ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಬಗ್ಗೆ ಚರ್ಚಿಸುವ ಬದಲು ಮೋದಿ ಪ್ರಚಾರದಲ್ಲಿ ವ್ಯಸ್ತರಾಗಿದ್ದಾರೆ: ಉದ್ಧವ್

Last Updated 17 ಏಪ್ರಿಲ್ 2021, 16:04 IST
ಅಕ್ಷರ ಗಾತ್ರ

ಮುಂಬೈ: ‘ರೆಮ್‌ಡಿಸಿವಿರ್ ಇಂಜೆಕ್ಷನ್‌ ಮತ್ತು ಆಕ್ಸಿಜನ್‌ ಕೊರತೆ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಮುಂದಾಗಿದ್ದೆ. ಆದರೆ ಅವರು ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿದ್ದರು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೂರಿದ್ದಾರೆ.

‘ನಿನ್ನೆ ಸಂಜೆ ಪ್ರಧಾನಿಯವರಿಗೆ ದೂರವಾಣಿ ಕರೆ ಮಾಡಿದೆ. ಆದರೆ ಅವರು ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿದ್ದುದರಿಂದ ಮಾತನಾಡಲು ಸಿಗಲಿಲ್ಲ. ಆದಾಗ್ಯೂ, ನಾವು ಕೇಂದ್ರದಿಂದ ಎಲ್ಲ ರೀತಿಯ ಸಹಕಾರ ಪಡೆಯುತ್ತಿದ್ದೇವೆ’ ಎಂದು ಠಾಕ್ರೆ ಹೇಳಿದ್ದಾರೆ.

ಕೋವಿಡ್ ಪೀಡಿತ ಮಹಾರಾಷ್ಟ್ರಕ್ಕೆ ರೆಮ್‌ಡಿಸಿವಿರ್ ಸರಬರಾಜು ಸ್ಥಗಿತಗೊಳಿಸುವಂತೆ ಮೋದಿ ಸರ್ಕಾರ ಔಷಧ ಕಂಪನಿಗಳಿಗೆ ಸೂಚಿಸಿದೆ ಎಂದು ‘ಮಹಾ ವಿಕಾಸ್ ಅಘಾಡಿ’ ಸರ್ಕಾರ ಆರೋಪಿಸಿತ್ತು. ಆದರೆ ಎನ್‌ಡಿಎ ಸರ್ಕಾರ ಮತ್ತು ಬಿಜೆಪಿಯ ಮಹಾರಾಷ್ಟ್ರ ಘಟಕವು ಇದನ್ನು ಅಲ್ಲಗಳೆದಿದೆ.

ಎನ್‌ಸಿಪಿಯ ಮುಖ್ಯ ವಕ್ತಾರ, ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಹಾಗೂ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ಸಹ ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ.

‘ಮಹಾರಾಷ್ಟ್ರ ಸರ್ಕಾರವು ರೆಮ್‌ಡಿಸಿವಿರ್‌ಗಾಗಿ 16 ರಫ್ತು ಕಂಪನಿಗಳಲ್ಲಿ ಮನವಿ ಮಾಡಿತ್ತು. ಆದರೆ ಆಗ ತಿಳಿದುಬಂದ ಆಘಾತಕಾರಿ ಸಂಗತಿ ಏನೆಂದರೆ, ಮಹಾರಾಷ್ಟ್ರಕ್ಕೆ ಔಷಧ ಪೂರೈಕೆ ಮಾಡದಂತೆ ಕೇಂದ್ರವು ಆ ಕಂಪನಿಗಳಿಗೆ ಸೂಚಿಸಿತ್ತು. ಒಂದು ವೇಳೆ ಔಷಧ ಪೂರೈಸಿದರೆ ಪರವಾನಗಿ ರದ್ದುಗೊಳಿಸುವುದಾಗಿ ಕಂಪನಿಗಳಿಗೆ ಎಚ್ಚರಿಕೆ ನೀಡಿತ್ತು’ ಎಂದು ನವಾಬ್ ಮಲಿಕ್ ಆರೋಪಿಸಿದ್ದಾರೆ.

‘ಇಂಥ ಪರಿಸ್ಥಿತಿಯಲ್ಲಿ ಇದೊಂದು ಅಪಾಯಕಾರಿ ನಿದರ್ಶನವಾಗಬಲ್ಲದು. ಈ ರಫ್ತುದಾರರಿಂದ ರೆಮ್‌ಡಿಸಿವಿರ್‌ ದಾಸ್ತಾನು ವಶಪಡಿಸಿಕೊಂಡು ಅದನ್ನು ಅಗತ್ಯವಿರುವವರಿಗೆ ಪೂರೈಸುವುದು ಬಿಟ್ಟು ಮಹಾರಾಷ್ಟ್ರ ಸರ್ಕಾರಕ್ಕೆ ಬೇರೆ ದಾರಿಯಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಅವರನ್ನು ಟ್ಯಾಗ್ ಮಾಡಿ ಮಲಿಕ್ ಟ್ವೀಟ್ ಮಾಡಿದ್ದಾರೆ.

ಗುಜರಾತ್‌ಗೆ ಮಾತ್ರ ರೆಮ್‌ಡಿಸಿವಿರ್‌ ಪೂರೈಸಲು ರಫ್ತು ಕಂಪನಿಯೊಂದಕ್ಕೆ ಅನುಮತಿ ನೀಡಿರುವ ಪತ್ರದ ಪ್ರತಿಯನ್ನೂ ಮತ್ತೊಂದು ಟ್ವೀಟ್‌ನಲ್ಲಿ ಮಲಿಕ್ ಲಗತ್ತಿಸಿದ್ದಾರೆ.

ಪೀಯೂಷ್ ಗೋಯಲ್ ತಿರುಗೇಟು

ಮಲಿಕ್ ಆರೋಪಕ್ಕೆ ಕೇಂದ್ರ ಸಚಿವ ಪೀಯೂಷ್ ಗೋಯಲ್ ತಿರುಗೇಟು ನೀಡಿದ್ದಾರೆ.

‘ನಿನ್ನೆಯಷ್ಟೇ ಪ್ರಧಾನಿಯವರು ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಲ್ಲದೆ, ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಕೆಲಸ ಮಾಡುವಂತೆ ಸಲಹೆ ಸೂಚನೆ ನೀಡಿದ್ದಾರೆ. ಹೀಗಿರುವಾಗ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ನೋಡಿ ಆಘಾತವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿಯವರು ಇಂಥ ರಾಜಕೀಯ ಮಾಡುವುದನ್ನು ನಿಲ್ಲಿಸಿ ಜವಾಬ್ದಾರಿಯಿಂದ ವರ್ತಿಸಬೇಕಿದೆ’ ಎಂದು ಪೀಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT