ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ಪ್ರತಾಪ್‌ ಸಿಂಗ್‌ ವಾಗ್ದಾಳಿ

‘ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ’
Last Updated 5 ಫೆಬ್ರುವರಿ 2021, 10:50 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಜಾಭುತ್ವ ವಿರೋಧಿ ನೆಲೆಯಲ್ಲಿ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿದ್ದು, ಅವುಗಳನ್ನು ಕೂಡಲೇ ರದ್ದುಗೊಳಿಸಬೇಕು‘ ಎಂದು ಕಾಂಗ್ರೆಸ್ ನಾಯಕ ಪ್ರತಾಪ್‌ ಸಿಂಗ್‌ ಬಜ್ವಾ ಕೇಂದ್ರವನ್ನು ಒತ್ತಾಯಿಸಿದರು.

‘ಕೋವಿಡ್‌ 19 ಸಾಂಕ್ರಾಮಿಕ ತೀವ್ರವಾಗಿರುವ ವೇಳೆಯಲ್ಲಿ, ವಲಸೆ ಕಾರ್ಮಿಕರು ಅಗ್ನಿ ಪರೀಕ್ಷೆ ಎದುರಿಸುತ್ತಿರುವ ಸಮಯದಲ್ಲಿ ಯಾವುದೇ ಚರ್ಚೆ ಇಲ್ಲದೇ ಪ್ರಜಾಪ್ರಭುತ್ವದ ವಿರೋಧಿ ನೆಲೆಯಲ್ಲಿ ಏಕಾಏಕಿ ಕೃಷಿ ಕಾಯ್ದೆಗಳನ್ನು ಜಾರಿಗಳಿಸಿದ್ದೀರಿ‘ ಎಂದು ದೂರಿದರು.

ರಾಜ್ಯಸಭೆಯಲ್ಲಿ ಶುಕ್ರವಾರ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದಲ್ಲಿ ಗಾಜಿಪುರದಲ್ಲಿ ರೈತರ ಪ್ರತಿಭಟನಾ ಸ್ಥಳದಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು, ಜರ್ಮನಿಯ ಬರ್ಲಿನ್ ಗೋಡೆ, ಕಾನ್ಸಂಟ್ರೇಶನ್ ಕ್ಯಾಂಪ್‌ಗಳಿಗೆ ಹೋಲಿಸಿದರು. ‘ಜರ್ಮನಿಯಲ್ಲಿರುವ ಬರ್ಲಿನ್ ಗೋಡೆಯಂತೆ, ದೆಹಲಿ ಗಡಿಭಾಗದಲ್ಲಿನ ರೈತರ ಹೋರಾಟದ ತಾಣದ ಸುತ್ತಾ ನೀವು ಮುಳ್ಳುತಂತಿಗಳನ್ನು ನಿರ್ಮಿಸುತ್ತಿದ್ದೀರಿ. ದೆಹಲಿ ಗಡಿಗಳಿಗೆ ಕಾನ್ಸಂಟ್ರೇಶನ್ ಕ್ಯಾಂಪ್‌ಗಳ ಆಕಾರ ನೀಡುತ್ತಿದ್ದೀರಿ‘ ಎಂದು ಕೇಂದ್ರವನ್ನು ಕಟುವಾಗಿ ಟೀಕಿಸಿದರು.

ತಮ್ಮ ಭಾಷಣದ ಉದ್ದಕ್ಕೂ, ರೈತರನ್ನು ಖಾಲಿಸ್ತಾನಿಗಳು, ದೇಶದ್ರೋಹಿಗಳಾಗಿ ಬ್ರ್ಯಾಂಡ್ ಮಾಡಿದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ‘ದೆಹಲಿಯ ಗಡಿಯಲ್ಲಿರುವ ರೈತ ಆಂದೋಲನ ತಾಣಗಳನ್ನು ಅಫ್ಘಾನಿಸ್ತಾನ, ಲಿಬಿಯಾ, ಇರಾಕ್ ಮತ್ತು ಉಗಾಂಡಾದ ದೃಶ್ಯಗಳಿಗೆ ಹೋಲಿಸುವಾಗ ರೈತರು ನಿಮ್ಮನ್ನು ಹೇಗೆ ನಂಬುತ್ತಾರೆ‘ ಎಂದು ಪ್ರತಾಪ್ ಸಿಂಗ್ ಪ್ರಶ್ನಿಸಿದರು.

ಜನವರಿ 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಕುರಿತು ಎರಡು ತಿಂಗಳೊಳಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದ ಸಮಿತಿಯನ್ನು ರಚಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.

ಇದೇ ವೇಳೆ ಗಾಜಿಪುರದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲು ಹೊರಟಿದ್ದ ವಿರೋಧ ಪಕ್ಷದ ಸಂಸದರನ್ನು ತಡೆದು ನಿಲ್ಲಿಸಿದ ಬಗ್ಗೆ ಪ್ರಸ್ತಾಪಿಸಿದ ಪ್ರತಾಪ್ ಸಿಂಗ್, ‘ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದೆ. ಹನ್ನೆರಡು ಪಕ್ಷಗಳ ನಾಯಕರಿಗೆ ಗಾಜಿಪುರದ ರೈತರನ್ನು ಭೇಟಿಯಾಗಲು ಪೊಲೀಸರು ಅವಕಾಶ ನೀಡಿಲ್ಲ. ಇದೇನಾ ಪ್ರಜಾಪ್ರಭುತ್ವ’ ಎಂದು ಖಾರವಾಗಿ ಪ್ರಶ್ನಿಸಿದರು.

ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಗಡಿಭಾಗಗಳಲ್ಲಿ ನೀರು, ವಿದ್ಯುತ್, ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದನ್ನು ಟೀಕಿಸಿದ ಅವರು, ‘1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದದ ಯುದ್ಧದಲ್ಲಿ ಬಂಧಿಸಲಾದ ಪಾಕಿಸ್ತಾನ ಯುದ್ಧ ಕೈದಿಗಳನ್ನು ನಡೆಸಿಕೊಂಡಂತೆ, ರೈತ ಸಮುದಾಯವನ್ನು ನಡೆಸಿಕೊಂಡಿದ್ದೀರಿ‘ ಎಂದು ಆರೋಪಿಸಿದರು.

‘ನೀವು ರೈತರನ್ನು ಖಾಲಿಸ್ತಾನಿಗಳು, ದೇಶ ವಿರೋಧಿಗಳು ಎಂದು ಬ್ರ್ಯಾಂಡ್‌ ಮಾಡುತ್ತೀರಿ. ನೀವು ನಮಗೆ ದೇಶಪ್ರೇಮದ ಪಾಠ ಹೇಳುವ ಅಗತ್ಯವಿಲ್ಲ‘ ಎಂದ ಅವರು, ಗುರು ತೇಜ್‌ ಬಹದ್ದೂರ್, ಕಾಶ್ಮೀರಿ ಬ್ರಾಹ್ಮಣರಿಗಾಗಿ ತನ್ನ ಜೀವ ತ್ಯಾಗ ಮಾಡಿದರು. ನನ್ನ ಸಹೋದರ, ಟೈಗರ್ ಹಿಲ್ ವಿಜಯೋತ್ಸವದ ಸೇನೆಯನ್ನು ಮುನ್ನಡೆಸಿದ ಯೋಧ...‘ ಎಂದು ಭಾವೋದ್ವೇಗದಿಂದ ಮಾತನಾಡಿದರು.

ಬ್ರಿಟಿಷರ ಕಾಲದಲ್ಲಿ ಗಾಂಧಿ ಮತ್ತು ಪಟೇಲ್‌ ನೇತೃತ್ವದಲ್ಲಿ ರೈತರು ಆರು ತಿಂಗಳ ಕಾಲ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಹೋರಾಟ ನಡೆಸಿದ್ದರು. ಈಗ ಪ್ರಧಾನಿ ಮೋದಿ ಅವರು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ಅಂದಿನ ಭವ್ಯತೆಯನ್ನು ಪ್ರದರ್ಶಿಸುವ ಸಮಯ ಬಂದಿದೆ ಎಂದು ಪ್ರತಾಪ್ ಪ್ರತಿಪಾದಿಸಿದರು.

‘ನೀವು ಒಂದೇ ಒಂದು ದೂರವಾಣಿ ಕರೆಯಷ್ಟು ದೂರದಲ್ಲಿದ್ದೇವೆ.. ಬನ್ನಿ ಮಾತಾಡಿ ಎಂದು ರೈತರಿಗೆ ಹೇಳುತ್ತೀರಿ. ಹಾಗಾದರೆ, ನಿಮ್ಮ ಸಂಖ್ಯೆ ಯಾವುದು ಹೇಳಿ‘ ಎಂದು ಈ ಹಿಂದೆ ಪ್ರಧಾನಿಯವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಬಜ್ವಾ ಪ್ರಶ್ನಿಸಿದರು. ಮೊದಲು ಈ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ. ಆ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿ. ನಂತರ ಸುಧೀರ್ಘ ಸಮಾಲೋಚನೆಗಳನ್ನು ನಡೆಸಿ ಹೊಸ ಕಾನೂನುಗಳನ್ನು ರೂಪಿಸಿ ಎಂದು ಪ್ರಧಾನಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT