ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಡಿಗಳಲ್ಲಿ ಭಾವನೆಗಳ ಓಕುಳಿ

ಹೊರಡುವ ಮುನ್ನ ನೃತ್ಯ, ಸಂಭ್ರಮ; ಪರಸ್ಪರ ಅಪ್ಪಿಕೊಂಡು ವಿದಾಯ
Last Updated 11 ಡಿಸೆಂಬರ್ 2021, 21:07 IST
ಅಕ್ಷರ ಗಾತ್ರ

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ರೈತರ ಬೇಡಿಕೆ ಈಡೇರಿದೆ.ವರ್ಷದ ಬಳಿಕ ತಮ್ಮ ಊರುಗಳಿಗೆ ಹಿಂತಿರುಗುವ ರೈತರಲ್ಲಿ ಗೆಲುವಿನ ಸಂಭ್ರಮ ಮನೆ ಮಾಡಿತ್ತು. ತಮ್ಮ ಕುಟುಂಬದವರ ಭೇಟಿಗೆ ಸಡಗರದಿಂದ ಸಜ್ಜಾಗುತ್ತಿದ್ದ ಚಿತ್ರಣ ಸಿಂಘು, ಟಿಕ್ರಿ ಹಾಗೂ ಗಾಜಿಪುರ ಗಡಿಗಳಲ್ಲಿ ಶನಿವಾರ ಬೆಳಿಗ್ಗೆ ಕಂಡುಬಂದಿತು. ಇದು ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿಸಿತ್ತು.

ಹೊರಡುವುದಕ್ಕೂ ಮುನ್ನ ಕೆಲವು ರೈತರು ಸಿಂಘು ಗಡಿಯಲ್ಲಿ ಹೋಮಹವನ ನಡೆಸಿದರು. ಕೆಲವರು ಕೀರ್ತನೆಗಳನ್ನು ಹಾಡಿದರೆ, ಇನ್ನೂ ಕೆಲವರು ನೃತ್ಯ ಮಾಡಿ ವಿಜಯ ದಿವಸ ಆಚರಿಸಿದರು.

ಪಂಜಾಬ್‌ನ ಮೋಗಾಕ್ಕೆ ಹೊರಟಿದ್ದ ರೈತ ಕುಲ್ಜೀತ್ ಸಿಂಗ್ ಔಲಂಖ್ ಅವರು, ವಿವಿಧ ರಾಜ್ಯಗಳಿಗೆ ಹೊರಟಿದ್ದ ತಮ್ಮ ಸಹ ಪ್ರತಿಭಟನಕಾರರನ್ನು ಅಪ್ಪಿಕೊಂಡು ಬೀಳ್ಕೊಟ್ಟರು.

‘ಸಿಂಘು ಗಡಿಯು ಕಳೆದ ಒಂದು ವರ್ಷದಿಂದ ನಮ್ಮ ಮನೆಯಾಗಿತ್ತು. ಈ ಚಳವಳಿಯು ನಮ್ಮನ್ನು ಒಂದಾಗಿಸಿದೆ. ಧರ್ಮ, ಜಾತಿ, ಪಂಥಗಳೆನ್ನದೇ, ನಾವು ಕೃಷಿ ಕಾನೂನುಗಳ ವಿರುದ್ಧ ಒಟ್ಟಾಗಿ ಹೋರಾಟ ನಡೆಸಿದೆವು. ಇದೊಂದು ಐತಿಹಾಸಿಕ ಚಳವಳಿ ಹಾಗೂ ಯಶಸ್ಸು’ ಎಂದು ಔಲಂಖ್ ಹೇಳಿದರು.

‘ಗುರು ಸಾಹಿಬ್ ಆಶೀರ್ವಾದದಿಂದ, ನಾವು ಸರ್ಕಾರದ ಮೇಲೆ ಒತ್ತಡ ಹೇರಿ ಕೃಷಿ ಕಾಯ್ದೆ ರದ್ದುಗೊಳಿಸುವಲ್ಲಿ
ಯಶಸ್ಸು ಕಂಡಿದ್ದೇವೆ’ ಎಂದು ಭಟಿಂಡಾದ ಹರ್ಜಿತ್ ಕೌರ್ ಹೇಳಿದರು. ಊರಿಗೆ ಹೊರಡುವ ಮುನ್ನ ಅವರುಕೀರ್ತನೆಗಳನ್ನು
ಹಾಡಿದರು.

ಪಂಜಾಬಿ ಯುವಕರ ಗುಂಪೊಂದು ‘ಭಾಂಗ್ಡಾ’ ನೃತ್ಯಕ್ಕೆ ಹೆಜ್ಜೆ ಹಾಕುತ್ತಿತ್ತು. ಇನ್ನೊಂದಿಷ್ಟು ಜನರು ಹೊರಡುವ ಮುನ್ನ ಭೋಜನಶಾಲೆಯಲ್ಲಿ ಬೆಳಗಿನ ಉಪಾಹಾರ ಸೇವಿಸುತ್ತಿದ್ದರು. ‘ಬಹುಶಃ ಇದು ಇಲ್ಲಿ ನಮ್ಮ ಕೊನೆಯ ಉಪಾಹಾರ. ಈ ಸ್ಥಳವನ್ನು ನಾವು ಎಂದಿಗೂ ಮರೆಯುವುದಿಲ್ಲ’ ಎಂದು ಸಂಗ್ರೂರ್‌ನ ರೈತ ಸರೇಂದ್ರ ಸಿಂಗ್ ಹೇಳಿದರು.

ಉತ್ತರ ಪ್ರದೇಶದ ಮುಜಫ್ಫರ್‌ ನಗರದ ತಮ್ಮ ಊರಿಗೆ ಹೊರಡುವ ಸಂಭ್ರಮದಲ್ಲಿದ್ದ ರೈತ ಜಿತೇಂದ್ರ ಚೌಧರಿ ಅವರು ಗಾಜಿಪುರ ಗಡಿಯಲ್ಲಿ ತಮ್ಮ ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಸಜ್ಜುಗೊಳಿಸುತ್ತಿದ್ದರು. ‘ನೂರಾರು ಉತ್ತಮ ನೆನಪುಗಳೊಂದಿಗೆ ಹೋಗುತ್ತಿದ್ದೇನೆ. ಈ ಐತಿಹಾಸಿಕ ಚಳವಳಿಯಲ್ಲಿ ಭಾಗಿಯಾಗಿದ್ದು ನನ್ನ ಅದೃಷ್ಟ. ಹೊಸ ಸ್ನೇಹಿತರು ಇಲ್ಲಿ ಸಿಕ್ಕಿದ್ದಾರೆ. ವಿಭಿನ್ನ ಅನುಭವಗಳನ್ನು ಹೊತ್ತು ಮರಳುತ್ತಿದ್ದೇನೆ’ ಎಂದು ಅವರು ಸಂಭ್ರಮದಿಂದ ಹೇಳಿದರು.

-ರೈತರು ತಮ್ಮ ಊರುಗಳಿಗೆ ವಾಪಸಾಗಲು ಶುರು ಮಾಡುತ್ತಿದ್ದಂತೆ, ದೆಹಲಿ–ಸೋನಿಪತ್–ಕರ್ನಾಲ್ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಯಿತು. ಪಂಜಾಬ್, ಹರಿಯಾಣಕ್ಕೆ ತೆರಳುವ ನೂರಾರು ಟ್ರ್ಯಾಕ್ಟರ್‌ಗಳು ಸಾಲುಗಟ್ಟಿದ್ದವು. ದೆಹಲಿ–ರೋಹ್ಟಕ್ ಗಡಿಯಲ್ಲೂ ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ಸಂಚಾರ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು

-ಹಿಸ್ಸಾನರ್ ಧಂಡೂರ್ ಗ್ರಾಮಪದ ಸಮೀಪ ರೈತರ ಟ್ರ್ಯಾಕ್ಟರ್‌ಗೆ ಟ್ರಕ್ ಡಿಕ್ಕಿಯಾಗಿ, ಪಂಜಾಬ್‌ನ ಇಬ್ಬರು ಮೃತಪಟ್ಟಿದ್ದಾರೆ

-ಸಿಂಘು ಗಡಿಯಲ್ಲಿ ಕೆಲವೇ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಇದ್ದರು. ‘ಶ್ರದ್ಧೆಯಿಂದ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ಪ್ರತಿಭಟನಕಾರರು ಸ್ಥಳ ತೆರವು ಮಾಡುವುದರಿಂದ ವಾಹನ ಸವಾರರಿಗೆ ಸಾಕಷ್ಟು ನೆರವಾಗಲಿದೆ’ ಎಂದು ಸಿಂಘು ಗಡಿಯಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ತಿಳಿಸಿದರು

-ಸಿಖ್ ಸಮುದಾಯದ ಸಮುದಾಯ ಅಡುಗೆಮನೆಗಳಲ್ಲಿ ಕೊಳೆಗೇರಿಗಳ ಜನರು ಹಾಗೂ ಬಡ ಮಕ್ಕಳು ಈವರೆಗೂ ನಿತ್ಯ ಊಟ ಮಾಡುತ್ತಿದ್ದರು. ರೈತರ ಪ್ರತಿಭಟನೆ ಮುಗಿದಿದ್ದು, ಮಕ್ಕಳು ತಮ್ಮ ನಿತ್ಯದ ಊಟಕ್ಕೆ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಿದೆ

ಅದ್ದೂರಿ ಸ್ವಾಗತ

ಒಂದು ವರ್ಷದ ಪ್ರತಿಭಟನೆ ಮುಗಿಸಿ ತಮ್ಮ ಊರುಗಳಿಗೆ ವಾಪಸಾದ ರೈತರನ್ನು ಬರಮಾಡಿಕೊಳ್ಳಲು ಟೋಲ್ ಪ್ಲಾಜಾ ಹಾಗೂ ಹೆದ್ದಾರಿಯ ಹಲವು ಕಡೆಗಳಲ್ಲಿ ಗ್ರಾಮಸ್ಥರು ಸೇರಿದ್ದರು. ರೈತರಿಗೆ ಹೂ ನೀಡಿ ಸ್ವಾಗತಿಸಿ, ಲಡ್ಡು, ಬರ್ಫಿ ಹಂಚಿ ಸಂಭ್ರಮಿಸಿದರು. ಪಂಜಾಬ್‌ನ ಖನೌರಿ ಎಂಬಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಬಸ್ತಾರ ಟೋಲ್ ಪ್ಲಾಜಾ ಮತ್ತು ಅಂಬಾಲ ಸಮೀಪದ ಶಂಭು ಗಡಿಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ತಮ್ಮ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಕೆಲವರು ಸಿಂಘು ಗಡಿಗೆ ಧಾವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT