ಸೋಮವಾರ, ಸೆಪ್ಟೆಂಬರ್ 26, 2022
22 °C

ಅವರಿಂದ ಹಣ ಪಡೆದು, ಎಎಪಿಗೆ ಕೆಲಸ ಮಾಡಿ: ಬಿಜೆಪಿ ಕಾರ್ಯಕರ್ತರಿಗೆ ಕೇಜ್ರಿವಾಲ್ ಕರೆ

ಪಿಟಿಐ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್‌: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಗುಜರಾತ್‌ನಲ್ಲಿ ಆಡಳಿತ ಪಕ್ಷದಲ್ಲಿ ಇದ್ದುಕೊಂಡೇ ಎಎಪಿಯನ್ನು ಬೆಂಬಲಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತರು ಪಕ್ಷದಿಂದ ತಮಗೆ ಸಿಗುತ್ತಿರುವ ದುಡ್ಡನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು. ಆದರೆ ಒಳಗಿಂದೊಳಗೆ ಎಎಪಿ ಪರ ಕೆಲಸ ಮಾಡಬೇಕು ಎಂದು ರಾಜ್‌ಕೋಟ್‌ನಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿ ಕೇಜ್ರಿವಾಲ್‌ ಹೇಳಿದ್ದಾರೆ.

ಎರಡು ದಿನಗಳ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕೇಜ್ರಿವಾಲ್‌ ಅಂತಿಮ ದಿನವಾದ ಶನಿವಾರ ಬಿಜೆಪಿ ಕಾರ್ಯಕರ್ತರಿಗೆ ಪಕ್ಷವನ್ನು ಬಿಡದಿರಲು ಮನವಿ ಮಾಡಿದರು. ಆ ಪಕ್ಷದಲ್ಲಿ ಇದ್ದುಕೊಂಡೇ ಎಎಪಿಯನ್ನು ಬೆಂಬಲಿಸುವಂತೆ ಕೋರಿಕೊಂಡರು.

ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಚುನಾವಣೆ ಪೂರ್ವದಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳ ಫಲವನ್ನು ಬಿಜೆಪಿ ಕಾರ್ಯಕರ್ತರೂ ಪಡೆದುಕೊಳ್ಳಬಹುದು. ನಮಗೆ ಬಿಜೆಪಿ ನಾಯಕರು ಬೇಕಾಗಿಲ್ಲ. ಬಿಜೆಪಿ ತನ್ನ ನಾಯಕರನ್ನು ಇಟ್ಟುಕೊಳ್ಳಲಿ. ಆದರೆ ಬಿಜೆಪಿಯ ತಾಲ್ಲೂಕು ಮತ್ತು ಬೂತ್‌ ಮಟ್ಟದ ಕಾರ್ಯಕರ್ತರು, ಗ್ರಾಮಗಳಲ್ಲಿ ಪಕ್ಷದ ಪರ ಕೆಲಸ ಮಾಡುತ್ತಿರುವವರು ಎಲ್ಲರೂ ಸಾಮೂಹಿಕವಾಗಿ ಎಎಪಿ ಸೇರುತ್ತಿದ್ದಾರೆ ಎಂದು ಆರವಿಂದ ಕೇಜ್ರಿವಾಲ್‌ ಹೇಳಿದರು.

ಬಿಜೆಪಿ ತನ್ನ ಕಾರ್ಯಕರ್ತರ ಕುಟುಂಬಗಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ, ಉಚಿತ ವಿದ್ಯುತ್‌ ಯೋಜನೆಗಳನ್ನು ಘೋಷಿಸಿಲ್ಲ. ಆದರೆ ಎಎಪಿ ಎಲ್ಲರ ಕಾಳಜಿಯನ್ನು ಮಾಡುತ್ತದೆ. ಬಿಜೆಪಿ ಕಾರ್ಯಕರ್ತರು ಅಲ್ಲಿದ್ದುಕೊಂಡೇ ಎಎಪಿ ಪರ ಕೆಲಸ ಮಾಡಬಹುದು. ಹೆಚ್ಚಿನ ಕಾರ್ಯಕರ್ತರಿಗೆ ಚುನಾವಣೆ ಸಂದರ್ಭ ಬಿಜೆಪಿ ದುಡ್ಡುಕೊಡುತ್ತದೆ. ಅದನ್ನು ತೆಗೆದುಕೊಳ್ಳಿ. ನಮ್ಮನ್ನು ಬೆಂಬಲಿಸಿ. ಬಿಜೆಪಿಯಂತೆ ಹಂಚಲು ನಮ್ಮ ಬಳಿ ಹಣವಿಲ್ಲ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ಅಧಿಕಾರಕ್ಕೆ ಬಂದ ಬಳಿಕ ಉಚಿತ ವಿದ್ಯುತ್‌, ಉತ್ತಮ ಶಾಲೆಗಳ ನಿರ್ಮಾಣ, ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ, ಉತ್ತಮ ಆರೋಗ್ಯ ಸೇವೆಯನ್ನು ಬಿಜೆಪಿ ಕಾರ್ಯಕರ್ತರೆಂದು ವಿಭಜಿಸದೆ ಎಲ್ಲರಿಗೂ ಸಹಕಾರಿಯಾಗಿ ನಿಲ್ಲುತ್ತೇವೆ ಎಂದು ಕೇಜ್ರಿವಾಲ್‌ ಭರವಸೆಯ ಮಾತುಗಳನ್ನಾಡಿದರು.

ಗುಜರಾತ್‌ ಎಎಪಿ ಅಧ್ಯಕ್ಷ ವಿರುದ್ಧ ಎಫ್‌ಐಆರ್‌
ಸೂರತ್‌ (ಪಿಟಿಐ):
ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಮತ್ತು ಮಾನಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಎಎಪಿಯ ಗುಜರಾತ್‌ ಘಟಕದ ಅಧ್ಯಕ್ಷ ಗೋಪಾಲ್‌ ಇಟಾಲಿಯಾ ವಿರುದ್ಧ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್‌.ಪಾಟಿಲ್‌ ಮತ್ತು ಗೃಹ ಸಚಿವ ಸಾಂಗ್ವಿ ವಿರುದ್ಧ ಗೋಪಾಲ್‌ ಮಾನಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಸೂರತ್‌ನಲ್ಲಿ ಬಿಜೆಪಿಯ ‘ಗೂಂಡಾಗಳು’ ಇತ್ತೀಚೆಗೆ ಎಎಪಿಯ ನಾಯಕ ಮನೋಜ್‌ ಸೊರಥಿಯಾ ಮೇಲೆ ಹಲ್ಲೆ ಮಾಡಿದ್ದರು ಎಂದು ದೂರಿದ್ದ ಗೋಪಾಲ್‌ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಗೃಹ ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. 

ಕೇಜ್ರಿವಾಲ್‌ ‘ಯು– ಟರ್ನ್‌’ ನಾಯಕ
ರಾಜ್‌ಕೋಟ್‌ (ಪಿಟಿಐ):
ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ದೇಶದಲ್ಲಿ ನಿಲುವು ಬದಲಿಸುವ ಅತಿ ದೊಡ್ಡ ನಾಯಕ (ಯು–ಟರ್ನ್‌) ಎಂದು ಸಂಸದ, ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ.

ರಾಜಕಾರಣದಲ್ಲಿ ವಿಶ್ವಾಸಾರ್ಹತೆ ಮತ್ತು ಸಮಗ್ರತೆಯ ಕೊರತೆಯನ್ನು ಕೇಜ್ರಿವಾಲ್‌ ಹೊಂದಿದ್ದಾರೆ. ಅವರ ‘ರೆವ್ಡಿ (ಉಚಿತ) ಮತ್ತು ಬೆವ್ಡಿ (ಅಬಕಾರಿ) ರಾಜಕೀಯ’ವನ್ನು ಗುಜರಾತಿನ ಯುವ ಜನರು ತಿರಸ್ಕರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು