ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧಿಗಳ ಧ್ವನಿ ಅಡಗಿಸುವ ಯತ್ನ: ಬಿಜೆಪಿ ವಿರುದ್ಧ ಆಕ್ರೋಶ

Last Updated 21 ಸೆಪ್ಟೆಂಬರ್ 2020, 20:24 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭೆಯ ಎಂಟು ಸದಸ್ಯರ ಅಮಾನತುಗೊಳಿಸಿದ ನಿರ್ಧಾರವು ಪ್ರತಿಪಕ್ಷಗಳ ಧ್ವನಿ ಅಡಗಿಸುವ ಷಡ್ಯಂತ್ರ ಎಂದು ವಿರೋಧ ಪಕ್ಷಗಳು, ಸರ್ಕಾರ ಮತ್ತು ಬಿಜೆಪಿ ವಿರುದ್ಧ ಮುಗಿಬಿದ್ದಿವೆ.

‘ಸಂಸದರ ಅಮಾನತು ನಿರ್ಧಾರವು ಪ್ರಜಾಪ್ರಭುತ್ವ ವ್ಯವಸ್ಥೆಯ ಹತ್ಯೆ ಮತ್ತು ಸರ್ವಾಧಿಕಾರದ ಪ್ರತೀಕ’ ಎಂದು ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹರಿಹಾಯ್ದಿವೆ.

‘ಬಿಜೆಪಿ ಈ ದೇಶದ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿದೆ. ನಾವೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಸರ್ವಾಧಿಕಾರಕ್ಕೆ ಒಳಪಡುವ ಮೊದಲು ಜನರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಾಗಿದೆ’ ಎಂದುಪಶ್ಚಿಮ ಬಂಗಾಳದ ಮುಖ್ಯಮಂತ್ರಿಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ.

‘ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರು ಪ್ರಧಾನಿ ಕಚೇರಿಯ ನಿರ್ದೇಶನದಂತೆ ಎಂಟು ಸಂಸದರನ್ನು ಅಮಾನತು ಮಾಡಿದ್ದಾರೆ’ ಎಂದು ಲೋಕಸಭೆಯಲ್ಲಿಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಆರೋಪಿಸಿದ್ದಾರೆ.

‘ರಾಜ್ಯಸಭೆಯಲ್ಲಿ ಗೂಂಡಾವರ್ತನೆ ತೋರಿದ ವಿರೋಧ ಪಕ್ಷಗಳ ಸಂಸದರು, ಪ್ರಜಾಪ್ರಭುತ್ವದಲ್ಲಿ ತಮಗೆ ನಂಬಿಕೆ ಇಲ್ಲ ಎಂದು ಸಾಬೀತುಪಡಿಸಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದ್ದಾರೆ.

ಮಸೂದೆಗೆ ಅಂಕಿತ ಹಾಕದೆ ಅದನ್ನು ವಾಪಸ್‌ ಕಳುಹಿಸುವಂತೆ ವಿರೋಧಪಕ್ಷಗಳು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಮನವಿ ಸಲ್ಲಿಸಿವೆ.

ದಾರಿ ತಪ್ಪಿಸುವ ಕೆಲಸ: ಮೋದಿ
ಸಂಸತ್‌ ಅನುಮೋದನೆ ಪಡೆದ ಕೃಷಿ ಮಸೂದೆಗಳು 21ನೇ ಶತಮಾನದ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.

ತರು ತಮ್ಮ ಇಷ್ಟದಂತೆ, ಇಷ್ಟ ಬಂದ ಬೆಲೆಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೃಷಿ ಮಸೂದೆಗಳು ಸ್ವಾತಂತ್ರ್ಯ ನೀಡಲಿವೆ ಎಂದು ಪ್ರಧಾನಿ ರೈತ ಸಮೂಹಕ್ಕೆ ಅಭಯ ನೀಡಿದರು.

‘ಸರ್ಕಾರ ಕೃಷಿ ಕ್ಷೇತ್ರದಲ್ಲಿ ಜಾರಿಗೆ ತಂದ ಕ್ರಾಂತಿಕಾರಿ ಬದಲಾವಣೆಗಳಿಂದ ಈ ಕ್ಷೇತ್ರದ ಮೇಲೆ ಕೆಲವರ ಹಿಡಿತ ತಪ್ಪುತ್ತಿದೆ. ಅಂಥವರು ರೈತರ ದಾರಿ ತಪ್ಪಿಸುವ ಹುನ್ನಾರ ನಡೆಸಿದ್ದಾರೆ’ ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆಗೆ ನಿರ್ಧಾರ
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆಗಳನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಚಳವಳಿ ಹಾಗೂ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. 2 ಕೋಟಿ ರೈತರ ಸಹಿ ಸಂಗ್ರಹಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಸಲ್ಲಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT