ಗುರುವಾರ , ಡಿಸೆಂಬರ್ 3, 2020
23 °C

ಪಕ್ಷಗಳಿಗೆ ಬಾಂಡ್‌ ಮೂಲಕ ₹282 ಕೋಟಿ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸುಮಾರು ₹282.29 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡಿವೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ದೆಹಲಿ ಶಾಖೆಯಿಂದ ಖರೀದಿಸಲಾದ ₹1,000 ಮೌಲ್ಯದ ಬಾಂಡ್‌ ಅನ್ನು ಮಾತ್ರ ನಗದೀಕರಿಸಲಾಗಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಗೆ ಎಸ್‌ಬಿಐ ಉತ್ತರಿಸಿದೆ. 

ಚುನಾವಣಾ ಬಾಂಡ್‌ ಮಾರಾಟಕ್ಕೆ ಅಕ್ಟೋಬರ್‌ 18ರಿಂದ 28ರವರೆಗೆ ಅವಕಾಶ ನೀಡಲಾಗಿತ್ತು. ಮೂರು ಹಂತಗಳ ಬಿಹಾರ ಚುನಾವಣೆಯು ಅ. 28ರಿಂದ ಆರಂಭ ಆಗಿತ್ತು. 

ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ಎಸ್‌ಬಿಐಗೆ ಮಾತ್ರ ಅವಕಾಶ ಇದೆ. ಈ ಬಾರಿ ಎಸ್‌ಬಿಐನ ಒಂಬತ್ತು ಶಾಖೆಗಳು ₹282.29 ಕೋಟಿ ಮೌಲ್ಯದ ಬಾಂಡ್‌ಗಳನ್ನು ಮಾರಾಟ ಮಾಡಿವೆ. ಮುಂಬೈ ಶಾಖೆಯು ಅತಿ ಹೆಚ್ಚು (₹130 ಕೋಟಿ) ಮೌಲ್ಯದ ಬಾಂಡ್‌ಗಳನ್ನು ಮಾರಾಟ ಮಾಡಿದೆ. ಚೆನ್ನೈ (₹60 ಕೋಟಿ), ಕೋಲ್ಕತ್ತ (₹36 ಕೋಟಿ), ಹೈದರಾಬಾದ್‌ (₹20 ಕೋಟಿ) ಮತ್ತು ಭುವನೇಶ್ವರ (₹17 ಕೋಟಿ) ಶಾಖೆಗಳು ನಂತರದ ಸ್ಥಾನಗಳಲ್ಲಿವೆ. 

ದೆಹಲಿಯ ಶಾಖೆಯು ಸುಮಾರು ₹11.99 ಕೋಟಿ ಮೌಲ್ಯದ ಬಾಂಡ್‌ಗಳ ಮಾರಾಟ ಮಾಡಿದೆ. ಇಲ್ಲಿ ಮಾರಾಟ ಆದ ₹1,000 ಮೌಲ್ಯದ ಬಾಂಡ್‌ ಅನ್ನು ಮಾತ್ರ ನಗದೀಕರಿಸಲಾಗಿಲ್ಲ. ಈ ಬಾಂಡ್‌ ಅನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ.

ನಗದೀಕರಣ ವಿಚಾರದಲ್ಲಿ ಹೈದರಾಬಾದ್‌ ಶಾಖೆಯು ಮೊದಲ ಸ್ಥಾನದಲ್ಲಿದೆ. ಇಲ್ಲಿ ₹90 ಕೋಟಿ ಮೌಲ್ಯದ ಬಾಂಡ್‌ಗಳು ನಗದಾಗಿವೆ. ಚೆನ್ನೈ (₹80 ಕೋಟಿ) ಮತ್ತು ಭುವನೇಶ್ವರ (₹67 ಕೋಟಿ) ಶಾಖೆಗಳು ನಂತರದ ಸ್ಥಾನಗಳಲ್ಲಿವೆ. 

ಅರುಣ್‌ ಜೇಟ್ಲಿ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 2018ರಲ್ಲಿ ಚುನಾವಣಾ ಬಾಂಡ್‌ ನೀಡಿಕೆ ವ್ಯವಸ್ಥೆ ಜಾರಿಗೆ ಬಂದಿತ್ತು. ಇದಕ್ಕೆ ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಇದು ಪಾರದರ್ಶಕತೆ ಇಲ್ಲದ ವ್ಯವಸ್ಥೆ ಆಗಿದ್ದು, ಬಿಜೆಪಿಗೆ ಅನುಕೂಲಕರವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ದೇಣಿಗೆ ನೀಡುವವರು ಯಾವ ಪಕ್ಷಕ್ಕೆ ನೀಡುತ್ತಿದ್ದೇವೆ ಎಂಬುದನ್ನು ಬಹಿರಂಗಪಡಿಸುವ ಅಗತ್ಯ ಇಲ್ಲ. ಹಾಗಾಗಿ, ಇದರಿಂದ ಬಿಜೆಪಿಗೆ ‌ಲಾಭ ಎಂದು ವಿರೋಧ ಪಕ್ಷಗಳು ಹೇಳಿದ್ದವು. 

2018–19ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ₹1,450 ಕೋಟಿ ದೇಣಿಗೆ ದೊರೆತಿದೆ. ಕಾಂಗ್ರೆಸ್ ಪಕ್ಷಕ್ಕೆ ₹383 ಕೋಟಿ ಸಿಕ್ಕಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು