ಗುರುವಾರ , ಜನವರಿ 28, 2021
27 °C
ಅಂಬಾಲಾದ ಸೇತುವೆ ಮೇಲೆ ಪೊಲೀಸರ ಜತೆ ಎರಡೂವರೆ ಗಂಟೆ ಸಂಘರ್ಷ

ಹರಿಯಾಣಕ್ಕೆ ನುಗ್ಗಿದ ರೈತ ಮೆರವಣಿಗೆ

ಅಂಬಾಲಾದಲ್ಲಿ ಹರಿಯಾಣ ಪೊಲೀಸರು ಹೆದ್ದಾರಿಗೆ ರೋಡ್‌ ರೋಲರ್ ಮತ್ತು ಬ್ಯಾರಿಕೇಡ್‌ಗಳನ್ನು ನಿಲ್ಲಿಸಿದ್ದಾರೆ Updated:

ಅಕ್ಷರ ಗಾತ್ರ : | |

ಚಂಡೀಗಡ/ನವದೆಹಲಿ (ಪಿಟಿಐ): ಪಂಜಾಬ್ ರೈತರು ಆರಂಭಿಸಿರುವ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಗುರುವಾರ ಹರಿಯಾಣ ಪ್ರವೇಶಿಸಿದೆ. ಪಂಜಾಬ್‌ನ ರೈತರು ಹರಿಯಾಣ ಪ್ರವೇಶಿಸದಂತೆ, ಹರಿಯಾಣ ಪೊಲೀಸರು ಹೆದ್ದಾರಿಗಳಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೊಗೆದು ರೈತರು ಮೆರವಣಿಗೆ ಮುಂದುವರಿಸಿದ್ದಾರೆ. ಪೊಲೀಸರು ರೈತರ ಮೇಲೆ ಅಶ್ರುವಾಯು ಷೆಲ್ ಸಿಡಿಸಿದ್ದಾರೆ, ಜಲಫಿರಂಗಿ ಬಳಸಿದ್ದಾರೆ ಮತ್ತು ಲಾಠಿ ಪ್ರಹಾರ ನಡೆಸಿದ್ದಾರೆ. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಪಂಜಾಬ್‌ನ ಗಡಿಗೆ ಹೊಂದಿಕೊಂಡಿರುವ ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ರೈತರು ಮತ್ತು ಹರಿಯಾಣ ಪೊಲೀಸರ ನಡುವೆ ಭಾರಿ ಸಂಘರ್ಷ ನಡೆದಿದೆ. ಅಂಬಾಲಾವನ್ನು ಪ್ರವೇಶಿಸುವ ಹೆದ್ದಾರಿಯಲ್ಲಿನ ಸಣ್ಣ ಸೇತುವೆ ಮೇಲೆ ಪೊಲೀಸರು ಹತ್ತಾರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಸೇತುವೆಯ ಹೊರಭಾಗದಲ್ಲಿ ಮಣ್ಣು ತುಂಬಿದ್ದ ಹತ್ತಾರು ಟ್ರಕ್‌ಗಳನ್ನು ನಿಲ್ಲಿಸಲಾಗಿತ್ತು.

ರೈತರ ಮೆರವಣಿಗೆ ಸೇತುವೆ ಬಳಿ ಬಂದಾಗ, ಮೆರವಣಿಗೆ ಮುಂದುವರಿಸದಂತೆ ಪೊಲೀಸರು ಎಚ್ಚರಿಕೆ ನೀಡಿದರು. ರೈತರು ಮೆರವಣಿಗೆ ಮುಂದುವರಿಸಿದರು. ಆಗ ಪೊಲೀಸರು ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿದರು. ಅಶ್ರುವಾಯು ಷೆಲ್ ಪ್ರಯೋಗಿಸಿದರು. ಆಗ ರೈತರು ಚದುರಿದರು. ಆದರೆ ಅಷ್ಟರಲ್ಲೇ ಇನ್ನಷ್ಟು ರೈತರು ಸೇತುವೆಯನ್ನು ತಲುಪಿದರು. ರೈತರ ಸಂಖ್ಯೆ ಹೆಚ್ಚಿದಂತೆ, ಮತ್ತೆ ಮೆರವಣಿಗೆ ಮುಂದುವರಿಯಿತು.

ಸೇತುವೆ ಮೇಲೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ರೈತರು ನದಿಗೆ ಎಸೆದರು. ಸೇತುವೆಯ ಬಳಿ ನಿಲ್ಲಿಸಿದ್ದ ಟಿಪ್ಪರ್‌ಗಳನ್ನು ತಳ್ಳಿ, ಉರುಳಿಸಿ ದಾರಿ ಮಾಡಿಕೊಂಡರು. ಎರಡೂವರೆ ಗಂಟೆಯ ಸಂಘರ್ಷದ ನಂತರ ರೈತರು ಸೇತುವೆಯನ್ನು ದಾಟಲು ಸಾಧ್ಯವಾಯಿತು. ನಂತರ ರೈತರ ಮೆರವಣಿಗೆ ಹರಿಯಾಣವನ್ನು ಪ್ರವೇಶಿಸಿತು. ನಂತರ ದೆಹಲಿಯತ್ತ ಮುಂದುವರಿಯಿತು.


ಅಂಬಾಲಾ ಬಳಿ ಹರಿಯಾಣ ಪ್ರವೇಶಿಸಲು ಯತ್ನಿಸಿದ ರೈತರ ಮೇಲೆ ಪೊಲೀಸರು ಆಶ್ರುವಾಯು ಷೆಲ್ ಸಿಡಿಸಿದರು

ರೈತರನ್ನು ತಡೆಯಲು ಬಿಎಸ್‌ಎಫ್ ಯೋಧರು
ರೈತರ ಪ್ರತಿಭಟನಾ ಮೆರವಣಿಗೆಯು ದೆಹಲಿ ಪ್ರವೇಶಿಸುವುದನ್ನು ತಡೆಯಲು ಕೇಂದ್ರ ಗೃಹ ಸಚಿವಾಲಯವು ದೆಹಲಿ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಮತ್ತು ಪೊಲೀಸರನ್ನು ನಿಯೋಜಿಸಿದೆ. ರೈತರನ್ನು ತಡೆಯಲು ಬಿಎಸ್‌ಎಫ್ ಯೋಧರನ್ನು ನಿಯೋಜನೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

‘ರೈತ ಎದ್ದು ನಿಂತಿದ್ದಾನೆ’
ಇನ್ನೂ ಬೆಳಕು ಹರಿದಿಲ್ಲ, ಪೂರ್ವದಲ್ಲಿ ಸೂರ್ಯ ಮೂಡಿಲ್ಲ, ಹಕ್ಕಿಗಳು ಇನ್ನೂ ಎದ್ದಿಲ್ಲ, ರೈತ ಹಾಸಿಗೆಬಿಟ್ಟು ಎದ್ದುನಿಂತಿದ್ದಾನೆ. ಕರಾಳ ಕಾನೂನಿನ ಮೋಡಗಳು ಗುಡುಗುತ್ತಿವೆ, ಅನ್ಯಾಯದ ಮಿಂಚು ಮಿಂಚುತ್ತಿದೆ, ಮುಸಲಧಾರೆಯಂತೆ ಮಳೆ ಬೀಳುತ್ತಿದೆ, ಮೋದಿ ಸರ್ಕಾರದ ಕ್ರೌರ್ಯದ ವಿರುದ್ಧ ದೇಶದ ರೈತರೆಲ್ಲರೂ ಒಂದಾಗಿ ನಿಂತಿದ್ದಾರೆ.
-ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ

***

ಬ್ರಿಟಿಷ್ ಸರ್ಕಾರವು ಭಾರತೀಯರನ್ನು ನಡೆಸಿಕೊಂಡ ರೀತಿಯಲ್ಲಿಯೇ, ಬಿಜೆಪಿ ಸರ್ಕಾರವು ರೈತರನ್ನು ನಡೆಸಿಕೊಳ್ಳುತ್ತಿದೆ. ಬ್ರಿಟಿಷರ ತಂತ್ರಗಳನ್ನೇ ಬಿಜೆಪಿ ಸರ್ಕಾರ ಬಳಸುತ್ತಿದೆ.
-ಯೋಗೇಂದ್ರ ಯಾದವ್, ಸ್ವರಾಜ್ ಇಂಡಿಯಾ ಸ್ಥಾಪಕ


ಅಂಬಾಲಾದ ಸೇತುವೆ ಮೇಲೆ ಪ್ರತಿಭಟನೆನಿರತ ರೈತರು –ಪಿಟಿಐ ಚಿತ್ರ

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಮಾತುಕತೆಗೆ ಬರುತ್ತಿಲ್ಲ. ಬದಲಿಗೆ ಕೇಂದ್ರ ಸರ್ಕಾರದ ವಿರುದ್ಧ ರೈತರನ್ನು ಎತ್ತಿಕಟ್ಟಿ, ಸಮಸ್ಯೆ ಸೃಷ್ಟಿಸುತ್ತಿದ್ದಾರೆ.
-ಮನೋಹರ ಲಾಲ್ ಖಟ್ಟರ್ , ಹರಿಯಾಣ ಮುಖ್ಯಮಂತ್ರಿ

***

ಅನ್ನದಾತ ರೈತರ ಮೇಲೆ ಬಿಜೆಪಿ ಸರ್ಕಾರ ಬಲಪ್ರಯೋಗ ನಡೆಸಿದೆ. ಸಂವಿಧಾನದ ದಿನವೇ ರೈತರ ಹಕ್ಕುಗಳನ್ನು ಹತ್ತಿಕ್ಕಲಾಗಿದೆ. ಇದು ಕರಾಳ ದಿನವಾಗಿದೆ.
-ಹರ್‌ಶಿಮ್ರತ್‌ ಕೌರ್ ಬಾದಲ್, ಶಿರೋಮಣಿ ಅಕಾಲಿ ದಳ ನಾಯಕಿ

***

ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ಈ ಹಕ್ಕನ್ನು ನಿರಾಕರಿಸಲಾಗುತ್ತಿದೆ. ರೈತರ ಮೇಲೆ ಇಂತಹ ತಂಡಿಯ ವಾತಾವರಣದಲ್ಲಿ ಜಲಫಿರಂಗಿ ಬಳಸಿದ್ದು ಕ್ರೂರ.
-ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು