ಶನಿವಾರ, ಡಿಸೆಂಬರ್ 5, 2020
21 °C

ಸೋಂಕಿತರಿಗೆ ಮುಳುವಾದ ವಾಯುಮಾಲಿನ್ಯ; ದೆಹಲಿಯಲ್ಲಿ ಪಾಸಿಟಿವ್‌ ಪ್ರಕರಣಗಳ ಹೆಚ್ಚಳ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ಕೋವಿಡ್‌ ಹೊಸ ಪ್ರಕರಣಗಳು ಮತ್ತು ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಈ ಪ್ರಮಾಣ ಏರುಗತಿಯಲ್ಲೇ ಸಾಗಿದೆ.

ದಸರಾ ಹಬ್ಬದ ಖರೀದಿ ಮತ್ತು ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರ  ಗುಂಪುಗೂಡುವಿಕೆ ಹೆಚ್ಚಿದ್ದರಿಂದ, ಈ ಅವಧಿಯಲ್ಲಿ ದೆಹಲಿಯಲ್ಲಿನ ಕೊರೊನಾ ಸೋಂಕಿತರ ಹೊಸ ಪ್ರಕರಣಗಳು ಗಣನೀಯವಾಗಿ ಹೆಚ್ಚಿದೆ.

ಜೂನ್‌ ಮತ್ತು ಜುಲೈನಲ್ಲಿ ಏರುಗತಿಯಲ್ಲಿದ್ದ ಸೋಂಕಿತರ ಸಂಖ್ಯೆ ಆಗಸ್ಟ್‌ನಿಂದ ಈಚೆಗೆ ಇಳಿಮುಖವಾಗುತ್ತ ಸಾಗಿತ್ತು. ಆದರೆ, ಅಕ್ಟೋಬರ್‌ ಅಂತ್ಯಕ್ಕೆ ಸೋಂಕಿತರ ಪ್ರಮಾಣ ಮತ್ತೆ ಏರುಗತಿಯಲ್ಲಿ ಸಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಅಲ್ಲದೆ, ಕೊರೊನಾ ಪರೀಕ್ಷೆಗೆ ಒಳಪಟ್ಟವರ ಪೈಕಿ ಶೇಕಡಾವಾರು ಸೋಂಕಿತರ ಪ್ರಮಾಣದಲ್ಲೂ ದಿಢೀರ್‌ ಹೆಚ್ಚಳವಾಗಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ ಪಾಸಿಟಿವ್‌ ಪ್ರಕರಣಗಳು ಶೇ 8ರ ಗಡಿಯನ್ನು ದಾಟಿವೆ.

ಅಕ್ಟೋಬರ್‌ ಮಧ್ಯ ಭಾಗದಿಂದ ಚಳಿಯೂ ಹೆಚ್ಚಿದ್ದು, ಮಂಜು ಕವಿದ ವಾತಾವರಣ ಕಂಡುಬರುತ್ತಿದೆ. ವಾಹನಗಳು ಹೊರಸೂಸುವ ಹೊಗೆಯೂ ಮಂಜಿನ ಜೊತೆ ಸೇರಿಕೊಂಡಿದ್ದರಿಂದ ರಾಷ್ಟ್ರರಾಜಧಾನಿ ವಲಯ (ಎನ್‌ಸಿಆರ್‌)ದಲ್ಲಿ ವಾಯುಮಾಲಿನ್ಯ ಪ್ರಮಾಣವೂ ತೀವ್ರ ಸ್ವರೂಪದಲ್ಲಿ ಹೆಚ್ಚಿದೆ.

ಇದರ ಪರಿಣಾಮ ವಿವಿಧ  ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತರರ ಪೈಕಿ 54 ಜನರು ಉಸಿರಾಟದ ಸಮಸ್ಯೆ ಉಲ್ಬಣಗೊಂಡು ಮೃತಪಟ್ಟಿದ್ದಾರೆ. ಜುಲೈ 7ರ ನಂತರ ಮೊದಲ ಬಾರಿಗೆ ಒಂದೇ ದಿನ 50ಕ್ಕೂ ಹೆಚ್ಚು ಜನ ಸಾವಿಗೀಡಾಗಿರುವ ಪ್ರಕರಣಗಳು ವರದಿಯಾಗಿವೆ.

ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶದ ಪಾಲನೆ ಭಾಗಶಃ ಆಗುತ್ತಿದೆ. ಉಲ್ಲಂಘಿಸಿದವರಿಗೆ ₹ 500 ದಂಡ ವಿಧಿಸಲಾಗುತ್ತಿದೆ. ಆದರೂ ಜನರ ಗುಂಪುಗೂಡುವಿಕೆ ಮತ್ತು ಚಳಿಯಿಂದಾಗಿ ಸೋಂಕು ಪಸರಿಸುತ್ತಿದೆ ಎಂದು ಏಮ್ಸ್‌ನ ವೈದ್ಯರು ತಿಳಿಸಿದ್ದಾರೆ.

ದೀಪಾವಳಿ ಸಂದರ್ಭ ಮತ್ತೆ ಸಾರ್ವಜನಿಕರ ಗುಂಪುಗೂಡುವಿಕೆಯ ಸಾಧ್ಯತೆ ಇರುವುದರಿಂದ ಸೋಂಕು ಮತ್ತಷ್ಟು ಹರಡಲಿದೆ. ಅಲ್ಲದೆ, ವಾಯು ಮಾಲಿನ್ಯದ ಪ್ರಮಾಣ ಹೆಚ್ಚುವುದರಿಂದ ಸಾವು– ನೋವಿನ ಪ್ರಮಾಣದಲ್ಲೂ ಹೆಚ್ಚಳ ಕಂಡುಬರಲಿದೆ. ಸಾರ್ವಜನಿಕರು ನಿರ್ಲಕ್ಷ್ಯ ತೋರಿದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಿತ್ಯವೂ 10,000 ದಾಟಬಹುದು ಎಂದೂ ವೈದ್ಯರು ಎಚ್ಚರಿಸಿದ್ದಾರೆ.

ನಗರದಲ್ಲಿ ಕಳೆದ ಮಾರ್ಚ್‌ನಿಂದ ಈವರೆಗೆ 3,59,488 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 3,27,390 ಜನ ಗುಣಮುಖರಾಗಿದ್ದಾರೆ.  ಪರೀಕ್ಷೆಗೆ ಒಳಪಟ್ಟವರ ಪೈಕಿ ಪಾಸಿಟಿವ್‌ ಪ್ರಕರಣಗಳ ಪ್ರಮಾಣ ಶೇಕಡ 8.17ರಷ್ಟು. ಇದುವರೆಗೆ  6,312 ಜನ ಸಾವಿಗೀಡಾಗಿದ್ದು, 25,786 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ಒಟ್ಟು 34,411 ಜನ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, 2,832 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. 3,736 ಜನ ಗುಣಮುಖರಾಗಿದ್ದಾರೆ. 54 ಜನ ಸಾವಿಗೀಡಾಗಿದ್ದಾರೆ.

**

ಪಾಸಿಟಿವ್ ಪ್ರಕರಣಗಳ ಪ್ರಮಾಣ (ಶೇಕಡಾವಾರು)

ಅಕ್ಟೋಬರ್ 19– ಶೇ 5.91
ಅಕ್ಟೋಬರ್ 20– ಶೇ 6.32
ಅಕ್ಟೋಬರ್ 21– ಶೇ 6.24
ಅಕ್ಟೋಬರ್ 22– ಶೇ 6.61
ಅಕ್ಟೋಬರ್ 23– ಶೇ 6.91
ಅಕ್ಟೋಬರ್ 24– ಶೇ 7.42
ಅಕ್ಟೋಬರ್ 25– ಶೇ 8,43
ಅಕ್ಟೋಬರ್ 26– ಶೇ 8.23

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು