ಬುಧವಾರ, ಮಾರ್ಚ್ 3, 2021
18 °C

ಪಕ್ಷ ತೊರೆಯುವುದಿಲ್ಲ ಎಂದ ಟಿಎಂಸಿ ಸಂಸದ, ಬಿಜೆಪಿ ಎದುರು ಹೋರಾಡಲು ಕರೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಅಸಮಾಧಾನಗೊಂಡಿದ್ದ ಸಂಸದ ಪ್ರಸೂನ್ ಬ್ಯಾನರ್ಜಿ ಟಿಎಂಸಿಯನ್ನು ತೊರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಪಕ್ಷದೊಳಗೆ ಯಾವುದೇ ಬಿನ್ನಾಭಿಪ್ರಾಯಗಳಿದ್ದರೂ ಕೂಡ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವಂತೆ ಮನವಿ ಮಾಡಿದ್ದಾರೆ. 

ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಪ್ರಕಟಿಸಿದ್ದಾರೆ.

ಭಾರತದ ಫುಟ್ಬಾಲ್ ತಂಡದ ಮಾಜಿ ನಾಯಕರಾಗಿರುವ ಹೌರಾದ ಸಂಸದ, ಹೌರಾ ಜಿಲ್ಲೆಯಲ್ಲಿನ ತಮ್ಮ ಕುಂದುಕೊರತೆಗಳ ಬಗ್ಗೆ ಪಕ್ಷದ ನಡವಳಿಕೆ ಮತ್ತು ಪ್ರಮುಖ ವಿಚಾರಗಳಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಸಭೆ ನಡೆಸಿದ ಅರ್ಜುನ ಪ್ರಶಸ್ತಿ ಪುರಸ್ಕೃತ, 'ನಾನು ಪಕ್ಷವನ್ನು ತೊರೆದು ಎಲ್ಲಿಗೂ ಹೋಗುತ್ತಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಕೂಡ ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಹೋರಾಡಬೇಕು' ಎಂದು ಕರೆ ನೀಡಿದ್ದಾರೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಟಿಎಂಸಿ ವಕ್ತಾರ ಕುನಾಲ್ ಘೋಷ್ ಮಾತನಾಡಿ, 'ಪಕ್ಷದಲ್ಲಿ ಪ್ರಸೂನ್ ಅವರು ಹಿರಿಯರು ಮತ್ತು ಈ ದೇಶದ ಹೆಮ್ಮೆ. ಅವರು ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ' ಎಂದು ಹೇಳಿದ್ದಾರೆ.

ಡೊಮ್ಜೂರ್ ಶಾಸಕ ರಾಜೀಬ್ ಬ್ಯಾನರ್ಜಿ ಮತ್ತು ಬ್ಯಾಲಿ ಶಾಸಕ ಬೈಶಾಲಿ ದಾಲ್ಮಿಯಾ ಅವರೊಂದಿಗೆ ಸೇರಿಕೊಂಡ ಪ್ರಸೂನ್ ಬ್ಯಾನರ್ಜಿ ಅವರು, ಹೌರಾ ಜಿಲ್ಲೆಯಲ್ಲಿನ ಪಕ್ಷದ ಕೆಲವು ವಿಚಾರಗಳ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಮೂರು ದಿನಗಳ ಹಿಂದಷ್ಟೇ ಆರಂಭದಲ್ಲಿ ಬಿರ್ಭುಮ್ ಜಿಲ್ಲೆಯ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ನಟಿಯಾಗಿದ್ದು ರಾಜಕಾರಣದತ್ತ ಹೊರಳಿದ್ದ ಶತಾಬ್ದಿ ರಾಯ್ ಕೂಡ, ಪಕ್ಷದಲ್ಲಿ ನಂಬಿಕೆ ಇಟ್ಟಿರುವುದಾಗಿ ತಿಳಿಸಿದ್ದರು.

ಶುಕ್ರವಾರ ದೆಹಲಿಗೆ ಹಾರಲು ಯೋಜಿಸಿದ್ದ ಬಿರ್ಭಮ್ ಸಂಸದೆ ರಾಯ್ ಅವರು, ಅಭಿಷೇಕ್ ಬ್ಯಾನರ್ಜಿಯನ್ನು ಭೇಟಿಯಾದ ನಂತರ ಪಕ್ಷವನ್ನು ತೊರೆಯುವುದಿಲ್ಲ ಎಂದು ಘೋಷಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು