ಶನಿವಾರ, ಜೂನ್ 12, 2021
22 °C

ಇಐಎ ಕರಡು ಅಧಿಸೂಚನೆ ಪ್ರಜಾಪ್ರಭುತ್ವ ವಿರೋಧಿ: ಜೈರಾಮ್‌ ರಮೇಶ್‌ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ‘ಪರಿಸರದ ಮೇಲಿನ ಪರಿಣಾಮಗಳ ಮೌಲ್ಯಮಾಪನ’ (ಇಐಎ) ಕರಡಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಜನವಿರೋಧಿ ನೀತಿಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್ ಆರೋಪಿಸಿದ್ದಾರೆ.

‘ಇಐಎ ಕರಡು ಅಧಿಸೂಚನೆ 2020’ ಎಂಬ ವಿಷಯ ಕುರಿತು ಡಾ.ಎಂ.ಚನ್ನಾ ರೆಡ್ಡಿ ಸ್ಮಾರಕ ಟ್ರಸ್ಟ್‌ ಆಯೋಜಿಸಿದ್ದ ಆನ್‌ಲೈನ್‌ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಇಂಥ ನಡೆಯಿಂದ ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳು ದುರ್ಬಲಗೊಂಡಿವೆ. ಇದು ಒಕ್ಕೂಟ ವ್ಯವಸ್ಥೆಯ ವಿರೋಧಿಯೂ ಆಗಿದೆ ಎಂದು ಟೀಕಿಸಿದರು.

‘ಪರಿಸರ ಸಚಿವ ಜಾವಡೇಕರ್‌ ಅವರು ಪರಿಸರ, ಅರಣ್ಯಗಳನ್ನು ಸಂರಕ್ಷಿಸುವುದನ್ನು ಬಿಟ್ಟು ಪರಿಸರಕ್ಕೆ ಮಾರಕವಾದ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡುವುದೇ ತಮ್ಮ ಕೆಲಸ ಎಂಬುದಾಗಿ ಭಾವಿಸಿದಂತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಹೊಸ ಉದ್ದಿಮೆಗಳ ಸ್ಥಾಪನೆಗೆ ತ್ವರಿತವಾಗಿ ಅನುಮೋದನೆ ನೀಡುವುದಕ್ಕೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ತ್ವರಿತ ಅನುಮೋದನೆ ನೀಡಲು ಪರಿಸರ ಕಾನೂನುಗಳು ವೇಗತಡೆಗಳಂತೆ ಕಂಡವು. ಹೀಗಾಗಿಯೇ ಕಾನೂನುಗಳನ್ನು ದುರ್ಬಲಗೊಳಿಸಲು ಸರ್ಕಾರ ಮುಂದಾಗಿದೆ’ ಎಂದು ವಿಶ್ಲೇಷಿಸಿದರು.

‘ರಾಷ್ಟ್ರೀಯ ಹಸಿರು ನ್ಯಾಯಪೀಠವನ್ನು ಸಹ ದುರ್ಬಲಗೊಳಿಸಲಾಗಿದೆ. ಪರಿಸರ ಸಂರಕ್ಷಣೆ ವಿಚಾರದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನೂ ಇಐಎ ಕಡಿಮೆ ಮಾಡಲಿದೆ. ಎಲ್ಲಿಯಾದರು ಪರಿಸರ ಕಾನೂನುಗಳ ಉಲ್ಲಂಘನೆ ನಡೆಯುತ್ತಿರುವುದು ಕಂಡು ಬಂದರೂ, ಸ್ಥಳೀಯ ಸಮುದಾಯಗಳು, ಎನ್‌ಜಿಒಗಳು, ಯಾವುದೇ ಸಂಘಟನೆಗಳು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲು ಇನ್ನು ಮುಂದೆ ಅವಕಾಶ ಇರುವುದಿಲ್ಲ’ ಎಂದು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು