ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ನಾಗಾಲ್ಯಾಂಡ್‌ನಲ್ಲಿ ಹೆಚ್ಚಿದ ಪ್ರತ್ಯೇಕ ರಾಜ್ಯದ ಕೂಗು; 20 ಶಾಸಕರ ಬೆಂಬಲ

Last Updated 4 ಸೆಪ್ಟೆಂಬರ್ 2022, 7:04 IST
ಅಕ್ಷರ ಗಾತ್ರ

ಕೋಹಿಮಾ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪೂರ್ವ ನಾಗಾಲ್ಯಾಂಡ್‌ನಲ್ಲಿ ಪ್ರತ್ಯೇಕ ರಾಜ್ಯದ ಕೂಗು ಪುನಃ ಮುನ್ನೆಲೆಗೆ ಬಂದಿದೆ. ಇದಕ್ಕೆ ಅಲ್ಲಿನ 20 ಶಾಸಕರ ಬೆಂಬಲವೂ ವ್ಯಕ್ತವಾಗಿದೆ.

ಪ್ರತ್ಯೇಕ ರಾಜ್ಯದ ಬೇಡಿಕೆ ಪೂರೈಕೆಯಾಗುವವರೆಗೆ ಯಾವುದೇ ಚುನಾವಣೆಯಲ್ಲಿ ಭಾಗವಹಿಸದಿರಲು 20 ಶಾಸಕರು ನಿರ್ಧರಿಸಿದ್ದಾರೆ.

ಪೂರ್ವ ನಾಗಾಲ್ಯಾಂಡ್‌ನಲ್ಲಿ ಆರು ಜಿಲ್ಲೆಗಳಿವೆ. ಮೋನ್‌, ತುಯೆನ್‌ಸಾಂಗ, ಕಿಫಾಯಿರ್‌, ಲೋಂಗ್‌ಲೆಂಗ್‌ ಮತ್ತು ಶಾಮಟೋರ್‌ ಜಿಲ್ಲೆಗಳು ಸೇರಿವೆ. ಈ ಜಿಲ್ಲೆಗಳಲ್ಲಿ ಚಾಂಗ್‌, ಖಿಯಾಂನಿಯುಂಗನ್‌ , ಕೋನಯಾಕ್‌, ಫೋಮ್‌, ಸಂಗತಮ್‌, ಟಿಖಿರ್‌, ಯಿಮಚುಂಗರ್‌ ಹೆಸರಿನ ಏಳು ಬುಡಕಟ್ಟು ಸಮುದಾಯಗಳು ನೆಲೆಸಿವೆ.

ಈ ಪ್ರದೇಶದಲ್ಲಿ ಈಸ್ಟರ್ನ್‌ ನಾಗಾಲ್ಯಾಂಡ್‌ ಪೀಪಲ್ಸ್‌ ಆರ್ಗನೈಸೇಷನ್‌(ಇಎನ್‌ಪಿಒ) ಸಂಘಟನೆಯು ಪ್ರಾಬಲ್ಯ ಹೊಂದಿದೆ. ಆಗಸ್ಟ್‌ 26ರ ನಂತರ ದೀಮಾಪುರದಲ್ಲಿ ಇಎನ್‌ಪಿಒ ಎರಡು ಪ್ರಮುಖ ಸಭೆಗಳನ್ನು ನಡೆಸಿದೆ. ರಾಜಕಾರಣಿಗಳು, 7 ಬುಡಕಟ್ಟು ಸಮುದಾಯದ ಮುಖಂಡರು ಹಾಗೂ ಇತರ ಸಂಘಟನೆಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

2010ರಿಂದ ಇಎನ್‌ಪಿಒ ಕೇಂದ್ರದ ಮುಂದೆ ಹಲವು ಬಾರಿ ಪ್ರತ್ಯೇಕ ರಾಜ್ಯದ ಬೇಡಿಕೆ ಇರಿಸುತ್ತಲೇ ಬಂದಿದೆ.

ಗಡಿ ನಾಗಲ್ಯಾಂಡ್‌ (ಫ್ರಾಂಟಿಯರ್‌ ನಾಗಾಲ್ಯಾಂಡ್‌) ಎಂಬ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಈಡೇರಿಸುವವರೆಗೆ ಚುನಾವಣೆಗಳಲ್ಲಿ ಪಾಲ್ಗೊಳ್ಳದಿರುವ ಪ್ರಮುಖ ನಿರ್ಣಯಗಳನ್ನು ಈ ಸಭೆಗಳಲ್ಲಿ ತೆಗೆದುಕೊಳ್ಳಲಾಗಿದೆ.

'ಈ ಪ್ರದೇಶದ 20 ಶಾಸಕರು ಜನರ ಭಾವನೆಗೆ ವಿರುದ್ಧವಾಗಿ ಹೋಗುವುದಿಲ್ಲ. ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾವೆಲ್ಲರೂ ಒಟ್ಟಾಗಿ ಹೋರಾಡುತ್ತೇವೆ' ಎಂದು ಪೂರ್ವ ನಾಗಾಲ್ಯಾಂಡ್‌ನ ಶಾಸಕರ ಒಕ್ಕೂಟದ ಕಾರ್ಯದರ್ಶಿ ಸಿ.ಎಲ್‌.ಜಾನ್‌ ಹೇಳಿದ್ದಾರೆ.

60 ಸದಸ್ಯರನ್ನು ಒಳಗೊಂಡ ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಯು ಮುಂದಿನ ವರ್ಷ ಫೆಬ್ರುವರಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT