ಬುಧವಾರ, ನವೆಂಬರ್ 30, 2022
17 °C
19ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಮಾನ್ಯತೆ ಹೊಂದಿರುವ ಪಕ್ಷಗಳಿಗೆ ಪತ್ರ

ಮಾದರಿ ನೀತಿ ಸಂಹಿತೆ ತಿದ್ದುಪಡಿಗೆ ಚುನಾವಣಾ ಆಯೋಗ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಉಚಿತ ಕೊಡುಗೆ’ಗಳ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಈ ಸಂಬಂಧ ಇದೇ 19ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಮಾನ್ಯತೆ ಹೊಂದಿರುವ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಪತ್ರ ಬರೆದಿದೆ.

ಒಂದೊಮ್ಮೆ ಆಯೋಗವು ಉದ್ದೇಶಿತ ತಿದ್ದುಪಡಿಯನ್ನು ಕೈಗೊಂಡರೆ, ರಾಜಕೀಯ ಪಕ್ಷಗಳು ಚುನಾವಣೆ ವೇಳೆ ತಾವು ನೀಡುವ ಭರವಸೆಗಳನ್ನು ಈಡೇರಿಸಲು ಬೇಕಿರುವ ಹಣಕಾಸಿನ ಕಾರ್ಯಸಾಧ್ಯತೆ ಕುರಿತ ಅಧಿಕೃತ ಮಾಹಿತಿಯನ್ನು ಮತದಾರರಿಗೆ ಒದಗಿಸಬೇಕಾಗುತ್ತದೆ.

‘ಮಾದರಿ ನೀತಿ ಸಂಹಿತೆಯ ಅಧ್ಯಾಯ 8ರಲ್ಲಿ (ಚುನಾವಣಾ ಪ್ರಣಾಳಿಕೆಯ ಮಾರ್ಗಸೂಚಿ) ಪ್ರಮಾಣಿತ ನಮೂನೆಯೊಂದನ್ನು ಸೇರ್ಪಡೆ ಮಾಡುವ ಸಲುವಾಗಿ ತಿದ್ದುಪಡಿಯ ಪ್ರಸ್ತಾವನೆ ಮುಂದಿಡಲಾಗಿದೆ. ರಾಜಕೀಯ ಪಕ್ಷಗಳ ಆದಾಯ ಕ್ರೋಡೀಕರಣದ ಮಾರ್ಗಗಳು, ಯೋಜಿತ ವೆಚ್ಚ, ಬದ್ಧ ಹೊಣೆಗಾರಿಕೆಯ ಪರಿಣಾಮಗಳು ಹಾಗೂ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ ಕಾಯ್ದೆಯ (ಎಫ್‌ಆರ್‌ಬಿಎಂ) ಮಿತಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತ ಸಮಗ್ರ ಮಾಹಿತಿಯನ್ನು ಪ್ರಮಾಣಿತ ನಮೂನೆ ಒಳಗೊಂಡಿರುತ್ತದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಚುನಾವಣೆ ವೇಳೆ ರಾಜಕೀಯ ಪಕ್ಷಗಳು ನೀಡುವ ಭರವಸೆಗಳು ಈಡೇರಿಸಬಹುದೊ ಅಥವಾ ಇಲ್ಲವೊ ಎಂಬುದನ್ನು ಅರಿತು ‌‌ಅದರ ಆಧಾರದಲ್ಲಿ ತಾವು ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ಪ್ರಮಾಣಿತ ನಮೂನೆಯು ಮತದಾರರಿಗೆ ನೆರವಾಗಲಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬಹುತೇಕ ಪಕ್ಷಗಳು ಚುನಾವಣೆ ಪ್ರಣಾಳಿಕೆಗಳ ಕುರಿತ ಮಾಹಿತಿಯನ್ನು ನಿಗದಿತ ಸಮಯದೊಳಗೆ ಸಲ್ಲಿಸುತ್ತಿಲ್ಲ ಎಂದು ಆಯೋಗ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿತ್ತು. 

ಪಕ್ಷಗಳು ಅ.19ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ವಿಫಲವಾದರೆ, ತಿದ್ದುಪಡಿ ಮಾಡುವುದಕ್ಕೆ ಆ ಪಕ್ಷಗಳ ವಿರೋಧವಿಲ್ಲ ಎಂದೇ ಭಾವಿಸಲಾಗುತ್ತದೆ ಎಂದೂ ಆಯೋಗ ಹೇಳಿದೆ.

‘ಚುನಾವಣೆ ವೇಳೆ ಪಕ್ಷಗಳು ನೀಡುವ ಕೆಲ ಭರವಸೆ ಹಾಗೂ ಕೊಡುಗೆಗಳ ಅನಪೇಕ್ಷಿತ ಪರಿಣಾಮದ ವಿಚಾರದಲ್ಲಿ ಆಯೋಗವು ಮೂಕ ಪ್ರೇಕ್ಷಕನಂತೆ ವರ್ತಿಸಿದರೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ನೇತೃತ್ವದಲ್ಲಿ ಇತ್ತೀಚೆಗೆ ನಡೆದಿದ್ದ ಸಭೆಯಲ್ಲಿ ವ್ಯಕ್ತವಾಗಿತ್ತು’ ಎಂದು ಮೂಲಗಳು ತಿಳಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು