ಮಹಾ ಸಿಎಂ ಜತೆ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ, ರಾಜಕೀಯ ಪ್ರೇರಿತವಲ್ಲ: ಪವಾರ್

ಮುಂಬೈ: ಇತ್ತೀಚಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಭೇಟಿ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಮಹಾ ವಿಕಾಸ್ ಅಗಾಡಿ (ಎಂವಿಎ) ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ತ್ವರಿತಗೊಳಿಸುವುದರ ಬಗ್ಗೆ ಗಮನ ಹರಿಸಿದ್ದೇವೆ. ಇದನ್ನು ಬಿಟ್ಟು ಬೇರೆ ಏನನ್ನೂ ಅರ್ಥೈಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿ, 'ಯಾವುದೇ ರಾಜಕೀಯ ವಿಷಯವನ್ನು ಚರ್ಚಿಸಲಾಗಿಲ್ಲ. ಕೆಲವು ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಮುಖ್ಯಮಂತ್ರಿ ಅವರೊಂದಿಗಿನ ನನ್ನ ಸಭೆಯು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೇಗೆ ತ್ವರಿತಗೊಳಿಸಬಹುದು ಎಂಬ ಉದ್ದೇಶದೊಂದಿಗೆ ನಡೆದಿತ್ತು. ಅಲ್ಲಿ ಯಾವುದೇ ರಾಜಕೀಯ ಮಾತುಕತೆ ನಡೆದಿಲ್ಲ' ಎಂದು ಸ್ಪಷ್ಪಪಡಿಸಿದರು.
ಇದನ್ನೂ ಓದಿ: 'ಮಹಾ' ಸರ್ಕಾರ ಅವಧಿ ಪೂರೈಸಲಿದೆ; ಶರದ್ ಪವಾರ್ ವಿಶ್ವಾಸ
ಶಿವಸೇನೆ ನೇತೃತ್ವದ ಎಂವಿಎ ಸರ್ಕಾರದಲ್ಲಿ ಪ್ರಮುಖ ಮಿತ್ರ ಪಕ್ಷವಾಗಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ಎರಡು ದಿನಗಳ ಹಿಂದೆ ಠಾಕ್ರೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಈ ಕುರಿತು ಮಾತುಕತೆ ನಡೆದಿದೆ ಎಂಬ ಬಗ್ಗೆ ಊಹಾಪೋಹಾಗಳು ಭುಗಿಲೆದ್ದಿದ್ದವು.
ಎಂವಿಎಯಿಂದ ಹಿಂದಕ್ಕೆ ಸರಿಯುವಂತೆ ಎನ್‌ಸಿಪಿ ಮೇಲೆ ಒತ್ತಡವಿದೆ ಎಂಬುದನ್ನು ತಳ್ಳಿ ಹಾಕಿದ ಪವಾರ್, ಈ ಪ್ರಶ್ನೆ ಪ್ರಸ್ತುತವಲ್ಲ ಎಂದಷ್ಟೇ ಹೇಳಿದರು.
ವಿಧಾನಸಭಾ ಸ್ಪೀಕರ್ ಹುದ್ದೆಯ ಚುನಾವಣೆ ಬಗ್ಗೆ ಕೇಳಿದಾಗ, ಎಂವಿಎ ಮಿತ್ರ ಪಕ್ಷಗಳು ಕಾಂಗ್ರೆಸ್ ಸೂಚಿಸಿದ ಅಭ್ಯರ್ಥಿಯ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಎಂವಿಎ ಸರ್ಕಾರ ರಚನೆಯಾದಾಗ ಸ್ಪೀಕರ್ ಹುದ್ದೆಯನ್ನು ಕಾಂಗ್ರೆಸ್‌ಗೆ ನೀಡಲಾಯಿತು. ಹಾಗಾಗಿ ಕಾಂಗ್ರೆಸ್ ಯಾವ ಅಭ್ಯರ್ಥಿಯ ಹೆಸರನ್ನು ಸೂಚಿಸುತ್ತದೆಯೋ ಅದನ್ನು ಮಿತ್ರ ಪಕ್ಷಗಳು ಚರ್ಚಿಸಿ ಅಂತಿಮಗೊಳಿಸಲಿದೆ ಎಂದು ಹೇಳಿದರು.
ಏತನ್ಮಧ್ಯೆ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಹೇಳಿಕೆ ನೀಡಿರುವ ಪವಾರ್, ಕೇಂದ್ರ ಸರ್ಕಾರವು ರೈತರೊಂದಿಗೆ ಮಾತುಕತೆ ನಡೆಸಬೇಕು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ತರಬಾರದು ಎಂದು ಬಯಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.