ಬುಧವಾರ, ಆಗಸ್ಟ್ 10, 2022
24 °C
ಬಿಜೆಪಿಯ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಕೃಷಿ ಕಾಯ್ದೆ, ಸಿಎಎ ಕುರಿತು ಅಪಪ್ರಚಾರ ಮಾಡಿ ರಾಜಕೀಯ ಅಸ್ಥಿರತೆಗೆ ಪಿತೂರಿ: ಮೋದಿ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ನೂತನ ಕೃಷಿ ಕಾಯ್ದೆಗಳು, ಸಿಎಎ ಕುರಿತು ಅಪಪ್ರಚಾರ ಮಾಡುವ ಮೂಲಕ ದೇಶದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸುವ ಪಿತೂರಿ ನಡೆಯುತ್ತಿದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದರು.

ಬಿಜೆಪಿಯ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಆನ್‌ಲೈನ್ ಮೂಲಕ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಕೈಗೊಂಡ ನಿರ್ಧಾರಗಳ ವಿರುದ್ಧ ಕೆಲವು ವ್ಯಕ್ತಿಗಳು, ಸಂಘಟನೆಗಳಿಂದ ಅಪ‍ಪ್ರಚಾರ ನಡೆಯುತ್ತಿದೆ’ ಎಂದು ಟೀಕಿಸಿದರು.

‘ನೂತನ ಕೃಷಿ ಕಾಯ್ದೆಗಳ ಜಾರಿ ಮೂಲಕ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ, ಸಿಎಎ ಜಾರಿಯಾದರೆ ಕೆಲವು ಜನರ ಪೌರತ್ವ ರದ್ದಾಗುತ್ತದೆ, ಮೀಸಲಾತಿಯನ್ನೇ ತೆಗೆದು ಹಾಕಲಾಗುತ್ತದೆ ಅಥವಾ ಸಂವಿಧಾನವನ್ನು ಬದಲಾವಣೆ ಮಾಡಲಾಗುತ್ತದೆ ಎಂಬಂಥ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಉದ್ದೇಶಪೂರ್ವಕವಾಗಿ ಇಂಥ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಇದು ನಮ್ಮ ಮುಂದಿರುವ ಗಂಭೀರವಾದ ಸವಾಲು. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಎಚ್ಚರದಿಂದಿರಬೇಕು. ಇಂಥ ಸುಳ್ಳುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದರು.

‘ಚುನಾವಣೆಗಳಲ್ಲಿ ಬಿಜೆಪಿ ಸತತ ಗೆಲುವು ಸಾಧಿಸುತ್ತಿರುವುದನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಅವರು ಗೆದ್ದಾಗ ನಾವು ಅವರನ್ನು ಅಭಿನಂದಿಸಿದ್ದೇವೆ. ಹೀಗಾಗಿ ಇದು ವಿಪಕ್ಷಗಳಲ್ಲಿನ ದ್ವಂದ್ವ ನಿಲುವನ್ನು ತೋರಿಸುತ್ತದೆ’ ಎಂದು ಮೋದಿ ಹೇಳಿದರು.

‘ಭಾರತದ ಮತದಾರರು ಪ್ರಬುದ್ಧರಾಗಿದ್ದಾರೆ ಎಂಬುದನ್ನು ವಿರೋಧ ಪಕ್ಷಗಳು ಅರ್ಥ ಮಾಡಿಕೊಳ್ಳುತ್ತಿಲ್ಲ. ಜನರ ಆಶೋತ್ತರಗಳು, ನಿರೀಕ್ಷೆಗಳು, ಅವರ ಕನಸುಗಳನ್ನು ಸಹ ಈ ಜನರು ಅರ್ಥ ಮಾಡಿಕೊಂಡಿಲ್ಲ’ ಎಂದು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು