ಭಾನುವಾರ, ಜನವರಿ 24, 2021
24 °C

Bird Flu: ನವದೆಹಲಿ, ಜಮ್ಮು, ಮಹಾರಾಷ್ಟ್ರದಲ್ಲೂ ಹಕ್ಕಿಗಳ ಅಸಹಜ ಸಾವು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ವರದಿಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇದುವರೆಗೆ ಆರು ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಈ ಮಧ್ಯೆ ಕೇಂದ್ರಡಾಳಿತ ಪ್ರದೇಶಗಳಾದ ದಿಲ್ಲಿ ಹಾಗೂ ಜಮ್ಮು ಸೇರಿದಂತೆ ಮಹಾರಾಷ್ಟ್ರದಲ್ಲಿ ಹಕ್ಕಿಗಳ ಅಸಹಜ ಸಾವು ವರದಿಯಾಗಿದೆ. 

ಇಲ್ಲಿಯ ವರೆಗೂ 200ರಷ್ಟು ಕಾಗೆಗಳು ಸಾವನ್ನಪ್ಪಿವೆ. ಶುಚೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಂದರ್ಶಕರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಐದು ಕಾಗೆಗಳ ಶವಗಳನ್ನು ಹೆಚ್ಚುವರಿ ಪ್ರಯೋಗಕ್ಕಾಗಿ ಜಲಂಧರ್‌ಗೆ ಕಳುಹಿಸಲಾಗಿದೆ ಎಂದು ದೆಹಲಿಯ ಮಯೂರ್ ವಿಹಾರ್‌ನಲ್ಲಿರುವ ಸೆಂಟ್ರಲ್ ಪಾರ್ಕ್‌ನ ಉಸ್ತುವರಿ ಟಿಂಕು ಚೌಧರಿ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಮೊದಲು ಪಶುಸಂಗೋಪನಾ ಅಧಿಕಾರಿಗಳು, ಕಳೆದ ಮೂರ್ನಾಲ್ಕು ದಿನಗಳಲ್ಲಿ ಮೂರು ಪ್ರದೇಶಗಳಲ್ಲಾಗಿ 50ಕ್ಕೂ ಹೆಚ್ಚು ಪಕ್ಷಿಗಳು ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದ್ದರು. ಡಿಡಿಎ ಪಾರ್ಕ್, ದ್ವಾರಕಾದಲ್ಲೂ ಸತ್ತ ಕಾಗೆಗಳು ಪತ್ತೆಯಾಗಿವೆ.

ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ 900ರಷ್ಟು ಕೋಳಿಗಳು ಸಾವನ್ನಪ್ಪಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪೌಲ್ಟ್ರಿ ಫಾರ್ಮ್‌ನಲ್ಲಿ ಸುಮಾರು 8000ದಷ್ಟು ಕೋಳಿಗಳಿದ್ದವು. ಕಳೆದೆರಡು ದಿನಗಳಲ್ಲಿ 900 ಕೋಳಿಗಳು ಸಾವನ್ನಪ್ಪಿವೆ. ಈ ಹಿನ್ನೆಲೆಯಲ್ಲಿ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ರವಾನಿಸಲಾಗಿದೆ.

ಜಮ್ಮು ಪ್ರದೇಶದ ಮೂರು ಜಿಲ್ಲೆಗಳಲ್ಲಿ 150ಕ್ಕೂ ಕಾಗೆಗಳು ಸಾವನ್ನಪ್ಪಿವೆ. ಇದರಿಂದ ಪಕ್ಷಿ ಜ್ವರ ಆತಂಕವನ್ನು ಹೆಚ್ಚಿಸಿದೆ. ಮಾದರಿಗಳನ್ನು ಪಂಜಾಬ್‌ನ ವನ್ಯಜೀವಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 

ಹಲವು ರಾಜ್ಯಗಳಲ್ಲಿ ಹಕ್ಕಿಜ್ವರ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ, ಈಶಾನ್ಯ ಪ್ರದೇಶದಿಂದ ಪೌಲ್ಟ್ರಿ ಪ್ರವೇಶಕ್ಕೆ ಅನಿರ್ದಿಷ್ಟಾವಧಿ ನಿಷೇಧ ಹೇರಿದೆ. ಅತ್ತ ಹಕ್ಕಿಜ್ವರ ಹಿನ್ನೆಲೆಯಲ್ಲಿ ರಾಜ್ಯವನ್ನು 'ನಿಯಂತ್ರಿತ ಪ್ರದೇಶವಾಗಿ' ಪಂಜಾಬ್ ಘೋಷಿಸಿದೆ.

ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಗುಜರಾತ್ ರಾಜ್ಯಗಳಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ಹಕ್ಕಿ ಜ್ವರ ವಿಪರೀತವಾಗಿ ಹರಡುತ್ತಿರುವುದರಿಂದ ಹರಿಯಾಣ ಸರ್ಕಾರವು ಪಂಚಕುಲ ಜಿಲ್ಲೆಯಲ್ಲಿ 1.6 ಲಕ್ಷಕ್ಕೂ ಹೆಚ್ಚು ಪಕ್ಷಿಗಳನ್ನು ನಾಶಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. 

ಈಗಾಗಲೇ ಕೇರಳದಲ್ಲಿ ಸಾವಿರಾರು ಪಕ್ಷಿಗಳನ್ನು ಕೊಂದು ಹಾಕುವ ಪ್ರಕ್ರಿಯೆ ಪೂರ್ಣಗೊಂಡಿದೆ. ಸೋಂಕು ಹರಡದಂತೆ ನೋಡಿಕೊಳ್ಳಲು ಶುಚಿತ್ವ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.

ಕೇಂದ್ರ ತಂಡವು ಕೇರಳ, ಹರಿಯಾಣ ಹಾಗೂ ಹಿಮಾಚಲ ಪ್ರದೇಶಗಳಿಗೆ ಭೇಟಿ ಕೊಟ್ಟು ವೈರಸ್ ಬಗ್ಗೆ ತನಿಖೆಯನ್ನು ನಡೆಸಲಿದೆ. ರಾಜಸ್ಥಾನದಲ್ಲಿ 2000ಕ್ಕೂ ಪಕ್ಷಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ.

ಕರ್ನಾಟಕದಲ್ಲಿ ಇದುವರೆಗೆ ಹಕ್ಕಿಜ್ವರ ಕಾಣಿಸಿಕೊಂಡಿಲ್ಲ. ಆದರೆ ಕೇರಳ ಹಾಗೂ ತಮಿಳುನಾಡು ಗಡಿ ಪ್ರದೇಶಗಳಲ್ಲಿ ಕಚ್ಟೆಚ್ಚರ ವಹಿಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು