ಹಿಂದೆ ಜನರ ಹಣ ಖಬರಸ್ತಾನಕ್ಕೆ ಹೋಗುತ್ತಿತ್ತು: ಯೋಗಿ ಆದಿತ್ಯನಾಥ್

ಅಯೋಧ್ಯೆ (ಉತ್ತರ ಪ್ರದೇಶ): ಹಿಂದೆ ಉತ್ತರ ಪ್ರದೇಶದಲ್ಲಿದ್ದ ಸರ್ಕಾರ ಸಾರ್ವಜನಿಕರ ಹಣವನ್ನು ‘ಖಬರಸ್ತಾನ‘ಕ್ಕೆ ವಿನಿಯೋಗಿಸುತ್ತಿತ್ತು, ಆದರೆ ಬಿಜೆಪಿ ಆಡಳಿತದಲ್ಲಿ ಆ ಹಣವನ್ನು ದೇವಸ್ಥಾನಗಳ ಪುನರ್ ಅಭಿವೃದ್ಧಿಗೆ ಬಳಸುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ದೀಪೋತ್ಸವ ಆಚರಣೆ ಅಂಗವಾಗಿ ಇಲ್ಲಿನ ರಾಮ ಕಥಾ ಪಾರ್ಕ್‌ನಲ್ಲಿ ಬುಧವಾರ ಉತ್ತರ ಪ್ರದೇಶ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
‘ಖಬರಸ್ತಾನದ ಬಗ್ಗೆ ಪ್ರೀತಿ ಇರುವವರು ಜನರ ಹಣವನ್ನು ಅದರ ಅಭಿವೃದ್ಧಿಗೆ ವೆಚ್ಚ ಮಾಡುತ್ತಾರೆ. ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಪ್ರೀತಿ ಇರುವವರು ಆ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಖರ್ಚು ಮಾಡುತ್ತಿದ್ದಾರೆ. ಇದೇ ಇಬ್ಬರ ನಡುವಿರುವ ವ್ಯತ್ಯಾಸʼ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಉತ್ತರ ಪ್ರದೇಶದ 500 ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ನವೀಕರಣಕ್ಕಾಗಿ ಕೇಂದ್ರ ಸರ್ಕಾರವು ವಿವಿಧ ಯೋಜನೆ ಗಳನ್ನು ಜಾರಿಗೊಳಿಸುತ್ತಿದೆ ಎಂದು ಅವರು ಹೇಳಿದರು.
‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳಿಗೆ ಮುಂದಿನ ವರ್ಷದ ಹೋಳಿ ಹಬ್ಬದವರೆಗೆ ಉಚಿತ ಪಡಿತರ ವಿತರಣೆಯನ್ನು ಮುಂದುವರಿಸಲಾಗುವುದು‘ ಎಂದು ಇದೇ ವೇಳೆ ಪ್ರಕಟಿಸಿದರು.
‘ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬಡವರಿಗೆ ಉಚಿತವಾಗಿ ಪಡಿತರ ನೀಡುವುದಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಅದು ಇದೇ ನವೆಂಬರ್‌ಗೆ ಮುಕ್ತಾಯಗೊಳ್ಳಲಿದೆ. ಆದರೆ, ಸಾಂಕ್ರಾಮಿಕ ರೋಗ ಇನ್ನೂ ಮುಂದುವರಿದಿರುವುದರಿಂದ, ನಮ್ಮ ಸರ್ಕಾರ ಈ ಯೋಜನೆಯನ್ನು ಮುಂದಿನ ವರ್ಷದ ಹೋಳಿವರೆಗೆ(ಮಾರ್ಚ್) ವಿಸ್ತರಿಸಲು ನಿರ್ಧರಿಸಿದೆ‘ ಎಂದು ಅವರು ಹೇಳಿದರು.
ಈ ಯೋಜನೆಯಡಿ, ಎಲ್ಲ ಫಲಾನುಭವಿಗಳಿಗೆ ಗೋಧಿ ಮತ್ತು ಅಕ್ಕಿಯೊಂದಿಗೆ ಉಪ್ಪು, ಸಕ್ಕರೆ, ಬೇಳೆ ಮತ್ತು ಎಣ್ಣೆಯನ್ನು ನೀಡಲಾಗುತ್ತಿದೆ. ‘ಯೋಜನೆಯನ್ನು ವಿಸ್ತರಿಸುವ ತಮ್ಮ ಸರ್ಕಾರದ ಈ ನಿರ್ಧಾರದಿಂದ ಉತ್ತರ ಪ್ರದೇಶ ರಾಜ್ಯದ 15 ಕೋಟಿ ಜನರಿಗೆ ಪ್ರಯೋಜನವಾಗಲಿದೆ‘ ಎಂದು ಆದಿತ್ಯನಾಥ್ ಹೇಳಿದರು.
ಇದೇ ವೇಳೆ ₹661 ಕೋಟಿ ವೆಚ್ಚದ 50ಕ್ಕೂ ಹೆಚ್ಚು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.