ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಚಿಂತನೆ ಹೇರಬಯಸುವುದಿಲ್ಲ –ಸುಪ್ರೀಂ

Last Updated 6 ಅಕ್ಟೋಬರ್ 2020, 16:20 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕುರಿತಂತೆ ತಾನು ಪ್ರಗತಿಪರ ಹೆಜ್ಜೆ ಇಟ್ಟಿರುವುದಾಗಿ ಆಂಧ್ರಪ್ರದೇಶ ಸರ್ಕಾರ ಪ್ರತಿಪಾದಿಸಿದ್ದರೂ, ‘ಈ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ವಿ.ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠವು, ‘ಈ ಪೀಠದಲ್ಲಿರುವ ನಾವೆಲ್ಲರೂ ಬದುಕಿನುದ್ದಕ್ಕೂ ಆಂಗ್ಲ ಮಾಧ್ಯಮದಲ್ಲಿಯೇ ಕಲಿತಿದ್ದೇವೆ. ಆದರೆ, ನಾವು ನಮ್ಮ ಚಿಂತನೆಗಳನ್ನು ಇತರರ ಮೇಲೆ ಹೇರಲು ಬಯಸುವುದಿಲ್ಲ’ ಎಂದು ಸ್ಪಷ್ಟಪಡಿಸಿತು.

1 ರಿಂದ 6ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಆದೇಶವನ್ನು ವಜಾ ಮಾಡಿದ್ದ ಹೈಕೋರ್ಟ್‌ ಕ್ರಮವನ್ನು ಪ್ರಶ್ನಿಸಿ ಆಂಧ್ರಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ನಿಲುವು ವ್ಯಕ್ತಪಡಿಸಿತು.

ಆಂಧ್ರಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಅವರು, ‘ತೆಲುಗು ಮಾಧ್ಯಮದಲ್ಲಿ ಶಿಕ್ಷಣವನ್ನು ಕಲಿಯುವ ಅವಕಾಶಗಳನ್ನು ಸರ್ಕಾರ ಕಸಿದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪ್ರಾದೇಶಿಕ ಭಾಷೆಗಳಲ್ಲಿ ಕಲಿತವರು, ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಲಾಗದು’ ಎಂದು ಅವರು ಹೇಳಿದರು. ಇದಕ್ಕೆ ‘ಹೋಲಿಕೆ ಸೂಕ್ತವಲ್ಲ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅಭಿಪ್ರಾಯಪಟ್ಟರು.

ಆದರೆ, ತಮ್ಮ ಮಾತನ್ನು ಮುಂದುವರಿಸಿದ ವಕೀಲ ವಿಶ್ವನಾಥನ್, ‘ನನಗೆ, ಪ್ರಾದೇಶಿಕ ಭಾಷೆಗಳಲ್ಲಿ ಕಲಿತ ಗೆಳೆಯರು ಇದ್ದಾರೆ. ಅವರು ಪ್ರಾದೇಶಿಕ ಭಾಷೆಯಲ್ಲಿ ಚಿಂತಿಸಿ, ಇಂಗ್ಲಿಷ್‌ಗೆ ತರ್ಜುಮೆ ಮಾಡಿಕೊಳ್ಳುತ್ತಾರೆ. ನಂತರ ತಮ್ಮ ವಾದ ಮಂಡಿಸುವ ವೇಳೆಗೆ ಪ್ರಕರಣವೇ ಮುಗಿದಿರುತ್ತದೆ’ ಎಂದು ಹೇಳಿದರು.

ವಿಚಾರಣೆಯನ್ನು ಕೋರ್ಟ್ ಮುಂದಿನ ವಾರಕ್ಕೆ ಮಂದೂಡಿತು. ಆಂಧ್ರದಲ್ಲಿ ಮಾಜಿ ಸ್ಪೀಕರ್ ಬುದ್ಧ ಪ್ರಸಾದ್ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅನೇಕ ಪ್ರಮುಖರು ಇಂಗ್ಲಿಷ್ ಮಾಧ್ಯಮ ಕುರಿತ ಸರ್ಕಾರದ ನಿಲುವನ್ನು ವಿರೋಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT