2022ರ ಮೇವರೆಗೆ ಉಚಿತ ಪಡಿತರ ವಿತರಣೆಗೆ ದೆಹಲಿ ಸರ್ಕಾರ ನಿರ್ಧಾರ: ಕೇಜ್ರಿವಾಲ್

ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ತನ್ನ ಉಚಿತ ಪಡಿತರ ಯೋಜನೆಯನ್ನು ಮೇ 2022 ರವರೆಗೆ ಆರು ತಿಂಗಳು ವಿಸ್ತರಿಸಲು ನಿರ್ಧರಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಪ್ರಕಟಿಸಿದ್ದಾರೆ.
'ಹಣದುಬ್ಬರ ಉತ್ತುಂಗದಲ್ಲಿದೆ. ಸಾಮಾನ್ಯ ಜನರು ದಿನಕ್ಕೆ ಎರಡು ಬಾರಿ ಊಟಕ್ಕೂ ಸಹ ಹೆಣಗಾಡುತ್ತಿದ್ದಾರೆ. ಕೋವಿಡ್-19 ನಿಂದ ಅನೇಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಪ್ರಧಾನಿಯವರೇ, ದಯವಿಟ್ಟು ಬಡವರಿಗೆ ಉಚಿತ ಪಡಿತರ ಸರಬರಾಜು ಮಾಡುವ ಯೋಜನೆಯನ್ನು ಆರು ತಿಂಗಳವರೆಗೆ ವಿಸ್ತರಿಸಿ. ದೆಹಲಿ ಸರ್ಕಾರವು ತನ್ನ ಉಚಿತ ಪಡಿತರ ಯೋಜನೆಯನ್ನು ಮುಂದಿನ ಆರು ತಿಂಗಳವರೆಗೆ ವಿಸ್ತರಿಸುತ್ತಿದೆ' ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಮೂಲಕ ಉಚಿತ ಪಡಿತರ ವಿತರಣೆಯನ್ನು ನವೆಂಬರ್ 30ರ ನಂತರ ವಿಸ್ತರಿಸುವ ಯಾವುದೇ ಪ್ರಸ್ತಾವನೆಯನ್ನು ಕೇಂದ್ರವು ಹೊಂದಿಲ್ಲ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ ಒಂದು ದಿನದ ನಂತರ ಕೇಜ್ರಿವಾಲ್ ಅವರು ಹೀಗೆ ತಿಳಿಸಿದ್ದಾರೆ.
ದೆಹಲಿ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA), 2013, ಮತ್ತು PMGKAY ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಪಡಿತರವನ್ನು ವಿತರಿಸುತ್ತಿದೆ. ನಗರದಲ್ಲಿ 2,000 ನ್ಯಾಯಬೆಲೆ ಅಂಗಡಿಗಳು, 17.77 ಲಕ್ಷ ಪಡಿತರ ಚೀಟಿದಾರರು ಮತ್ತು ಸುಮಾರು 72.78 ಲಕ್ಷ ಫಲಾನುಭವಿಗಳು ಇದ್ದಾರೆ.
ಕೋವಿಡ್-19 ನಿಂದ ಉಂಟಾದ ತೊಂದರೆಯನ್ನು ನಿವಾರಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಪ್ರಾರಂಭಿಸಲಾಯಿತು. ಕಳೆದ ವರ್ಷ ಏಪ್ರಿಲ್-ಜೂನ್‌ಗೆ ಅಂತ್ಯಗೊಳ್ಳಬೇಕಿದ್ದ ಈ ಯೋಜನೆಯನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.