಿ ಪುರಸ್ಕರಿಸದ ಸಚಿವಾಲಯ

ದೆಹಲಿ: ಸರ್ಕಾರಿ ಬಂಗಲೆ ತೆರವು 27 ಕಲಾವಿದರಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯ ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸುವಂತೆ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯವು ದೇಶದ 27 ಪ್ರಖ್ಯಾತ ಕಲಾವಿದರಿಗೆ ಸೂಚಿಸಿದೆ. ನಿರ್ಧಾರ ಮರುಪರಿಶೀಲಿಸುವಂತೆ ಕಲಾವಿದರು ಮಾಡಿದ್ದ ಮನವಿಯನ್ನು ಸಚಿವಾಲಯ ಪುರಸ್ಕರಿಸಿಲ್ಲ.

ಕಥಕ್ ಕಲಾವಿದ ಪಂಡಿತ್ ಬಿರ್ಜುಮಹಾರಾಜ್, ದ್ರುಪದ್ ಗಾಯಕ ಉಸ್ತಾದ್ ವಸೀಫುದ್ದೀನ್ ದಾಗರ್, ಕೂಚಿಪುಡಿ ನೃತ್ಯಪಟು ಗುರು ಜಯರಾಮರಾವ್, ವರ್ಣಚಿತ್ರಕಾರ, ಶಿಲ್ಪಿ ಜತಿನ್ ದಾಸ್, ಮೋಹಿನಿಯಾಟ್ಟಂ ನೃತ್ಯಪಟು ಭಾರತಿ ಶಿವಾಜಿ ಮತ್ತು ಕಥಕ್ ಗುರು ಗೀತಾಂಜಲಿ ಲಾಲ್ ಅವರಿಗೆ ಡಿಸೆಂಬರ್ 31ರೊಳಗೆ ಮನೆ ತೆರವು ಮಾಡುವಂತೆ ಸಚಿವಾಲಯ ನೋಟಿಸ್ ನೀಡಿತ್ತು.

ಸಾಂಕ್ರಾಮಿಕ ಹರಡಿರುವ ಈ ಸಮಯದಲ್ಲಿ ವಾಸಸ್ಥಳ ಬದಲಿಸಲು ಸೂಚಿಸಿರುವುದು ಅಮಾನವೀಯ ಎಂದು ಆರೋಪಿಸಿ 27 ಕಲಾವಿದರು ಸರ್ಕಾರಕ್ಕೆ ಜಂಟಿ ಪತ್ರ ಬರೆದಿದ್ದರು. ‘ಮನೆ ತೆರವಿಗೆ ಸೂಚಿಸಲು ಸಚಿವಾಲಯಕ್ಕೆ ಹಕ್ಕಿದೆ. ಆದರೆ ಬಹುತೇಕ ಕಲಾವಿದರು ವಯಸ್ಸಾದವರು. ಎಲ್ಲರೂ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿತ್ತು.

‘ಅವಧಿ ಮೀರಿ ಸರ್ಕಾರಿ ಬಂಗಲೆಗಳಲ್ಲಿ ವಾಸಿಸುತ್ತಿರುವವರು ಅವುಗಳನ್ನು ಖಾಲಿ ಮಾಡಲೇಬೇಕು’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಡಿಸೆಂಬರ್ 31ರೊಳಗೆ ತೆರವು ಮಾಡದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

2004ರಿಂದ 2020ರ ಅವಧಿಯ ದಂಡದ ಹಣವನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಗಡುವಿನ ಒಳಗೆ ಕಲಾವಿದರು  ಮನೆಗಳನ್ನು ತೆರವು ಮಾಡದಿದ್ದಲ್ಲಿ, ಬಾಕಿ ಇರುವ ದಂಡದ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

30 ವರ್ಷ ವಾಸ!
ಲೋಧಿ ಕಾಲೋನಿ, ಶಹಜಾನ್ ರಸ್ತೆ, ಏಷ್ಯನ್ ಗೇಮ್ಸ್ ವಿಲೇಜ್, ಕಾಕಾ ನಗರ, ಗುಲ್‌ಮೊಹರ್ ಪಾರ್ಕ್, ಆರ್‌.ಕೆ. ಪುರಂ ಮೊದಲಾದ ಐಷಾರಾಮಿ ಕಾಲೊನಿಗಳಲ್ಲಿ ಈ ಮನೆಗಳು ಇವೆ. ಆರು ವರ್ಷದ ವಾಸಕ್ಕೆ ಬಂಗಲೆಗಳನ್ನು ನೀಡಲಾಗುತ್ತದೆ. ಆದರೆ ಕೆಲವರು ಇಂತಿಷ್ಟು ಶುಲ್ಕ ನೀಡಿ 30 ವರ್ಷಗಳವರೆಗೆ ವಾಸವಾಗಿರುವ ಉದಾಹರಣೆಗಳೂ ಇವೆ. ಕಲಾವಿದರು, ಕ್ರೀಡಾಪಟುಗಳು, ಪತ್ರಕರ್ತರು ಮೊದಲಾದ ಕೋಟಾದಡಿ ಸರ್ಕಾರಿ ಬಂಗಲೆಗಳನ್ನು ನೀಡದಿರಲು  ಸರ್ಕಾರ 2014ರಲ್ಲಿ ನಿರ್ಧರಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.