ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಪ್ರಕಟಣೆ; ಆದೇಶ ಪಾಲಿಸಿ: ಸುಪ್ರೀಂ

Last Updated 20 ಜುಲೈ 2021, 15:35 IST
ಅಕ್ಷರ ಗಾತ್ರ

ನವದೆಹಲಿ: ‘ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂಬ ಆದೇಶವನ್ನು ರಾಜಕೀಯ ಪಕ್ಷಗಳು ಪಾಲಿಸಲೇಬೇಕು‘ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಫೆಬ್ರುವರಿ 2020ರಲ್ಲಿ ನೀಡಲಾಗಿದ್ದ ಆದೇಶದ ಪಾಲನೆ ಕುರಿತಂತೆ ರಾಜಕೀಯ ಪಕ್ಷಗಳ ಕ್ಷಮೆಯನ್ನು ಒಪ್ಪುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಆರ್‌.ಎಫ್‌.ನರೀಮನ್‌, ಬಿ.ಆರ್.ಗವಾಯಿ ಅವರಿದ್ದ ಪೀಠ ಸ್ಪಷ್ಟಪಡಿಸಿತು.

ಬಿಹಾರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಈ ಆದೇಶವನ್ನು ಪಾಲಿಸಿಲ್ಲ ಎಂಬುದಕ್ಕೆ ಸಂಬಂಧಿಸಿ ಸಲ್ಲಿಸಿದ್ದ ನಿಂದನಾ ಅರ್ಜಿಯ ವಿಚಾರಣೆಯ ವೇಳೆ, ಸಿಪಿಐ–ಎಂ ಪಕ್ಷವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ.ವಿ.ಸುರೇಂದ್ರನಾಥ್, ‘ಇದು ಅಗಬಾರದಿತ್ತು’ ಎಂದು ಬೇಷರತ್ ಕ್ಷಮೆ ಯಾಚಿಸಿದರು.

ಪೀಠವು ಇದಕ್ಕೆ, ‘ನಾವು ಕ್ಷಮೆಯನ್ನು ಒಪ್ಪುವುದಿಲ್ಲ. ಆದೇಶವನ್ನು ಪಾಲಿಸಬೇಕು‘ ಎಂದು ತಾಕೀತು ಮಾಡಿತು.

ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕಾಸ್‌ ಸಿಂಗ್, ರಾಷ್ಟ್ರೀಯ ಪಕ್ಷಗಳು ನಿಯಮವನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಚುನಾವಣಾ ಚಿಹ್ನೆಯನ್ನು ಅಮಾನತುಪಡಿಸಬೇಕು ಎಂದು ಸಲಹೆ ಮಾಡಿದರು.

ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷವು ಕ್ರಿಮಿನಲ್‌ ಹಿನ್ನೆಲೆಯಿದ್ದ 26, ಸಿಪಿಐಎಂ ನಾಲ್ವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅಧಿಕ ಸಂಖ್ಯೆಯಲ್ಲಿ ಅಂದರೆ 103 ಅಭ್ಯರ್ಥಿಗಳು ರಾಷ್ಟ್ರೀಯ ಜನತಾ ದಳ ಪಕ್ಷಕ್ಕೆ ಸೇರಿದ್ದರೆ, ಜೆಡಿಯು 56, ಬಿಜೆಪಿ 77 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಅಭ್ಯರ್ಥಿಗಳು ಸಾಮಾಜಿಕ ಕಾರ್ಯಕರ್ತ ಇತ್ಯಾದಿ ಎಂಬುದು ಎಲ್ಲ ಪಕ್ಷಗಳ ಸಾಮಾನ್ಯ ಉತ್ತರ. ಅತ್ಯಾಚಾರ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ದಾಖಲಿಸಿದಾಗಲೂ ರಾಜಕೀಯ ಪಕ್ಷಗಳು ಈ ನಿಲುವು ತಳೆಯಬಹುದೆ? ಅಪರಾಧ ಹಿನ್ನೆಲೆಯುಳ್ಳವರನ್ನು ಸಾರ್ವಜನಿಕ ಕ್ಷೇತ್ರಕ್ಕೆ ಕರೆತರುವ ಮೂಲಕ ರಾಜಕೀಯದಲ್ಲಿ ಅಪರಾಧೀಕರಣ ತೀವ್ರಗತಿಯಲ್ಲಿ ಏರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅಮಿಕಸ್‌ ಕ್ಯೂರಿ ಹಿರಿಯ ವಕೀಲ ಕೆ.ವಿ.ವಿಶ್ವನಾಥ್ ಅವರು, ನಿಯಮ ಉಲ್ಲಂಘನೆ ಸಂದರ್ಭದಲ್ಲಿ ಪಕ್ಷಗಳ ಚಿಹ್ನೆಯನ್ನು ಅಮಾನತುಪಡಿಸುವುದು ನಿರ್ದಿಷ್ಟ ಕಾಲಮಿತಿಗೆ ಅನ್ವಯವಾಗಬೇಕು ಎಂದು ಸಲಹೆ ಮಾಡಿದರು.

ಈ ಹಂತದಲ್ಲಿ ಪೀಠವು ವಿಶ್ವನಾಥನ್‌ ಅವರಿಗೆ, ಗಂಭೀರವಲ್ಲದ ಉಲ್ಲಂಘನೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳನ್ನು ನಿರ್ದಿಷ್ಟ ಅವಧಿಗೆ, ಈ ಪ್ರಕರಣದಲ್ಲಿ ಎರಡು ಪಕ್ಷಗಳು ಮುಂದಿನ ಚುನಾವಣೆವರೆಗೂ ಅಮಾನತುಪಡಿಸಬಹುದೇ ಎಂದು ಪ್ರಶ್ನಿಸಿತು. ಅಲ್ಲದೆ, ರಾಷ್ಟ್ರೀಯ ಪಕ್ಷಗಳ ವಿಷಯದಲ್ಲಿ ಪಂಚಾಯಿತಿ ಹಂತದಲ್ಲಿ ಅಭ್ಯರ್ಥಿಯ ಲೋಪಕ್ಕೆ, ಇಡೀ ಪಕ್ಷವನ್ನು ಕಣದಿಂದ ಹೊರಗಿಡಲಾಗದು ಎಂದು ಪೀಠ ಅಭಿಪ್ರಾಯಪಟ್ಟಿತು.

ಕೋರ್ಟ್‌ ಕೆಲ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬಹುದು ಎಂದು ವಿಶ್ವನಾಥನ್‌ ಹೇಳಿದರು. ಆಗ, ಪೀಠವು, ಲೋಪವು ಪಕ್ಷದಿಂದ ಅಥವಾ ಅಭ್ಯರ್ಥಿಯಿಂದ ಆಗಿದೆ ಎಂಬುದನ್ನು ಹೇಗೆ ಗುರುತಿಸುವುದು ಎಂದು ಪ್ರಶ್ನಿಸಿತು.

ಸುದೀರ್ಘ ವಿಚಾರಣೆಯ ಬಳಿಕ ಈ ಕುರಿತ ತೀರ್ಪನ್ನು ಪೀಠವು ಕಾಯ್ದಿರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT