ಭಾನುವಾರ, ಜೂನ್ 20, 2021
28 °C
ಸಂಭಾವ್ಯ ಪರಿಸ್ಥಿತಿ ಎದುರಿಸಲು ಎನ್‌ಡಿಆರ್‌ಎಫ್‌ನ 100 ತಂಡ ಸನ್ನದ್ಧ

ತೌಕ್ತೆ ಮತ್ತಷ್ಟು ತೀವ್ರ: ಮೇ 18ಕ್ಕೆ ಗುಜರಾತ್‌ ಕರಾವಳಿ ದಾಟಲಿರುವ ಚಂಡಮಾರುತ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹೆಚ್ಚಿದ್ದು, ‘ತೌಕ್ತೆ’ ಚಂಡಮಾರುತ ಮತ್ತಷ್ಟು ತೀವ್ರಸ್ವರೂಪ ಪಡೆದುಕೊಂಡಿದೆ.

ಗುಜರಾತ್‌ನತ್ತ ಸಾಗಿರುವ ಚಂಡಮಾರುತ, ಪೋರಬಂದರ್‌ ಹಾಗೂ ನಲಿಯಾ ನಡುವಿನ ಕರಾವಳಿ ಪ್ರದೇಶವನ್ನು ಮೇ 18ರ ವೇಳೆಗೆ ದಾಟುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ.

ಮೇ 16ರಿಂದ 18ರ ವರೆಗಿನ ಅವಧಿಯಲ್ಲಿ ತೌಕ್ತೆ ಚಂಡಮಾರುತ ಹೆಚ್ಚು ತೀವ್ರವಾಗಿರಲಿದೆ ಎಂದೂ ಐಎಂಡಿ ಹೇಳಿದೆ.

ಚಂಡಮಾರುತದಿಂದ ಉದ್ಭವಿಸುವ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್‌ಡಿಆರ್‌ಎಫ್‌) 100 ತಂಡಗಳನ್ನು ಸಜ್ಜಗೊಳಿಸಲಾಗಿದೆ. ಈ ಮೊದಲು 53 ತಂಡಗಳನ್ನು ರಚಿಸಲಾಗಿತ್ತು. ಶನಿವಾರದ ವೇಳೆ ಈ ಪ್ರಾಕೃತಿಕ ವಿಕೋಪ ತೀವ್ರ ಸ್ವರೂಪ ಪಡೆದ ಕಾರಣ, ಪರಿಹಾರ ಕಾರ್ಯಕ್ಕೆ ಚುರುಕು ನೀಡುವ ಸಂಬಂಧ ತಂಡಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲಾಗಿದೆ.

ಕೇರಳದ ಉತ್ತರ ಹಾಗೂ ಕೇಂದ್ರ ಭಾಗದಲ್ಲಿರುವ, ಕರ್ನಾಟಕದ ದಕ್ಷಿಣ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿರುವ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಹಾನಿ ಸಾಧ್ಯತೆ ಕುರಿತು ಕೇಂದ್ರೀಯ ಜಲ ಆಯೋಗ ಎಚ್ಚರಿಕೆ ನೀಡಿದೆ.

ಮೇ 15 ಹಾಗೂ 16ರಂದು ಗೋವಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಸಿಬ್ಬಂದಿಯನ್ನು ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಗೋವಾ ಸರ್ಕಾರ ಸಜ್ಜಗೊಳಿಸಿದೆ.

‘ಚಂಡಮಾರುತದಿಂದ ಉದ್ಭವಿಸುವ ಪರಿಸ್ಥಿತಿಯನ್ನು ಎದುರಿಸುವ ಸಂಬಂಧ ಎಲ್ಲ ಅಗತ್ಯ ಕ್ರಮಕೈಗೊಂಡು, ಸನ್ನದ್ಧ ಸ್ಥಿತಿಯಲ್ಲಿ ಇರಬೇಕು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಚಂಡಮಾರುತದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಪರಿಹಾರ ಕಾರ್ಯ, ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು