ಬುಧವಾರ, ಮಾರ್ಚ್ 29, 2023
29 °C

ನವಾಬ್‌ ಮಲಿಕ್‌ಗೆ ಭೂಗತ ಲೋಕದ ಜೊತೆ ನಂಟಿದೆ: ಫಡಣವಿಸ್

ಮೃತ್ಯುಂಜಯ ಬೋಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ‘ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರ ಕುಟುಂಬಕ್ಕೆ ಭೂಗತ ಲೋಕದ ನಂಟಿದೆ’ ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.

ಮಲಿಕ್‌ ಕುಟುಂಬದವರು, ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ನಂಟು ಇರುವ  ಜನರಿಂದ ಮುಂಬೈನ ಕುರ್ಲಾದಲ್ಲಿ ಭೂಮಿ ಖರೀದಿಸಿದ್ದಾಗಿ ಅವರು ಆರೋಪಿಸಿದ್ದು, ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಸರ್ದಾರ್‌ ಶಾ ವಲಿ ಖಾನ್‌, ದಾವೂದ್‌ ಇಬ್ರಾಹಿಂನ ಸಹಚರ ಟೈಗರ್‌ ಮೆಮನ್‌ ಜೊತೆಗೆ ಸಂಪರ್ಕದಲ್ಲಿದ್ದವನು.  ಸಲೀಂ ಇಷ್ಕ್‌ ಪಟೇಲ್‌ ಅಲಿಯಾಸ್‌ ಸಲೀಂ ಪಟೇಲ್‌, ದಾವೂದ್‌ ಇಬ್ರಾಹಿಂನ ‍ಪರವಾಗಿ ಭೂಮಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಇಂಥವರೊಂದಿಗೆ ಮಲಿಕ್‌ ಕುಟುಂಬದವರು ಭೂ ವ್ಯವಹಾರ ನಡೆಸಿದ್ದಾರೆ ಎಂದು ಫಡಣವೀಸ್‌ ಆರೋಪಿಸಿದ್ದಾರೆ.

‘ಸಾಲಿಡಸ್ ಇನ್‌ವೆಸ್ಟ್‌ಮೆಂಟ್‌ ಪ್ರೈವೆಟ್‌ ಲಿಮಿಟೆಡ್‌ ಎಂಬುದು ನವಾಬ್ ಮಲಿಕ್ ಅವರ ಕಂಪನಿ. ಈ ಕಂಪನಿಯು ಅಪರಾಧಿಗಳಿಂದ ಭೂಮಿ ಖರೀದಿಸಿದೆ. ಕುರ್ಲಾದ ಎಲ್‌ಬಿಎಸ್ ರಸ್ತೆಯಲ್ಲಿ ಸುಮಾರು ₹3 ಕೋಟಿ ಮೌಲ್ಯದ ಸುಮಾರು 3 ಎಕರೆ ಭೂಮಿಯನ್ನು ಕೇವಲ ₹20 ಲಕ್ಷಕ್ಕೆ ಖರೀದಿಸಲಾಗಿದೆ’ಎಂದು ಫಡಣವೀಸ್ ಹೇಳಿದ್ದಾರೆ.

ಈ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವುದಾಗಿ ಹೇಳಿರುವ ಅವರು, ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.

ವಿಚಕ್ಷಣಾ ತಂಡದ ಎದುರು ಹಾಜರಾದ ಸೈಲ್‌: ಹಡಗಿನಲ್ಲಿ ಮಾದಕದ್ರವ್ಯ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾದಕ ವಸ್ತು ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ದೆಹಲಿ ವಲಯದ ವಿಚಕ್ಷಣ ತಂಡದ ಎದುರು ಸಾಕ್ಷಿ ಪ್ರಭಾಕರ್‌ ಸೈಲ್‌ ಮಂಗಳವಾರವೂ ಹಾಜರಾದರು.

ಎನ್‌ಸಿಬಿ (ಉತ್ತರ ವಲಯ) ಉಪ ಮಹಾನಿರ್ದೇಶಕ ಗ್ಯಾನೇಶ್ವರ್ ಸಿಂಗ್ ನೇತೃತ್ವದ ದೆಹಲಿಯ ಎನ್‌ಸಿಬಿ ವಿಚಕ್ಷಣಾ ತಂಡ,  ಪ್ರಭಾಕರ್ ಅವರನ್ನು ಸೋಮವಾರ ಹತ್ತು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.

ಮಲಿಕ್‌ ವಿರುದ್ಧ ದೂರು: ಸಚಿವ ನವಾಬ್‌ ಮಲಿಕ್‌ ಅವರು ತಮ್ಮ ಹಾಗೂ ಕುಟುಂಬದವರ ಬಗ್ಗೆ ಜಾತಿ ಹೆಸರಲ್ಲಿ ಸುಳ್ಳು ಮತ್ತು ಅವಹೇಳನಕಾರಿಯಾದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ, ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಅವರ ತಂದೆ ಧ್ಯಾನದೇವ್‌ ವಾಂಖೆಡೆ ಅವರು ಮಂಗಳವಾರ ದೂರು ನೀಡಿದ್ದಾರೆ.

‘ನಾವು ಪರಿಶಿಷ್ಟ ಜಾತಿಯಡಿ ಬರುವ ಮಹಾರ್‌ ಸಮುದಾಯಕ್ಕೆ ಸೇರಿದವರು. ಸಚಿವ ಮಲಿಕ್‌, ನಮ್ಮ ಜಾತಿಯನ್ನು ನಿಂದಿಸಿದ್ದಾರೆ. ಹೀಗಾಗಿ, ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆ
(ದೌರ್ಜನ್ಯ ತಡೆ) ಅಡಿ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ಧ್ಯಾನದೇವ್‌
ಅವರು ಸಹಾಯಕ ಪೊಲೀಸ್‌ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋಸಾವಿಗೆ ನ್ಯಾಯಾಂಗ ಬಂಧನ

ಪುಣೆ: ವಂಚನೆ ಪ್ರಕರಣವೊಂದರಲ್ಲಿ ಬಂಧಿತನಾಗಿರುವ ಕಿರಣ್‌ ಗೋಸಾವಿಯನ್ನು, ಪುಣೆಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮಂಗಳವಾರ ಆದೇಶಿಸಿದೆ.

ಗೋಸಾವಿ, ಐಷಾರಾಮಿ ಹಡಗಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಎನ್‌ಸಿಬಿ ಸಾಕ್ಷಿ. ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ವಂಚಿಸಿದ 2018ರ ಪ್ರಕರಣವೊಂದರಲ್ಲಿ ಈತನನ್ನು ಬಂಧಿಸಲಾಗಿದೆ. ನಗರದ ಕಂಟೋನ್ಮೆಂಟ್‌ ಹಾಗೂ ವನವಾಡಿ ಪೊಲೀಸ್‌ ಠಾಣೆಗಳಲ್ಲಿ ಈತನ ವಿರುದ್ಧ ಇನ್ನೂ ಎರಡು ವಂಚನೆ ಪ್ರಕರಣಗಳು ದಾಖಲಾಗಿವೆ. 

‘ಹೈಡ್ರೋಜನ್‌ ಬಾಂಬ್‌’ ಸಿಡಿಸುವೆ’

ಫಡಣವೀಸ್‌ ಆರೋಪವನ್ನು ತಳ್ಳಿಹಾಕಿರುವ ಸಚಿವ ಮಲಿಕ್, ಭೂ ವ್ಯವಹಾರಗಳೆಲ್ಲ ಪಾರದರ್ಶಕವಾಗಿಯೇ ನಡೆದಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಭೂಗತ ಜಗತ್ತಿನೊಂದಿಗೆ ಫಡಣವೀಸ್‌ ನಂಟಿನ ಬಗ್ಗೆ ಬುಧವಾರ ‘ಹೈಡ್ರೋಜನ್‌ ಬಾಂಬ್‌’ ಸಿಡಿಸುವುದಾಗಿ ಹೇಳಿದ್ದಾರೆ.

‘ಸರ್ದಾರ್‌ ಶಾ ವಲಿ ಖಾನ್‌, 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೀಡಾದವನು. ಅವನೊಂದಿಗೆ ನಮ್ಮ ಯಾವುದೇ ವ್ಯವಹಾರ ಇಲ್ಲ. ಇನ್ನು ಸಲೀಂ ಪಟೇಲ್‌ ವಿಚಾರವಾಗಿ ಬಂದರೆ, ಆತನೇ ಭೂಮಾಲೀಕಳಿಂದ ಅಧಿಕೃತ ಪವರ್‌ ಆಫ್‌ ಅಟಾರ್ನಿ ಪಡೆದ ವ್ಯಕ್ತಿಯಾಗಿದ್ದ. ಹೀಗಾಗಿ, ಭೂಗತಲೋಕದವರಿಂದ ಜಮೀನು ಖರೀದಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು