ಬುಧವಾರ, ಮಾರ್ಚ್ 22, 2023
28 °C
ಒಗ್ಗಟ್ಟಿನ ಜಪ

ಬಿಹಾರ ವಿದ್ಯಮಾನ: ವಿಪಕ್ಷಗಳಲ್ಲಿ ಸಂಚಲನ, ನಿತೀಶ್‌ ನಿಲುವಿಗೆ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಬಿಟ್ಟು ಹೊರಬಂದಿರುವ ನಿತೀಶ್ ಕುಮಾರ್ ಅವರು ಜಾತ್ಯತೀತ ಪಕ್ಷಗಳ ಮಹಾಮೈತ್ರಿಕೂಟವನ್ನು ಮತ್ತೆ ಸೇರಿದ್ದಾರೆ. ಇದು ಬಿಜೆಪಿ ಮತ್ತು ಎನ್‌ಡಿಎಯೇತರ ಪಕ್ಷಗಳಲ್ಲಿ ಒಗ್ಗಟ್ಟಿಗೆ ಹುರುಪು ತುಂಬಿದೆ. ನಿತೀಶ್ ಅವರ ನಿಲುವನ್ನು ಬೆಂಬಲಿಸಿರುವ ಹಲವು ಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿವೆ. 2024ರಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಗೆ ಬಿಜೆಪಿಯನ್ನು ಕಟ್ಟಿಹಾಕಲು ನಿತೀಶ್ ಅವರ ಈ ನಡೆಯಿಂದ ಶಕ್ತಿ ಬಂದಿದೆ ಎಂಬುದಾಗಿ ಪ್ರಾದೇಶಿಕ ಪಕ್ಷಗಳು ಅಭಿಪ್ರಾಯಪಟ್ಟಿವೆ.  

‘ಹಿಂಬಾಗಿಲ ರಾಜಕಾರಣಕ್ಕೆ ನಿತೀಶ್ ಬೀಗ’: ‘ಹಿಂಬಾಗಿಲ ರಾಜಕಾರಣ ಯುಗ’ಕ್ಕೆ ನಿತೀಶ್ ಕುಮಾರ್ ಅವರು ಸರಿಯಾದ ಪೆಟ್ಟು ನೀಡಿದ್ದಾರೆ ಎಂದು ತೆಲಂಗಾಣದ ಟಿಆರ್‌ಎಸ್ ಶಾಸಕಿ ಕೆ.ಕವಿತಾ ಹೇಳಿದ್ದಾರೆ.

‘ಬಿಹಾರದ ರಾಜಕೀಯದಲ್ಲಿ ಆಗಿರುವ ಬೆಳವಣಿಗೆಯು ಇಡೀ ದೇಶಕ್ಕೆ ಸಕಾರಾತ್ಮಕ ಬದಲಾವಣೆಯ ಸಂದೇಶ ರವಾನಿಸಿದೆ. ಬಿಹಾರ ಮತ್ತು ನಳಂದಾ ವಿಶ್ವವಿದ್ಯಾಲಯಗಳು ಇಡೀ ಪ್ರಪಂಚಕ್ಕೆ ದಾರಿಯನ್ನು ತೋರಿದ್ದವು. ಈಗ ದೇಶಕ್ಕೆ ಅಂತಹದ್ದೇ ಮಾರ್ಗ ಲಭ್ಯವಾಗುತ್ತಿದೆ. ಹಿಂಬಾಗಿಲ ರಾಜಕಾರಣವನ್ನು ಒಬ್ಬರಾದರೂ ತಡೆಯುತ್ತಾರೆ. ಅದಕ್ಕೆ ಬಿಹಾರ ನಾಂದಿ ಹಾಡಿದೆ’ ಎಂದು ಕವಿತಾ ವಿಶ್ಲೇಷಿಸಿದ್ದಾರೆ. 

ಬಿಹಾರ ಬೆಳವಣಿಗೆಯಿಂದ ಕಾಂಗ್ರೆಸ್‌ನಲ್ಲಿ ಉತ್ಸಾಹ ಗರಿಗೆದರಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಅನ್ನು ದೂರವಿರಿಸುವ ಯತ್ನ ಮಾಡಿದ ಹಾಗೂ ಮಹಾರಾಷ್ಟ್ರದಲ್ಲಿ ಪಕ್ಷಾಂತರಕ್ಕೆ ಪ್ರೋತ್ಸಾಹಿಸಿದ ಬಿಜೆಪಿಗೆ ಬಿಹಾರದ ಬೆಳವಣಿಗೆಯಿಂದ ಶಿಕ್ಷೆಯಾಗಿದೆ ಎಂದು ಬಿಹಾರ ಕಾಂಗ್ರೆಸ್ ಘಟಕದ ಉಸ್ತುವಾರಿ ಭಕ್ತ ಚರಣ್‌ದಾಸ್ ಅವರು ಅಭಿಪ್ರಾಯಪಟ್ಟಿದ್ದಾರೆ. ‘ಬಿಜೆಪಿ ಮುಕ್ತ ಬಿಹಾರ’ ಸಂದೇಶವನ್ನು ಜನರಿಗೆ ತಲುಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಸಣ್ಣ ಪಕ್ಷಗಳನ್ನು ನಿರ್ನಾಮ ಮಾಡುವುದು ಬಿಜೆಪಿ ಉದ್ದೇಶ. ದೇಶದಲ್ಲಿ ಕೇವಲ ಒಂದು ಪಕ್ಷವನ್ನು (ಬಿಜೆಪಿ) ಸ್ಥಾಪಿಸುವುದು ಅದರ ಗುರಿ. ಒಂದೇ ಬಣ್ಣ, ಒಂದೇ ಧರ್ಮ ಇರಬೇಕೆಂದು ಅದು ಬಯಸುತ್ತಿದೆ’ ಎಂದು ದಾಸ್ ಆರೋಪಿಸಿದ್ದಾರೆ. 

*
‘ಬಿಜೆಪಿಗೆ ದ್ರೋಹ ಬಗೆದರೆ ಸುಮ್ಮನೆ ಬಿಡುವುದಿಲ್ಲ’ ಎಂಬುದಾಗಿ ಬಿಜೆಪಿಯ ಸುಶೀಲ್ ಮೋದಿ ನೀಡಿದ್ದ ಹೇಳಿಕೆಯಿಂದ ಬಿಜೆಪಿ ನಿಜಬಣ್ಣ ಹೊರಬಂದಿದೆ.
-ಅಂಬಾದಾಸ್ ಧನ್ವೆ,ಶಿವಸೇನಾ (ಠಾಕ್ರೆ ಬಣ) ನಾಯಕ

*
ಬಿಜೆಪಿ ಜೊತೆಗಿನ ಮೈತ್ರಿ ಹಿತಕರವಾಗಿ ಇರದ ಕಾರಣ ನಿತೀಶ್ ಹೊರಬಂದಿದ್ದಾರೆ. ಸದ್ಯದ ಬೆಳವಣಿಗೆಯು ಬಿಹಾರಕ್ಕೆ ಮಾತ್ರ ಸೀಮಿತವಾದುದು 
-ಪ್ರಶಾಂತ್ ಕಿಶೋರ್, ಚುನಾವಣಾ ತಂತ್ರ ನಿಪುಣ

*
ನಿತೀಶ್ ಸಕಾಲದಲ್ಲಿ ಮಹಾಮೈತ್ರಿಕೂಟಕ್ಕೆ ಮರಳಿದ್ದಾರೆ. ಇದು ದೇಶದ ಜಾತ್ಯತೀತ ಹಾಗೂ ಪ್ರಜಾಪ್ರಭುತ್ವವಾದಿ ಪಕ್ಷಗಳ ಒಗ್ಗಟ್ಟಿಗೆ ಬಲ ತುಂಬಿದೆ 
-ಎಂ.ಕೆ.ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ

*
ಇದು ಕೇವಲ ಸರ್ಕಾರ ರಚನೆಗೆ ಸೀಮಿತವಾಗಬಾರದು. ಜಾತ್ಯತೀತ ಹಾಗೂ ಪ್ರಜಾಪ್ರಭುತ್ವವಾದಿ ಪಕ್ಷಗಳನ್ನು ಒಟ್ಟುಗೂಡಿಸುವ ನೈಜ ಆರಂಭಕ್ಕೆ ಇದು ಕಾರಣವಾಗಬೇಕು
-ಮೆಹಬೂಬಾ ಮುಫ್ತಿ, ಪಿಡಿಪಿ ಮುಖ್ಯಸ್ಥೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು